Advertisement

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ

12:47 PM Jun 13, 2020 | mahesh |

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯ ಇತಿಹಾಸ ಇಂದು ನಿನ್ನೆಯದಲ್ಲ. ಹಲವು ಇತಿಹಾಸಗಳಲ್ಲಿ ಹಾಕಿಯ ಉಲ್ಲೇಖವನ್ನು ಗಮನಿಸಬಹುದು. ಐರ್‌ಲ್ಯಾಂಡ್‌ನ‌ ಕ್ರಿ.ಪೂ. 1272ರ ಕೆತ್ತನೆಗಳಲ್ಲೂ ಬಾಗಿದ ಕೋಲು ಮತ್ತು ಚೆಂಡನ್ನು ಬಳಸಿ ಆಡುವ ಆಟದ ಕೆತ್ತನೆ ಕಂಡುಬಂದಿರುವುದು ಹಾಕಿ ಇತಿಹಾಸಕ್ಕೆ ಹಿಡಿದ ಕೈಗನ್ನಡಿ. 19ನೇ ಶತಮಾನದ ಬಳಿಕ ಈ ಕ್ರೀಡೆಯನ್ನು ಬಂಡಿ ಹಾಕಿ, ಫೀಲ್ಡ್‌ ಹಾಕಿ, ಐಸ್‌ ಹಾಕಿ, ಐಸ್‌ ಸ್ಲೆಡ್ಜ್ ಹಾಕಿ, ರೋಲರ್‌ ಹಾಕಿ ( ಇನ್‌ಲೈನ್‌), ರೋಲರ್‌ ಹಾಕಿ ( ಕ್ವಾಡ್‌), ಸ್ಟ್ರೀಟ್‌ ಹಾಕಿ ಎಂಬ ಪ್ರಮುಖ ವಿಧಗಳಾಗಿ ವಿಂಗಡಿಸಿರುವುದನ್ನು ಕಾಣಬಹುದು, ಏರ್‌ ಹಾಕಿ, ಬಾಲ್‌ ಹಾಕಿ, ಬಾಕ್ಸ್‌ ಹಾಕಿ ಸೇರಿದಂತೆ ಇನ್ನೂ ಹಲವು ವಿಧಗಳೂ ಇದರಲ್ಲಿವೆ.

Advertisement

1925- ಇಂಡಿಯನ್‌ ಹಾಕಿ ಫೆಡರೇಶನ್‌ ಸ್ಥಾಪನೆ
ಇಂಡಿಯನ್‌ ಹಾಕಿ ಫೆಡರೇಶನ್‌ ಸರಕಾರಿ ಸಂಸ್ಥೆಯಾಗಿದ್ದು, ನವೆಂಬರ್‌ 7, 1925ರಂದು ಗ್ವಾಲಿಯರ್‌ನಲ್ಲಿ ಆರಂಭಗೊಂಡಿತು. ಇಂಟರ್‌ನ್ಯಾಶನಲ್‌ ಹಾಕಿ ಫೆಡರೇಶನ್‌ ಸದಸ್ಯತ್ವ , ಇಂಡಿಯನ್‌ ಹಾಕಿ ಫೆಡರೇಶನ್‌ ಕಾರ್ಯದರ್ಶಿಯಾಗಿದ್ದ ಕೆಪಿಎಸ್‌ ಗಿಲ್‌ ಮುಂದಾಳತ್ವದಲ್ಲಿ ಭಾರತದಲ್ಲಿ ನಡೆದ ಎಲ್ಲ ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳ ನೇತೃತ್ವ ವಹಿಸಿತ್ತು. 1973ರಲ್ಲಿ ಪ್ರೇಮ್‌ನಾಥ್‌ ಸಾಹಿ ಅವರು ಫೆಡರೇಶನ್‌ನ ಉಸ್ತುವಾರಿ ನೋಡಿಕೊಳ್ಳಲು ನೇಮಕವಾದರು. 2008ರ ಎಪ್ರಿಲ್‌ 28ರಂದು ಇಂಡಿಯನ್‌ ಹಾಕಿ ಫೆಡರೇಶನ್‌ ಅನ್ನು ಕಾರಣಾಂತರಗಳಿಂದ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ ವಜಾಗೊಳಿಸಿದೆ.

ಹಾಕಿ ಇಂಡಿಯಾ
ದೇಶದಲ್ಲಿನ ಹಾಕಿ ಆಟವನ್ನು ಮತ್ತಷ್ಟು ಉತ್ತಮಗೊಳಿಸುವುದೇ ಹಾಕಿ ಇಂಡಿಯಾದ ಮೂಲ ಉದ್ದೇಶವಾಗಿದ್ದು, ಕ್ರೀಡಾ ಸಚಿವಾಲಯದ ಅಡಿಯಲ್ಲಿ ಆರಂಭಗೊಂಡ ಭಾರತದ ಮೊದಲ ಕ್ರೀಡಾ ಪ್ರಾಧಿಕಾರ ಇದಾಗಿದೆ. ಮೇ 20, 2009ರಂದು ಆರಂಭವಾದ ಈ ಪ್ರಾಧಿಕಾರದ ಕೇಂದ್ರ ಕಚೇರಿ ಹೊಸದಿಲ್ಲಿಯಲ್ಲಿದೆ.

ಬಂಗಾರದ ಬೇಟೆ ಇಂಟರ್‌ನ್ಯಾಶನಲ್‌ ಹಾಕಿ
ಫೆಡರೇಶನ್‌ನ ಮೊದಲ ಯುರೋಪಿಯನ್ನೇತರ ಭಾಗವಾಗಿದ್ದ ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್‌ನಲ್ಲಿ ಒಟ್ಟು 8 ಬಂಗಾರದ ಪದಕಗಳನ್ನು ಗೆದ್ದಿದೆ. 1928ರ ಒಲಿಂಪಿಕ್‌ನಲ್ಲಿ ಮೊದಲ ಬಂಗಾರ ಗೆದ್ದಿದ್ದ ತಂಡ 1952 ಮತ್ತು 1956ರಲ್ಲೂ ಬಂಗಾರದ ಬೇಟೆ ಮುಂದುವರಿಸಿತ್ತು. 1932ರ ಒಲಿಂಪಿಕ್ಸ್‌ನಲ್ಲಿ ಭಾರತವು ಯುಎಸ್‌ಎ ಯನ್ನು 24-1ರಿಂದ ಸೋಲಿಸಿತ್ತು. ಇದು ಜಾಗತಿಕ ಕ್ರೀಡಾಕೂಟದಲ್ಲೇ ಒಂದು ಹಾಕಿ ತಂಡ ಗಳಿಸಿದ ಅತೀ ಹೆಚ್ಚು ಗೋಲು. ಪಂದ್ಯದಲ್ಲಿ 10 ಗೋಲುಗಳನ್ನು ಬಾರಿಸುವ ಮೂಲಕ ರೂಪ್‌ಸಿಂಗ್‌ ಒಲಿಂಪಿಕ್‌ನಲ್ಲಿ ದಾಖಲೆ ಬರೆದಿದ್ದರು. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಹಾಂಗ್‌ಕಾಂಗ್‌ ಅನ್ನು 26-0 ಅಂತರದಲ್ಲಿ ಸೋಲಿಸಿರುವುದು ಸಾರ್ವತ್ರಿಕ ದಾಖಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next