Advertisement

ವಿಶ್ವಕಪ್‌ ಹಾಕಿ 2023: ಬೆಲ್ಜಿಯಂ, ಜರ್ಮನಿಗೆ ಭರ್ಜರಿ ಗೆಲುವು

11:08 PM Jan 14, 2023 | Team Udayavani |

ಭುವನೇಶ್ವರ: ಹಾಲಿ ಚಾಂಪಿಯನ್‌ ಬೆಲ್ಜಿಯಂ ತಂಡವು “ಬಿ’ ಬಣದ ಪಂದ್ಯದಲ್ಲಿ ದಕ್ಷಿಣ ಕೊರಿಯ ತಂಡವನ್ನು 5-0 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌ ಜರ್ಮನಿ ತಂಡವು ಹಾಲಿ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌ ತಂಡವನ್ನು 3-0 ಗೋಲುಗಳಿಂದ ಸೋಲಿಸಿದೆ.

Advertisement

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬೆಲ್ಜಿಯಂ ಆಟಗಾರರು ಅದ್ಭುತ ಆಟದ ಪ್ರದರ್ಶನ ನೀಡಿದರು. ಆರಂಭದ ಎರಡು ಕ್ವಾರ್ಟರ್‌ ಅವಧಿಯ ಆಟದ ವೇಳೆ ಕೊರಿಯ ಆಟಗಾರರು ಬೆಲ್ಜಿಯಂ ಆಟಗಾರರಿಗೆ ಗೋಲು ಹೊಡೆಯಲು ಅವಕಾಶವನ್ನೇ ನೀಡಲಿಲ್ಲ. ಆದರೆ ವಿಶ್ವ ಮತ್ತು ಒಲಿಂಪಿಕ್‌ ಚಾಂಪಿಯನ್‌ ಬೆಲ್ಜಿಯಂ ಆಬಳಿಕ ಮೂರು ಮತ್ತು ನಾಲ್ಕನೇ ಅವಧಿಯ ಆಟದ ವೇಳೆ ಐದು ಗೋಲು ಹೊಡೆದು ಸಂಭ್ರಮಿಸಿತು. ಐವರು ಆಟಗಾರರು ಗೋಲು ಹೊಡೆದರು.

ಮೂರನೇ ಕ್ವಾರ್ಟರ್‌ನ ಮೊದಲ ನಿಮಿಷದಲ್ಲಿ ಹೆಂಡ್ರಿಕ್ಸ್‌ ಅಲೆಕ್ಸಾಂಡರ್‌ ಗೋಲು ಖಾತೆ ತೆರೆದರು. 42ನೇ ನಿಮಿಷದಲ್ಲಿ ಕಾಸಿನ್ಸ್‌ ಟಾಂಗುಯಿ, ವಾನ್‌ ಔಬೆಲ್‌ ಫ್ಲೋರೆಂಟ್‌ ಪೆನಾಲ್ಟಿ ಕಾರ್ನರ್‌ ಮೂಲಕ 49ನೇ ನಿಮಿಷದಲ್ಲಿ ಹೊಡೆದರು. 51 ಮತ್ತು 57ನೇ ನಿಮಿಷದಲ್ಲಿ ಸೆಬಾಸ್ಟಿಯೆನ್‌ ಮತ್ತು ಆರ್ಥರ್‌ ಗೋಲು ಹೊಡೆದು ತಂಡದ ಬೃಹತ್‌ ಗೆಲುವಿಗೆ ಕಾರಣರಾದರು.

ಜರ್ಮನಿಗೆ ಜಯ
ದಿನದ ನಾಲ್ಕನೇ ಪಂದ್ಯದಲ್ಲಿ ಜರ್ಮನಿ ತಂಡವು ಜಪಾನ್‌ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. 35ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗ್ರಾಮ್‌ಬುಶ್‌ ಮ್ಯಾಟ್ಸ್‌ ಗೋಲು ಹೊಡೆದು ತಂಡಕ್ಕೆ ಮುನ್ನಡೆ ಒದಗಿಸಿದರು. ಆಬಳಿಕ ಐದು ನಿಮಿಷ ಕಳೆಯುವಷ್ಟರಲ್ಲಿ ರುಹ್ರು ಕ್ರಿಸ್ಟೋಫ‌ರ್‌ ಗೋಲನ್ನು ಹೊಡೆದರೆ 48ನೇ ನಿಮಿಷದಲ್ಲಿ ಪ್ರಿನ್‌ಥೀಸ್‌ ತಂಡದ ಮೂರನೇ ಗೋಲು ಹೊಡೆದರು.

ನ್ಯೂಜಿಲ್ಯಾಂಡ್ಸ್‌ ಶುಭಾರಂಭ
ರೂರ್ಕೆಲ: ಮೂರು ಬಾರಿಯ ಚಾಂಪಿಯನ್‌ ನೆದರ್ಲೆಂಡ್ಸ್‌ ಮತ್ತು ನ್ಯೂಜಿಲ್ಯಾಂಡ್‌ ಪುರುಷರ ಹಾಕಿ ವಿಶ್ವಕಪ್‌ನ “ಸಿ’ ಬಣದ ಪಂದ್ಯಗಳಲ್ಲಿ ತಮ್ಮ ಎದುರಾಳಿ ಯೆದುರು ಅಮೋಘ ಗೆಲುವು ಸಾಧಿಸಿ ಶುಭಾರಂಭಗೈದಿದೆ.

Advertisement

ದಿನದ ಆರಂಭಿಕ ಪಂದ್ಯದಲ್ಲಿ ಸ್ಯಾಮ್‌ ಹಿಹಾ ಅವರ ಅವಳಿ ಗೋಲುಗಳ ನೆರವಿನಿಂದ ನ್ಯೂಜಿಲ್ಯಾಂಡ್‌ ತಂಡವು ಚಿಲಿ ತಂಡವನ್ನು 3-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿತು.

ಮೊದಲ ಎರಡು ಕ್ವಾರ್ಟರ್‌ ಆಟದ ವೇಳೆ ಸ್ಯಾಮ್‌ ಹಿಹಾ ಅನುಕ್ರಮವಾಗಿ 11ನೇ ಮತ್ತು 18ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ದಾಖಲಿಸಿದರು. ಈ ಮೊದಲು ಸ್ಯಾಮ್‌ ಲೇನ್‌ 9ನೇ ನಿಮಿಷದಲ್ಲಿ ಫೀಲ್ಡ್‌ ಮೂಲಕವೇ ಗೋಲು ಹೊಡೆದು ಮುನ್ನಡೆ ಒದಗಿಸಿದ್ದರು.

ನೆದರ್ಲೆಂಡ್ಸ್‌ಗೆ ಗೆಲುವು
ದಿನನ ಇನ್ನೊಂದು ಪಂದ್ಯದಲ್ಲಿ ತಿಜ್‌ ವಾನ್‌ ಡ್ಯಾಮ್‌ ಅವರು 19ನೇ ನಿಮಿಷದಲ್ಲಿ ಫೀಲ್ಡ್‌ ಮೂಲಕ ಹೊಡೆದ ಗೋಲಿನಿಂದಾಗಿ ನೆದರ್ಲೆಂಡ್ಸ್‌ ಮುನ್ನಡೆ ಸಾಧಿಸಿತು. ನಾಲ್ಕು ನಿಮಿಷಗಳ ಬಳಿಕ ಜಿಪ್‌ ಜಾನ್ಸೆನ್‌ ಮುನ್ನಡೆ ಯನ್ನು 2-0ಕ್ಕೇರಿಸಿದರು. ಅಂತಿಮ ಕ್ವಾರ್ಟರ್‌ ವೇಳೆ ತಂಡಕ್ಕೆ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ತೆಯುನ್‌ ಬೈನ್ಸ್‌ ಗೋಲು ದಾಖಲಿಸಿ ಮುನ್ನಡೆಯನ್ನು 3-0ಕ್ಕೆ ವಿಸ್ತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next