Advertisement

ಹೊಗರ್ತಿಯಿಂದ ಗುಳೆ ಹೊಂಟಾರ ಜನ !

01:23 PM May 10, 2019 | Team Udayavani |

ಬೈಲಹೊಂಗಲ: ತಾಲೂಕಿನ ಹೊಗರ್ತಿ ಗ್ರಾಮದಲ್ಲಿ ನೀರಿಲ್ಲದೇ ಜನ ಊರು ಬಿಟ್ಟು ಗುಳೆ ಹೋಗುವ ಸ್ಥಿತಿ ಉದ್ಭವಿಸಿದೆ.

Advertisement

ಕುಡಿಯಲು ಹೊರವಲಯದಲ್ಲಿರುವ ಹೊಲದ ಪಂಪ್‌ಸೆಟ್ ನೀರೇ ಗತಿ. ಮದುವೆ ಕಾರ್ಯಕ್ರಮಗಳಿಗೆ ನೀರಿಲ್ಲದೇ ಪರದಾಟ. ದಿನಂಪ್ರತಿ ನೀರಿನ ಪಡಿಪಾಟಲಿನಿಂದ ಒದ್ದಾಡಿ ಜನ ಸೋತು ಹೋಗಿದ್ದಾರೆ. ಸುತಗಟ್ಟಿ ಗ್ರಾಪಂ ವ್ಯಾಪ್ತಿಯ ಹೋಗರ್ತಿ ಗ್ರಾಮವು ಸುಮಾರು 1000 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಹಳೆಯ ಸಾರ್ವಜನಿಕ ಬಾವಿ ಮುಚ್ಚಿದೆ. ನೀರು ತರಲು ಗ್ರಾಮದಿಂದ 2 ಕಿಮೀ ದೂರದ ಕಲ್ಲಪ್ಪಜ್ಜನ ಗುಡಿಯ ಬಳಿಯ ರೈತರ ಹೊಲಗಳಿಂದ ನೀರು ತರುವ ಪರಿಸ್ಥಿತಿ ಇದೆ. ಮನೆಯಲ್ಲಿ ದ್ವಿಚಕ್ರ ವಾಹನ ಇದ್ದವರು ಅದರ ಮೂಲಕ ನೀರು ತಂದರೆ. ವಾಹನ ಇಲ್ಲದವರು 2 ಕಿ.ಮೀ ನಡೆದುಕೊಂಡು ಹೋಗಿಯೇ ನೀರು ತುಂಬಿ ತರುವ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ನಮ್ಮ ಕುಟುಂಬಕ್ಕೆ ನೀರು ಸಿಗುತ್ತಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಕುಟುಂಬ ಸಮೇತ ದೂರದ ಗೋವಾಕ್ಕೆ ದುಡಿಯಲು ಹೋಗುತ್ತೇವೆ. ಊರಲ್ಲಿ ನೀರು ಸಿಗುವುದಿಲ್ಲ ಎಂದು ತಿಳಿದ ಬೇರೆ ಊರಿನ ಜನ ಇಲ್ಲಿಗೆ ಹೆಣ್ಣು ಕೊಟ್ಟು ಮದುವೆ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಹೊಗರ್ತಿ ಗ್ರಾಮದ ಬಸಪ್ಪ ನಿಂಗಪ್ಪ ನಂದೆಪ್ಪನ್ನವರ ದೂರುತ್ತಾರೆ. ಮನೆಯಲ್ಲಿ ಮಗಳು ಬಾಣಂತಿ ಇರುವುದರಿಂದ ನೀರು ತರಲು ದೂರದ ಹೊಲಗಳಿಗೆ ಅಲೆಯಬೇಕಾಗಿದೆ ಎಂದು ಅದೇ ಗ್ರಾಮದ ಮಲ್ಲವ್ವ ಕಂಬಾರ ಸಮಸ್ಯೆ ತೋಡಿಕೊಳ್ಳುತ್ತಾರೆ.

ಸ್ಥಳೀಯ ಮುಖಂಡರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇಲ್ಲದ ಆಶ್ವಾಸನೆ ಕೊಟ್ಟು ಹೋದವರು ಮರಳಿ ಬಂದಿಲ್ಲ. ನೀರಿನ ಸಮಸ್ಯೆ ಪರಿಹರಿಸುತ್ತೇನೆಂದು ಹೇಳಿ ಹೋದವರು ಪತ್ತೆ ಇಲ್ಲ. ಇಂಥವರನ್ನು ಆಯ್ಕೆ ಮಾಡುವುದು ಜನ ಯಾವ ಕಾರಣಕ್ಕೆ ಎಂದು ಗ್ರಾಮದ ಮಲ್ಲವ್ವ ಕಲ್ಲನಾಯ್ಕ, ಸತ್ತೆವ್ವಾ ಮರೆಪ್ಪನ್ನವರ ದೂರುತ್ತಾರೆ.

ಹೊಗರ್ತಿಯಲ್ಲಿ ಬೊರವೆಲ್ಗಳಿಲ್ಲ. ಇಲ್ಲಿ ಇದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಎರಡು ದಿನಕ್ಕೊಮ್ಮೆ ತಾಲೂಕಾ ಆಡಳಿತ ಟ್ಯಾಂಕರ್‌ ಮೂಲಕ ನಾಮಕಾವಸ್ಥೆ ನೀರು ತಂದು ಬಿಟ್ಟರೂ ಯಾರಿಗೂ ಸಾಕಾಗುವುದಿಲ್ಲ. ಇದಕ್ಕಾಗಿ ಸುತಗಟ್ಟಿ ಗ್ರಾಪಂ ಅನುದಾನಲ್ಲಿ ಪ್ರತಿ ತಿಂಗಳು 45 ಸಾವಿರ ರೂ. ವ್ಯಯಿಸಬೇಕೆಂದು ತಾಲೂಕಾ ಆಡಳಿತ ಹೇಳಿರುವುದರಿಂದ ಮುಂದಿನ ದಿನಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ತುಂಬಲು ಗ್ರಾಪಂನಿಂದ ಸಾಧ್ಯವಾಗದೇ ಟ್ಯಾಂಕರ್‌ ನೀರಿನ ವ್ಯವಸ್ಥೆ ನಿಂತು ಹೋಗುವ ಸಂಭವವಿದೆ. 2004ರಲ್ಲಿ ನಿರ್ಮಿಸಲಾದ ಹಣಮನಟ್ಟಿ ಕ್ರಾಸ್‌ ಬಳಿಯ ಸುತಗಟ್ಟಿ ಗ್ರಾಪಂನ 50 ಸಾವಿರ ಲೀ. ಸಂಗ್ರಹಣೆಯ ನೀರಿನ ಘಟಕಕ್ಕೆ ಸಾಕಾಗುವಷ್ಟು ನೀರಿನ ಸಂಗ್ರಹ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ದೂರಿದರು.

Advertisement

ಸುತಗಟ್ಟಿ ಗ್ರಾಪಂಗೆ ನೀರಿನ ಮೂಲಗಳಿಲ್ಲದಿರುವುದರಿಂದ ಹೋಗರ್ತಿ ಬಳಿಯ ನೀರಿನ ಘಟಕಕ್ಕೆ ಕೊಳ್ಳಾನಟ್ಟಿ ಗ್ರಾಮದಲ್ಲಿ 3 ಬೋರ್‌ವೆಲ್ ಕೊರೆಸಿ ಪೈಪ್‌ಲೈನ್‌ ಮೂಲಕ ಹೊಗರ್ತಿಗೆ ನೀರು ಬೀಡಲಾಗುತ್ತಿತ್ತು. ಆದರೆ ಕೊಳ್ಳಾನಟ್ಟಿ ಗ್ರಾಮವು ದೇಶನೂರ ಗ್ರಾಪಂ ವ್ಯಾಪ್ತಿಗೆ ಸೇರಿರುವುದರಿಂದ ಕೊಳ್ಳಾನಟ್ಟಿ ಗ್ರಾಮದಲ್ಲಿಯ ಬೊರವೆಲ್ಗಳಿಂದ ಹೋಗರ್ತಿಗೆ ಹೋಗುತ್ತಿದ್ದ ನೀರಿನ ಸಂಪರ್ಕವನ್ನು ಇತ್ತಿಚೆಗೆ ಸ್ಥಗಿತಗೊಳಿಸಲಾಗಿದೆ. ಇದು ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಗ್ರಾಮಸ್ಥರು. ಕೂಡಲೇ ಹೋಗರ್ತಿಗೆ ಸುತಗಟ್ಟಿ ಗ್ರಾಪಂ, ತಾಲೂಕಾ ಆಡಳಿತದಿಂದ ವತಿಯಿಂದ ಹೆಚ್ಚಿನ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೊಗರ್ತಿಯಿಂದ ಗುಳೆ ಹೊಂಟಾರ ಜನ !

• ಹೆಚ್ಚಿದೆ ನೀರಿನ ಸಮಸ್ಯೆ

• 2ಕಿಮೀ ಅಲೆದಾಟ

• ಹೇಳ ಹೆಸರಿಲ್ಲದೇ ನಾಪತ್ತೆಯಾದ ನಾಯಕರು

•ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next