Advertisement

ವಿಶ್ವಕಪ್‌ ಹಾಕಿ 2023: ಇಂಗ್ಲೆಂಡ್‌ ಸವಾಲು ಎದುರಿಸಲು ಭಾರತ ಸಿದ್ಧ

11:13 PM Jan 14, 2023 | Team Udayavani |

ರೂರ್ಕೆಲ: ಬಲಿಷ್ಠ ಸ್ಪೇನ್‌ ತಂಡವನ್ನು ಉರುಳಿಸಿ ವಿಶ್ವಕಪ್‌ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಆರಂಭಿಸಿರುವ ಭಾರತ ತಂಡವು ರವಿವಾರ ಇಂಗ್ಲೆಂಡ್‌ ತಂಡದ ಸವಾಲನ್ನು ಎದುರಿಸಲು ಸಜ್ಜಾಗಿದೆ.

Advertisement

ತಪ್ಪುರಹಿತ ಆಟದ ಪ್ರದರ್ಶನ ನೀಡಿ ಸ್ಪೇನ್‌ ತಂಡವನ್ನು 2-0 ಗೋಲುಗಳಿಂದ ಕೆಡಹಿದ ಭಾರತವು ರವಿವಾರ ಕಠಿನ ತಂಡಗಳಲ್ಲಿ ಒಂದಾದ ಇಂಗ್ಲೆಂಡ್‌ ತಂಡದೆದುರು ಗೆಲ್ಲುವ ವಿಶ್ವಾಸದಲ್ಲಿದೆ.

ಸ್ಪೇನ್‌ ವಿರುದ್ಧ ಭಾರತ ಆರಂಭದ ಎರಡು ಕ್ವಾರ್ಟರ್‌ ಹೋರಾಟದಲ್ಲಿ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿತು. ಸ್ಥಳೀಯ ಹೀರೊ ಅಮಿತ್‌ ರೋಹಿದಾಸ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಖಾತೆ ತೆರೆದಿದ್ದರೆ ಹಾರ್ದಿಕ್‌ ಸಿಂಗ್‌ ಏಕಾಂಗಿ ಹೋರಾಟ ದಿಂದ ಮುನ್ನಡೆಯನ್ನು 2-0ಕ್ಕೇರಿ ಸಿದ್ದರು. ಆಬಳಿಕ ನಾಯ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಉಪನಾಯಕ ರೋಹಿದಾಸ್‌ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಮಹತ್ವ ನೀಡಿದರು.

ಸ್ಪೇನ್‌ಗಿಂತಲೂ ಇಂಗ್ಲೆಂಡ್‌ ಬಲಿಷ್ಠ ತಂಡವಾಗಿದ್ದರಿಂದ ಭಾರತ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಮಹತ್ವ ನೀಡುವುದು ಅತೀ ಮುಖ್ಯವಾಗಿದೆ. ರಕ್ಷಣೆಯ ಜತೆ ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ ಭಾರತ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇಂಗ್ಲೆಂಡ್‌ ಗುರುವಾರ ನಡೆದ ಪಂದ್ಯದಲ್ಲಿ ವೇಲ್ಸ್‌ ತಂಡವನ್ನು 5-0 ಗೋಲುಗಳಿಂದ ಸೋಲಿಸಿತ್ತು.

ಮೊದಲ ಪಂದ್ಯದಲ್ಲಿ ಗೆದ್ದಿರುವುದು ಒಳ್ಳೆಯದಾಗಿದೆ. ರಕ್ಷಣಾತ್ಮಕ ಆಟದ ಪ್ರದರ್ಶನ ಮತ್ತು ಚೆಂಡಿನ ನಿಯಂತ್ರಣವನ್ನು ಯಶಸ್ವಿಯಾಗಿ ನಿಭಾಯಿಸಿರುವುದು ಸಮಾಧಾನ ತಂದಿದೆ. ಮೊದಲ ಪಂದ್ಯದಲ್ಲಿ ಕೆಲವು ಆಟಗಾರರು ತಮ್ಮ ಶ್ರೇಷ್ಠ ನಿರ್ವಹಣೆ ನೀಡಲಿಲ್ಲ. ಆದರೆ ವಿಶ್ವಕಪ್‌ನಂತಹ ಪಂದ್ಯಗಳಲ್ಲಿ ಎಲ್ಲರೂ ಸಂಘಟಿತ ಹೋರಾಟ ನೀಡುವುದು ಅತ್ಯಗತ್ಯ ಎಂದು ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

Advertisement

ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಭಾರತ ಮುಂದಿನ ಸುತ್ತಿಗೇರುವ ಅವಕಾಶ ಹೆಚ್ಚಲಿದೆ. ಇದಕ್ಕಾಗಿ ಭಾರತ ಶಕ್ತಿಮೀರಿ ಪ್ರಯತ್ನಿಸುವ ಸಾಧ್ಯತೆಯಿದೆ.

ಮೂರು ಬಾರಿ ಮುಖಾಮುಖಿ
ಭಾರತ ಮತ್ತು ಇಂಗ್ಲೆಂಡ್‌ ಕಳೆದ ವರ್ಷ ಮೂರು ಬಾರಿ ಮುಖಾಮುಖಿಯಾಗಿದ್ದವು. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಆಡಿದ ಈ ಹಿಂದಿನ ಪಂದ್ಯದಲ್ಲಿ ಭಾರತ 4-4 ಅಂತರದಿಂದ ಸಮಬಲ ಸ್ಥಾಪಿಸಿತ್ತು. ಎಫ್ಐಎಚ್‌ ಪ್ರೊ ಲೀಗ್‌ನ ಮೊದಲ ಲೆಗ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 3-3 ಡ್ರಾ ಸಾಧಿಸಿದ್ದ ಭಾರತ ಎಪ್ರಿಲ್‌ನಲ್ಲಿ ಮತ್ತೆ ಆಡಿದಾಗ 4-3 ಗೋಲುಗಳಿಂದ ಜಯಭೇರಿ ಬಾರಿಸಿತ್ತು. ಒಟ್ಟಾರೆ ಇಂಗ್ಲೆಂಡ್‌ ವಿರುದ್ಧ ಭಾರತ 10 ಪಂದ್ಯಗಳಲ್ಲಿ ಜಯಿಸಿದ್ದರೆ ಇಂಗ್ಲೆಂಡ್‌ 7ರಲ್ಲಿ ಗೆಲುವು ಸಾಧಿಸಿತ್ತು. ನಾಲ್ಕು ಪಂದ್ಯಗಳು ಡ್ರಾ ಆಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next