Advertisement

ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌

04:33 PM Oct 05, 2017 | |

ಮೇಜರ್‌ ಧ್ಯಾನ್‌ಚಂದ್‌ ಸಿಂಗ್‌ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿಪಟು. ಇಡೀ ಪ್ರಪಂಚದಲ್ಲಿಯೇ ಇಲ್ಲಿಯವರೆಗೆ ಅವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನನ್ನು ಬೆರಗುಗೊಳಿಸಿದ  ಅದ್ಭುತ ಹಾಕಿ ಆಟಗಾರನೂ ಹೌದು. ಭಾರತ ಸರಕಾರವು ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿದೆ. ಎಲ್ಲರೂ ಧ್ಯಾನ್‌ರನ್ನು ‘ದಾದಾ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರೆ, ಅವರ ಕೋಚ್‌ ಪಂಕಜ್‌ ಗುಪ್ತ ಅವರು ‘ಚಾಂದ್‌’ (ಚಂದ್ರ) ಎಂದು ಕರೆಯುತ್ತಿದ್ಧರು. ಅಲ್ಲದೇ ತಮ್ಮ ಶಿಷ್ಯ ಚಂದ್ರನಂತೆ ಬೆಳಗುತ್ತಾನೆ ಎಂದೂ ಭವಿಷ್ಯ ನುಡಿದಿದ್ದರು. ಅವರ ಮಾತು ನಿಜವೂ ಆಯಿತು.

Advertisement

ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ರಜಪೂತ್‌ ಕುಟುಂಬವೊಂದರಲ್ಲಿ ಆಗಸ್ಟ್‌ 29, 1905ರಲ್ಲಿ ಧ್ಯಾನ್‌ ಚಂದ್‌ ಜನಿಸಿದರು. ಅವರ ತಂದೆ ಭಾರತೀಯ ಬ್ರಿಟಿಷ್‌ ಸೈನ್ಯದಲ್ಲಿ ಹವಾಲ್ದಾರ್‌ ಅಗಿದ್ದರು. ಪ್ರಯಾಗದಿಂದ ತದನಂತರ ಕುಟುಂಬವು ಝಾನ್ಸಿ ನಗರಕ್ಕೆ ವಲಸೆ ಬಂದಿತು. ಧ್ಯಾನ್‌ ಚಂದ್‌ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ. ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ. ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. 14ನೇ ಪಂಜಾಬ್‌ ರೆಜಿಮೆಂಟ್‌ ಸೇರಿದ ಧ್ಯಾನ್‌ರನ್ನು ಸುಬೇದಾರ್‌- ಮೇಜರ್‌ ಭೋಲೆ ತಿವಾರಿಯವರು ಗಮನಿಸಿದರು. ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಇವರು ಚಂದ್‌ ಧ್ಯಾನ್‌ರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು. ಧ್ಯಾನ್‌ಚಂದ್‌ ಅನ್ನೋ ದಂತಕತೆ ಬೆಳೆಯಲು ಶುರುವಿಟ್ಟಿದ್ದೇ ಹೀಗೆ.

ಅಂತಾರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ
1928ರಲ್ಲಿ ಭಾರತೀಯ ಹಾಕಿ ತಂಡವನ್ನು ಸೇರಿದ ಧ್ಯಾನ್‌ ಚಂದ್‌ ಅವರಿಗೆ, ನೆದರ್‌ಲ್ಯಾಂಡ್‌ನ‌ ಆರ್ಮ್ ಸ್ಟೇಡಿಯಂನಲ್ಲಿ ಆಯೋಜಿಸಲಾದ 1928ರ ಬೇಸಗೆಯ ಒಲಂಪಿಕ್‌ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. 3- 0 ಗೋಲ್‌ಗ‌ಳಲ್ಲಿ 2ನ್ನು ಗಳಿಸುವ ಮೂಲಕ ಭಾರತೀಯ ತಂಡಕ್ಕೆ ನೆದರ್‌ ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದ ಧ್ಯಾನ್‌ ಚಂದ್‌ರ ಆಟಕ್ಕೆ ಅಲ್ಲಿ ನೆರೆದ ಜನರು ಬೆರಗಾದರು. ಈ ಸರಣಿಯಲ್ಲಿ ಭಾರತೀಯ ಹಾಕಿ ತಂಡಕ್ಕೆ ಒಲಂಪಿಕ್ಸ್‌ ನ ಸ್ವರ್ಣ ಪದಕ ಒಲಿದಿತ್ತು. ಧ್ಯಾನ್‌ ಚಂದ್‌ 1932 ಹಾಗೂ 1936ರಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಪಡೆದ ಭಾರತದ ತಂಡದ ಸದಸ್ಯರಾಗಿದ್ದರು. ಹೀಗೆ ತಾವು ಆಡಿದ ಮೂರೂ ಒಲಿಂಪಿಕ್ಸ್‌ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಅವರು ಮಹತ್ತರವಾದ ಪಾತ್ರ ವಹಿಸಿದರು. ಆಡಿದ ಮೂರು ಒಲಿಂಪಿಕ್ಸ್‌ ಸ್ಪರ್ಧೆಗಳಲ್ಲಿ ಆಡಿದ ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್‌ ಚಂದ್‌ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 33.

ದೈತ್ಯರ ಸಾಲಿನಲ್ಲಿ ಧ್ಯಾನ್‌
ಕ್ರೀಡಾಂಗಣಕ್ಕೆ ಧ್ಯಾನ್‌ಚಂದ್‌ ಸುರಿಸಿದ ಬೆವರಹನಿ, ವ್ಯಯಿಸಿದ ಶ್ರಮ, ತೋರಿದ ನಿಷ್ಠೆ, ಅರ್ಪಣಾಭಾವ ಅವರನ್ನು ತಂತಾನೇ ತಂದು ದೈತ್ಯರ ಸಾಲಿನಲ್ಲಿ ನಿಲ್ಲಿಸಿದೆ. ಫ‌ುಟ್ಬಾಲ್‌ ಆಟದಲ್ಲಿ ಪೀಲೆ, ಕ್ರಿಕೆಟ್ಟಿನಲ್ಲಿ ಸಚಿನ್‌, ಡೊನಾಲ್ಡ್ 
ಬ್ರಾಡ್‌ ಮನ್‌ ಅವರಂತ ಪ್ರತಿಭಾನ್ವಿತ ಸಾಧಕರ ಧ್ಯಾನ್‌ ಚಂದ್‌ ಕೂಡ ಸೇರುತ್ತಾರೆ.

ಒಮ್ಮೆ ಧ್ಯಾನ್‌ ಚಂದ್‌ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲವಂತೆ. ಕಡೆಗೆ ಧ್ಯಾನ್‌ ಚಂದ್‌ ಅವರು ಮ್ಯಾಚ್‌ ರೆಫ‌ರಿ ಅವರೊಂದಿಗೆ ವಾಗ್ವಾದಕ್ಕಿಳಿದು ನೇರವಾಗಿ ಈ ಕ್ರೀಡಾಂಗಣದಲ್ಲಿ ಇರುವ ‘ ಗೋಲ್‌ ಪೋಸ್ಟ್‌’ ಅಳತೆ ಅಸಮರ್ಪಕವಾದದ್ದು, ಹಾಕಿ ಆಟದ ಅಂತಾರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದು ಎಂದು ನುಡಿದರಂತೆ. ಧ್ಯಾನ್‌ ಚಂದ್‌ ಅವರ ಅಭಿಪ್ರಾಯವನ್ನು ಮನ್ನಿಸಿ ಗೋಲ್‌ ಪೋಸ್ಟ್‌ ಅಳತೆ
ಮಾಡಿದಾಗ ಧ್ಯಾನ್‌ ಚಂದ್‌ ಅವರ ಮಾತು ನಿಜವಾಗಿತ್ತು.

Advertisement

1936ರ ಒಲಿಂಪಿಕ್ಸ್‌ ಪಂದ್ಯದಲ್ಲಿ ಭಾರತ ತಂಡವು ಜಯಗಳಿಸಿದ ಅನಂತರ ಎಲ್ಲೇ ಪಂದ್ಯಗಳಾದರೂ ಜನ ಧ್ಯಾನ್‌ ಚಂದ್‌ ಆಟವನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿದ್ದರು. ಬರ್ಲಿನ್‌ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಧ್ಯಾನ್‌ ಚಂದ್‌ ಅವರ ಆಟ ಕಂಡ ಅಡಾಲ್ಫ್ ಹಿಟ್ಲರ್‌, ಧ್ಯಾನ್‌ ಚಂದ್‌ ಅವರನ್ನು ಜರ್ಮನಿ ತಂಡದ ಪರವಾಗಿ ಆಡಲು ಆಹ್ವಾನಿಸಿದ್ದಲ್ಲದೆ ಬ್ರಿಟಿಷ್‌ ಸೇನೆಯಲ್ಲಿ ಮೇಜರ್‌ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್‌ ಗೌರವ ಒದಗಿಸುವುದಾಗಿ ಕೋರಿಕೊಂಡಿದ್ದ. ಆದರೆ ಧ್ಯಾನ್‌ ಚಂದ್‌, ‘ ನನಗೆ ಭಾರತೀಯನಾಗಿರಲು ಹೆಮ್ಮೆಯೆನಿಸುತ್ತದೆ’ ಎಂದು ಆಹ್ವಾನವನ್ನು
ನಿರಾಕರಿಸಿದ್ದರು. ಕ್ರಿಕೆಟ್‌ ಆಟದ ಸಾರ್ವಕಾಲಿಕ ತಾರೆ ಡಾನ್‌ ಬ್ರಾಡ್‌ ಮನ್‌, ಒಮ್ಮೆ ಅಡಿಲೈಡ್‌ನ‌ಲ್ಲಿ ಧ್ಯಾನ್‌ ಚಂದ್‌ ಅವರನ್ನು ಮುಖಾಮುಖೀಯಾದಾಗ, ‘ಏನಪ್ಪಾ, ನಾವು ಕ್ರಿಕೆಟ್‌ನಲ್ಲಿ ರನ್‌ ಬಾರಿಸುವಂತೆ ನೀನೂ ಗೋಲುಗಳನ್ನು ಬಾರಿಸುತ್ತೀಯಲ್ಲ?’ ಎಂದಿದ್ದರಂತೆ. ಸಾಧಕ ಧ್ಯಾನ್‌ ಚಂದ್‌ ಅವರ ಪುತ್ಥಳಿ ನಮ್ಮ ದೇಶದಲ್ಲಿರುವುದು ಸಾಮಾನ್ಯವೇ. ಆದರೆ ಅವರ ಪುತ್ಥಳಿಕೆಯನ್ನು ಮೊದಲು ಸ್ಥಾಪಿಸಿದ್ದು ಆಸ್ಟ್ರಿಯಾದ ವಿಯೆನ್ನಾದಲ್ಲಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂಬುದನ್ನು ಊಹಿಸಬಹುದು.

ಹಾಕಿ ಸ್ಟಿಕ್  ಕೆಳಗಿಟ್ಟಿದ್ದು

ಎರಡನೇ ವಿಶ್ವಯುದ್ದ ಮುಗಿದ ಬಳಿಕವೂ ಕೆಲಕಾಲ ಆಡಿದ ಧ್ಯಾನ್‌ ಚಂದ್‌ 1948ರಲ್ಲಿ ತಮ್ಮ 42ನೇ ವಯಸ್ಸಿನಲ್ಲಿ
ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್‌ ಚಂದ್‌ರ ಸಹೊದರ ರೂಪ್‌ ಸಿಂಗ್‌ ಕೂಡ ಉತ್ತಮ ಆಟಗಾರರಾಗಿದ್ದರು. ಧ್ಯಾನ್‌ ಚಂದರ ಪುತ್ರ ಅಶೋಕ್‌ ಕುಮಾರ್‌ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ . ಧ್ಯಾನ್‌ ಚಂದ್‌ ಜನ್ಮದಿನವಾದ ಆಗಸ್ಟ್‌ 29ರ ದಿನವನ್ನು ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. 1979ರ ಡಿಸೆಂಬರ್‌
3ರಂದು ಅವರು ನಿಧನರಾದರು. 

ಸದಾ ಸಕಲೇಶಪುರ

Advertisement

Udayavani is now on Telegram. Click here to join our channel and stay updated with the latest news.

Next