Advertisement

Junior Women’s World Cup: ಭಾರತಕ್ಕೆ ಕೆನಡಾ ಮೊದಲ ಎದುರಾಳಿ

10:40 PM Jun 24, 2023 | Team Udayavani |

ಹೊಸದಿಲ್ಲಿ: ಚಿಲಿಯ ರಾಜಧಾನಿ ಸ್ಯಾಂಟಿಯಾ ಗೋದಲ್ಲಿ ವರ್ಷಾಂತ್ಯ ನಡೆಯಲಿರುವ ಜೂನಿಯರ್‌ ವನಿತಾ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಶುಕ್ರವಾರ ಈ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೊಂಡಿತು.

Advertisement

ಭಾರತ “ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿರುವ ಇನ್ನೆರಡು ತಂಡಗಳೆಂದರೆ ಬೆಲ್ಜಿಯಂ ಮತ್ತು ಜರ್ಮನಿ. ಭಾರತ-ಕೆನಡಾ ನ. 29ರಂದು ಮುಖಾಮುಖೀ ಆಗಲಿವೆ. ಜರ್ಮನಿ ಮತ್ತು ಬೆಲ್ಜಿಯಂ ವಿರುದ್ಧ ಡಿ. 1 ಮತ್ತು 2ರಂದು ಆಡಲಿದೆ.

ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಜೂನಿಯರ್‌ ಏಷ್ಯಾ ಕಪ್‌ ಗೆದ್ದು ವಿಶ್ವಕಪ್‌ಗೆ ಅರ್ಹತೆ ಸಂಪಾದಿಸಿದ ಭಾರತ ಹೊಸ ಹುರುಪಿನಲ್ಲಿದೆ. ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ. ಇದು ಮೊದಲ ಸಲ ವಿಶ್ವಕಪ್‌ ಎತ್ತಲು ಸ್ಫೂರ್ತಿಯಾಗಬೇಕಿದೆ.
ಭಾರತ ಈವರೆಗೆ ಯಾವುದೇ ವಿಶ್ವಕಪ್‌ ಪದಕ ಗೆದ್ದಿಲ್ಲ. ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಸಾಧ್ಯತೆ ಇತ್ತಾದರೂ ಇಂಗ್ಲೆಂಡ್‌ ವಿರುದ್ಧ ಶೂಟೌಟ್‌ನಲ್ಲಿ ಎಡವಿತು. 2-2 ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದ ಭಾರತ, ಶೂಟೌಟ್‌ನಲ್ಲಿ 0-3ರಿಂದ ಮುಗ್ಗರಿಸಿತ್ತು.

“ನಮ್ಮ ವಿಭಾಗ ಅತ್ಯಂತ ಬಲಿಷ್ಠ ತಂಡಗಳನ್ನು ಒಳಗೊಂಡಿದೆ ಎಂಬ ಎಚ್ಚರಿಕೆ ಇದೆ. ಆದರೆ ವಿಶ್ವ ಮಟ್ಟದಲ್ಲಿ ಮಿಂಚಲು ನಮಗೆ ಇದೊಂದು ಉತ್ತಮ ಅವಕಾಶ. ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿದ್ದೇವೆ. ಪ್ರತೀ ಪಂದ್ಯದಲ್ಲೂ ಇದನ್ನು ಪ್ರದರ್ಶಿಸುವುದೇ ನಮ್ಮ ಯೋಜನೆ’ ಎಂಬುದಾಗಿ ನಾಯಕಿ ಪ್ರೀತಿ ಹೇಳಿದರು.
ಈ ಸಂದರ್ಭದಲ್ಲಿ ಮಾತಾಡಿದ ವನಿತಾ ತಂಡದ ಪ್ರಧಾನ ಕೋಚ್‌ ಜಾನೆಕ್‌ ಸ್ಕೋಪ್‌ಮನ್‌, “ಏಷ್ಯಾ ಕಪ್‌ ಗೆದ್ದ ಬಳಿಕ ತಂಡದ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಿದೆ. ಆದರೆ ವಿಶ್ವಕಪ್‌ ಪಂದ್ಯಾವಳಿ ಹೆಚ್ಚು ಸವಾಲುಗಳಿಂದ ಕೂಡಿದೆ. ಜಗತ್ತಿನ ಬಲಿಷ್ಠ ತಂಡಗಳೆಲ್ಲ ಇಲ್ಲಿ ಸೆಣಸುತ್ತವೆ. ಪ್ರತಿಯೊಂದು ಪಂದ್ಯವೂ ಕಠಿನವಾಗಿರುತ್ತದೆ. ನಮ್ಮ ಕೌಶಲ, ಸಾಂ ಕ ಆಟಕ್ಕೊಂದು ಸವಾಲು’ ಎಂದರು.

ಜಪಾನ್‌ನಲ್ಲಿ ಸಾಧಿಸಿದ ಚಾರಿತ್ರಿಕ ಗೆಲುವಿನ ಹೊರತಾ ಗಿಯೂ ನಮ್ಮ ತಂಡ ಕೆಲವು ವಿಭಾಗಗಳ ಕೊರತೆಯನ್ನು ಹೋಗಲಾಡಿಸಿಕೊಳ್ಳಬೇಕಿದೆ ಎಂಬುದು ಜೂನಿಯರ್‌ ತಂಡದ ಕೋಚ್‌ ಹರ್ವಿಂದರ್‌ ಸಿಂಗ್‌ ಅಭಿಪ್ರಾಯ.

Advertisement

ರ್‍ಯಾಂಕಿಂಗ್‌ ಪ್ರಕಟ
ಪಂದ್ಯಾವಳಿಯ ಕೌತುಕ ಹೆಚ್ಚಿಸುವ ಸಲುವಾಗಿ ಎಫ್ಐಎಚ್‌ ಇದೇ ಮೊದಲ ಸಲ ಜೂನಿಯರ್‌ ವನಿತಾ ವಿಶ್ವ ರ್‍ಯಾಂಕಿಂಗ್‌ ಯಾದಿಯನ್ನೂ ಪ್ರಕಟಿಸಿದೆ. ಇದರಂತೆ ಭಾರತ 6ನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್‌ಗೆ ಆಗ್ರಸ್ಥಾನ ಲಭಿಸಿದೆ. ಆರ್ಜೆಂಟೀನಾ, ಜರ್ಮನಿ, ಇಂಗ್ಲೆಂಡ್‌ ಮತ್ತು ಯುನೈಟೆಡ್‌ ಸ್ಟೇಟ್ಸ್‌ 2ರಿಂದ 5ನೇ ರ್‍ಯಾಂಕಿಂಗ್‌ ಪಡೆದಿವೆ.

 

Advertisement

Udayavani is now on Telegram. Click here to join our channel and stay updated with the latest news.

Next