Advertisement

Mangaluru: ವಿದ್ಯಾರ್ಥಿಯ ಶೈಕ್ಷಣಿಕ ಖಾತೆ ನೋಂದಣಿಗೆ “ಅಪಾರ್‌’ ವೇಗ!

01:26 AM Dec 04, 2024 | Team Udayavani |

ಮಂಗಳೂರು: ರಾಜ್ಯಾದ್ಯಂತ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ 12 ಅಂಕಿಯ ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (ಅಪಾರ್‌) ಗುರುತಿನ ಚೀಟಿ ವಿತರಿಸುವ ಕಾರ್ಯಕ್ಕೆ ಈಗಷ್ಟೇ ವೇಗ ದೊರಕಿದ್ದು, ಪ್ರತೀ ಶಾಲೆಗಳಲ್ಲಿ ಇದರ ಚಟುವಟಿಕೆ ಬಿರುಸು ಪಡೆದಿದ್ದು, ಇನ್ನಷ್ಟು ವೇಗ ನೀಡಲು ಇಲಾಖೆ ನಿರ್ಧರಿಸಿದೆ.

Advertisement

ರಾಜ್ಯದ ಒಟ್ಟು 75,960 ಶಾಲೆಗಳ 1.04 ಕೋಟಿ ವಿದ್ಯಾರ್ಥಿಗಳಿಗೆ ಅಪಾರ್‌ ಐಡಿ ಕಾರ್ಡ್‌ ನೀಡಲು ಉದ್ದೇಶಿಸಲಾಗಿದೆ. ಇಲ್ಲಿಯವರೆಗೆ 10.13 ಲಕ್ಷ ವಿದ್ಯಾರ್ಥಿಗಳ (ಶೇ.9.68) ನೋಂದಣಿ ಆಗಿದೆ. ಆಧಾರ್‌ ಕಾರ್ಡ್‌ನಂತೆ ಅಪಾರ್‌ ಕಾರ್ಡ್‌ ಕೂಡ ವಿಶಿಷ್ಟ 12 ಅಂಕಿಯನ್ನು ಹೊಂದಿರುತ್ತದೆ.

ಪ್ರತೀ ವಿದ್ಯಾರ್ಥಿ ಅಪಾರ್‌ ಐಡಿ ಮಾಡಬೇಕಾಗಿರುವ ಕಾರಣದಿಂದ ಅಪಾರ್‌ ಕಾರ್ಡ್‌ ನೋಂದಣಿ ಒಪ್ಪಿಗೆ ಪತ್ರವನ್ನು ಇದೀಗ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅಪಾರ್‌ ಗುರುತಿನ ಚೀಟಿಗೆ ವಿದ್ಯಾರ್ಥಿಗಳ ಹೆಸರು ನೋಂದಣಿಗೆ ಮೊದಲು ಪೋಷಕರ ಒಪ್ಪಿಗೆ ಕಡ್ಡಾಯ. ಮನೆಗೆ ನೀಡುವ ಒಪ್ಪಿಗೆ ಪತ್ರವನ್ನು ಪೋಷಕರು ಭರ್ತಿ ಮಾಡಿ ಜನನ ಪ್ರಮಾಣ ಪತ್ರ, ವಿದ್ಯಾರ್ಥಿಯ, ಪೋಷಕರ ಆಧಾರ್‌ ಪ್ರತಿಗಳಿಗೆ ಸಹಿ ಮಾಡಿ ಶಾಲೆಗೆ ವಾಪಸ್‌ ನೀಡುವ ಪ್ರಕ್ರಿಯೆ ರಾಜ್ಯಾದ್ಯಂತ ಶಾಲೆಗಳಲ್ಲಿ ನಡೆಯುತ್ತಿದೆ. ಜತೆಗೆ ಕೆಲವು ಶಾಲೆಗಳಿಗೆ ಖುದ್ದಾಗಿ ಪೋಷಕರು ಬಂದು ಅರ್ಜಿ ಭರ್ತಿ ಮಾಡಿ ನೀಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಹೆಚ್ಚುವರಿ ಮಾಹಿತಿ ನೀಡುವ ಕಾರಣದಿಂದ ಪೋಷಕರ ಸಭೆಯನ್ನು ತುರ್ತಾಗಿ ಕರೆಯಲಾಗಿದೆ.

ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲು ಶಿಫಾರಸು ಮಾಡಲಾಗಿತ್ತು. ಅದರಂತೆ ಎಲ್ಲ ವಿದ್ಯಾರ್ಥಿಗಳಿಗೆ ಅಪಾರ್‌ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಇದು ಅನುಷ್ಠಾನ ಹಂತದಲ್ಲಿದೆ. ರಾಜ್ಯದಲ್ಲಿ ಕೆಲವೇ ದಿನಗಳ ಮೊದಲಷ್ಟೇ ಇದು ಆರಂಭಗೊಂಡಿದೆ.

ಶೇ.62.19 ಶಾಲೆಗಳಲ್ಲಿ ಇನ್ನಷ್ಟೇ ಆರಂಭ
ಈ ಮಧ್ಯೆ ನೋಂದಣಿ ಬಗ್ಗೆ ಪೋಷಕರಲ್ಲಿ ಪೂರ್ಣ ಮಾಹಿತಿ ಇಲ್ಲದ ಕಾರಣದಿಂದ ಕೆಲವರು ಶಾಲೆಗಳಲ್ಲಿ ಆಕ್ಷೇಪ ವ್ಯಕ್ತಪಡಿಸುವ ಘಟನೆಯೂ ಕೆಲವೆಡೆ ನಡೆಯುತ್ತಿದೆ. ಈ ವೇಳೆ ಶಿಕ್ಷಣ ಇಲಾಖೆ, ಶಾಲಾ ಅಧ್ಯಾಪಕರು ಕೆಲವು ಪೋಷಕರಿಗೆ ಪೂರ್ಣವಾಗಿ ಮನದಟ್ಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕ ಇದನ್ನು ಅನುಷ್ಠಾನಿಸಬೇಕು ಎಂದು ಕೆಲವು ಪೋಷಕರು ಒತ್ತಾಯಿಸಿದ್ದಾರೆ. ಹೀಗಾಗಿಯೇ ರಾಜ್ಯದ 75,960 ಶಾಲೆಗಳ ಪೈಕಿ 47,240 ಶಾಲೆಗಳಲ್ಲಿ (ಶೇ. 62.19)ಅಪಾರ್‌ ನೋಂದಣಿ ಇನ್ನಷ್ಟೇ ಆರಂಭವಾಗಬೇಕಿದೆ.

Advertisement

ಏನಿದು ಅಪಾರ್‌ ?
ಭಾರತದಲ್ಲಿ ಆಧಾರ್‌ ಮಾನ್ಯತೆಯನ್ನು ಪಡೆದಿರುವಂತೆಯೇ, ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಕಾಪಿಡಲು ಜಾರಿಗೆ ತಂದಿರುವುದೇ ಅಪಾರ್‌. ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ ಇನ್ನು ಮುಂದೆ ಅಪಾರ್‌ನಲ್ಲಿ ಇರಲಿದೆ. ಇದು ಭಾರತದ ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾತಿ ಪಡೆಯುವಾಗಲೂ ಆಧಾರವಾಗಲಿದೆ. ವಿದ್ಯಾರ್ಥಿಯ ಶೈಕ್ಷಣಿಕ ಟ್ರಾÂಕ್‌ ಅನ್ನು ಇದರಿಂದ ಪರಿಶೀಲಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿ ಕಲಿಯುವ ಶಾಲೆಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಡೇಟಾ, ಸಾಧನೆಗಳು ಹಾಗೂ ಚಟುವಟಿಕೆಗಳನ್ನು ರೆಕಾರ್ಡ್‌ ಮಾಡಿ ನಿರ್ವಹಣೆ ಮಾಡಲಾಗುತ್ತದೆ. ಜತೆಗೆ ವಿದ್ಯಾರ್ಥಿವೇತನ ವಿವರವೂ ಇದರಲ್ಲೇ ಭದ್ರವಾಗಲಿದೆ. ವಿದ್ಯಾರ್ಥಿಯ ಐಡಿ ಬಳಸಿ ಇದನ್ನು ಪರಿಶೀಲಿಸಬಹುದು.

“ಅಪಾರ್‌ ನೋಂದಣಿ ಪ್ರಗತಿಯಲ್ಲಿ’
ಅಪಾರ್‌ ಪ್ರತೀ ವಿದ್ಯಾರ್ಥಿಗೆ ವಿಶಿಷ್ಟವಾದ ಹಾಗೂ ಶಾಶ್ವತವಾದ 12 ಅಂಕಿಯ ಐಡಿಯನ್ನು ನೀಡುತ್ತದೆ. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಸಹಿತ ಸಂಪೂರ್ಣ ಮಾಹಿತಿಯ ಸಮಗ್ರ ದಾಖಲೆ ಇದರಲ್ಲಿರಲಿದೆ. ಅಪಾರ್‌ ಐಡಿಯು ಅವರ ಶೈಕ್ಷಣಿಕ ವೃತ್ತಿಜೀವನದ ಉದ್ದಕ್ಕೂ ವಿದ್ಯಾರ್ಥಿಯೊಂದಿಗೆ ಬಳಕೆಯಾಗಲಿದೆ. ಎಲ್ಲ ಶಾಲೆಗಳಲ್ಲಿ ನೋಂದಣಿ ಪ್ರಕ್ರಿಯೆ ಈಗ ನಡೆಯುತ್ತಿದೆ.
-ವೆಂಕಟೇಶ ಪಟಗಾರ, ಗಣಪತಿ ಡಿಡಿಪಿಐ, ದಕ್ಷಿಣ ಕನ್ನಡ, ಉಡುಪಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next