Advertisement

ಹೊಡಿ ಹಂಡ್ರೆಡ್‌!

10:30 AM Jul 25, 2017 | Team Udayavani |

ಒಬ್ಬ ಸಂಗೀತ ನಿರ್ದೇಶಕ ಬರೋಬ್ಬರಿ ನೂರು ಚಿತ್ರಗಳನ್ನು ಪೂರೈಸುವುದು ಅಂದರೆ ಸುಲಭದ ಮಾತಲ್ಲ. ಒಂದೊಂದು ಚಿತ್ರದಲ್ಲೂ ವಿಭಿನ್ನ ಸಂಗೀತ ಕೊಡುವ ಮೂಲಕ ಹೊಸತನದ ಹಾಡುಗಳನ್ನು ಕಟ್ಟಿಕೊಡುವುದರ ಜತೆಗೆ ತನ್ನತನ ಉಳಿಸಿಕೊಂಡರೆ ಮಾತ್ರ, ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಮೈಲೇಜ್‌ ಹೆಚ್ಚಿಸಿಕೊಳ್ಳಲು ಸಾಧ್ಯ. ಅಂತಹ ಬೇಡಿಕೆ ಉಳಿಸಿಕೊಂಡು, ಈಗ ನೂರು ಚಿತ್ರಗಳಿಗೆ ಸಂಗೀತ ಕೊಡುವ ಮೂಲಕ ಸಾಧನೆ ಮಾಡಿದ್ದಾರೆ ವಿ.ಹರಿಕೃಷ್ಣ. ಗಣೇಶ್‌ ಅಭಿನಯದ “ಮುಗುಳು ನಗೆ’ ಚಿತ್ರ ಹರಿಕೃಷ್ಣ ಅವರು ಸಂಗೀತ ನೀಡಿರುವ ನೂರನೇ ಚಿತ್ರ ಎಂಬುದು ವಿಶೇಷ. 

Advertisement

1990 ರ ದಶಕದಲ್ಲಿ ಹರಿಕೃಷ್ಣ ಅವರು ಹಲವು ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಕೀ ಬೋರ್ಡ್‌ ಪ್ಲೇಯರ್‌ ಆಗಿದ್ದವರು. ಅದೇ ಸಮಯದಲ್ಲಿ ಹಲವು ಆಲ್ಬಂಗಳಿಗೆ ಸಂಗೀತ ಮಾಡಿ, ಜಿಂಗಲ್ಸ್‌, ಶಾರ್ಟ್ಸ್ ಫಿಲ್ಮ್ ಹೀಗೆ ಒಂದಷ್ಟು ಸಂಗೀತದ ಕೆಲಸ ಮಾಡುತ್ತಲೇ, 2006 ರಲ್ಲಿ ದರ್ಶನ್‌ ಅವರ ತೂಗುದೀಪ ಪ್ರೊಡಕ್ಷನ್ಸ್‌ನ “ಜೊತೆ ಜೊತೆಯಲಿ’ ಸಿನಿಮಾಗೆ ಸಂಗೀತ ನೀಡುವ ಮೂಲಕ ಸಂಗೀತ ನಿರ್ದೇಶಕರಾಗಿ ಎಂಟ್ರಿಕೊಟ್ಟರು.

ಅಲ್ಲಿಂದ ಇಲ್ಲಿಯವರೆಗೆ ಹರಿಕೃಷ್ಣ ಹಿಂದಿರುಗಿ ನೋಡಿಲ್ಲ. ಈ ಒಂದು ದಶಕದಲ್ಲಿ ಅವರು ನೂರು ಸಿನಿಮಾಗಳಿಗೆ ಸಂಗೀತ ನೀಡಿರುವುದು ನಿಜಕ್ಕೂ ಮೈಲಿಗಲ್ಲು. ಹಲವು ಹಿಟ್‌ ಹಾಡುಗಳನ್ನು ಕೊಟ್ಟಿರುವ ಹರಿಕೃಷ್ಣ, ಕನ್ನಡದ ಬಹುತೇಕ ಸ್ಟಾರ್‌ ನಟರ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ ಎಂಬುದು ಹೆಗ್ಗಳಿಕೆ. ಹರಿಕೃಷ್ಣ ಅವರು ಸಂಗೀತ ನಿರ್ದೇಶನದ ಜತೆಗೆ ನಿರ್ಮಾಣಕ್ಕೂ ಕೈ ಹಾಕಿದರು ಎಂಬುದು ಇನ್ನೊಂದು ವಿಶೇಷ.

ಧನಂಜಯ್‌ ಹಾಗೂ ಶ್ರುತಿ ಹರಿಹರನ್‌ ಅಭಿನಯದ “ರಾಟೆ’ ಚಿತ್ರದ ನಿರ್ಮಾಣದಲ್ಲಿ ಹರಿಕೃಷ್ಣ ಅವರೂ ಕೈ ಜೋಡಿಸಿದ್ದರು. ಅದಷ್ಟೇ ಅಲ್ಲ, ತಾವೇ “ಡಿ’ ಹೆಸರಿನ ಆಡಿಯೋ ಸಂಸ್ಥೆಯೊಂದನ್ನೂ ಹುಟ್ಟುಹಾಕಿದ್ದಾರೆ. ಈ ಜರ್ನಿಯಲ್ಲಿ ಹರಿಕೃಷ್ಣ ಅವರು ಸಂಗೀತ ನಿರ್ದೇಶಿಸಿದ “ಸಾರಥಿ’, “ರಾಜ್‌ ದಿ ಶೋ ಮ್ಯಾನ್‌’, “ಜಾಕಿ’, “ಬುಲ್‌ ಬುಲ್‌’, “ಡ್ರಾಮಾ’, “ಮಿಸ್ಟರ್‌ ಅಂಡ್‌ ಮಿಸೆಸ್‌ ರಾಮಾಚಾರಿ’ ಹೀಗೆ ಇನ್ನೂ ಕೆಲ ಚಿತ್ರಗಳಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಸಿನಿಮಾಗಳ ಜತೆಯಲ್ಲಿ ಎರಡು ತೆಲುಗು ಚಿತ್ರಗಳಿಗೂ ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ. ಅದೇನೆ ಇರಲಿ, ನೂರು ಚಿತ್ರಗಳಿಗೆ ಸಂಗೀತ ನೀಡುವುದರ ಜತೆಯಲ್ಲಿ ಈಗಲೂ ಅದೇ ಸ್ಥಾನ ಉಳಿಸಿಕೊಂಡು ಬೇಡಿಕೆ ಹೆಚ್ಚಿಸಿಕೊಂಡಿರುವ ಹರಿಕೃಷ್ಣ ಅವರ ಕೈಯಲ್ಲಿ ಇನ್ನು ಒಂದಷ್ಟು ಸಿನಿಮಾಗಳಿವೆ. ಸದ್ಯಕ್ಕೆ ಹರಿಕೃಷ್ಣ ಸಂಗೀತ ನೀಡಿರುವ “ಮುಗುಳು ನಗೆ’ ಬಿಡುಗಡೆಯ ತಯಾರಿಯಲ್ಲಿದೆ. ಆ ಚಿತ್ರದ “ಹೊಡಿ ಒಂಬತ್‌’ ಹಾಡು ಇದೀಗ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next