Advertisement

Hockey India Legend: ಶ್ರೀಜೇಶ್‌ ಆಧುನಿಕ ಭಾರತದ ಹಾಕಿ ದೇವರು

10:56 PM Aug 14, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಹಾಕಿಯಿಂದ ನಿವೃತ್ತರಾದ ಖ್ಯಾತ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರನ್ನು “ಆಧುನಿಕ ಭಾರತದ ಹಾಕಿ ದೇವರು’ ಎಂದು ಬಣ್ಣಿಸಿದ ಹಾಕಿ ಇಂಡಿಯಾ, ಇವರ ನಂ. 16 ಜೆರ್ಸಿಗೆ ವಿದಾಯ ಹೇಳಲು ನಿರ್ಧರಿಸಿದೆ.

Advertisement

ಈ ಸಂಖ್ಯೆಯನ್ನಿನ್ನು ಸೀನಿಯರ್‌ ತಂಡದ ಯಾವುದೇ ಆಟಗಾರನಿಗೆ ನೀಡುವುದಿಲ್ಲ, ಆದರೆ ಜೂನಿಯರ್‌ ತಂಡದಲ್ಲಿ ಇರುತ್ತದೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್‌ ತಿರ್ಕಿ, ಬುಧವಾರ ಏರ್ಪಡಿಸಿದ ಹಾಕಿವೀರನ ವಿದಾಯ ಸಮಾರಂಭದಲ್ಲಿ ಹೇಳಿದರು. ಹಾಗೆಯೇ ಅವರಿನ್ನು ಜೂನಿಯರ್‌ ಹಾಕಿ ತಂಡದ ಕೋಚ್‌ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಶ್ರೀಜೇಶ್‌ ಅವರ ಸಾಧನೆಯನ್ನು ಕೊಂಡಾಡಿದ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ತಿರ್ಕಿ, “ಭಾರತದ ಆಧುನಿಕ ಹಾಕಿಯ ದೇವರು’ ಎಂದರು. ಸಮಾರಂಭದ ವೇದಿಕೆಯ ಮೇಲ್ಭಾಗದಲ್ಲಿ ಈ ಸಾಲು ಎದ್ದು ಕಾಣುತ್ತಿತ್ತು. ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ್‌ ಸಿಂಗ್‌ ಮತ್ತು ಶ್ರೀಜೇಶ್‌ ಕುಟುಂಬದ ಸದಸ್ಯರು ವೇದಿಕೆಯಲ್ಲಿದ್ದರು. ಪ್ಯಾರಿಸ್‌ನಲ್ಲಿ ಅವಳಿ ಪದಕ ಗೆದ್ದ ಶೂಟರ್‌ ಮನು ಭಾಕರ್‌ ಅವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.

2 ದಶಕಗಳ ಕಾಲ ಭಾರತೀಯ ಹಾಕಿಗೆ ಸೇವೆ ಸಲ್ಲಿಸಿದ ಶ್ರೀಜೇಶ್‌, ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನಿವೃತ್ತರಾಗು ವು ದಾಗಿ ಮೊದಲೇ ಪ್ರಕಟಿಸಿದ್ದರು. ಅಲ್ಲಿ ಕಂಚಿನ ಪದಕ ಉಳಿಸಿ ಕೊಳ್ಳುವಲ್ಲಿ ಶ್ರೀಜೇಶ್‌ ವಹಿಸಿದ ಪಾತ್ರ ಅಮೋಘವಾಗಿತ್ತು.

Advertisement

ವ್ಯಕ್ತಿಯನ್ನಾಗಿ ರೂಪಿಸಿದ ಹಾಕಿ
ಈ ಸಂದರ್ಭದಲ್ಲಿ ಮಾತಾಡಿದ ಶ್ರೀಜೇಶ್‌, “ಇದು 18 ವರ್ಷಗಳ ಸುದೀರ್ಘ‌ ಪಯಣ. ನಾನು ಎಲ್ಲ ಏರಿಳಿತಗಳ ಅನುಭವ ಗಳಿಸಿದೆ. ಹಾಕಿ ನನ್ನನ್ನಿಂದು ಓರ್ವ ವ್ಯಕ್ತಿಯನ್ನಾಗಿ ರೂಪಿಸಿ ಇಲ್ಲಿ ನಿಲ್ಲಿಸಿದೆ. ತಂಡವನ್ನು ಬಿಟ್ಟು ಹೋಗಲು ಬಹಳ ಬೇಸರವಾಗುತ್ತಿದೆ. ತಂಡ ನನ್ನ ಪಾಲಿನ ಎರಡನೇ ಕುಟುಂಬವಿದ್ದಂತೆ’ ಎಂದರು.

ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಕೂಡ ಈ ಸಂದರ್ಭ ಶ್ರೀಜೇಶ್‌ ಸಾಧನೆಯ ಗುಣ ಗಾನ ಮಾಡಿದರು. “ಶ್ರೀಜೇಶ್‌ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದರು. ಸದಾ ಹಿರಿಯಣ್ಣನ ರೀತಿಯಲ್ಲಿ ನಿಂತು ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ನಾವೆಲ್ಲ ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ’ ಎಂದರು. “ಇದು ವಿದಾಯ ಸಮಾರಂಭವಲ್ಲ. ಶ್ರೀಜೇಶ್‌ ಸಾಧನೆಯ ಸಂಭ್ರಮಾಚರಣೆ’ ಎಂದು ದಿಲೀಪ್‌ ಟಿರ್ಕಿ ಹೇಳಿದರು.

ಮೊದಲು ದ್ವೇಷ, ಬಳಿಕ ಪ್ರೀತಿ
ಶ್ರೀಜೇಶ್‌ ಮತ್ತು ಅನೀಶ್ಯಾ ಅವರದು ಪ್ರೇಮ ವಿವಾಹ. ಪ್ರೀತಿಸುವುದಕ್ಕಿಂತ ಮೊದಲು ಶ್ರೀಜೇಶ್‌ ಆಕೆಯನ್ನು ದ್ವೇಷಿಸು ತ್ತಿದ್ದರಂತೆ. ಅನೀಶ್ಯಾ ತನಗಿಂತ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದುದೇ ಇದಕ್ಕೆ ಕಾರಣ! “ನಾನಾಗ ಕಣ್ಣೂರು ಕ್ರೀಡಾಶಾಲೆಯಲ್ಲಿ ಓದುತ್ತಿದ್ದೆ. ಬಹಳ ಪ್ರತಿಭಾವಂತನಾಗಿದ್ದೆ, ತರಗತಿಯಲ್ಲಿ ಯಾವತ್ತೂ ಮೊದಲಿಗ. ಅಧ್ಯಾಪಕರ ನೆಚ್ಚಿನ ವಿದ್ಯಾರ್ಥಿ. ಆದರೆ ಇಲ್ಲಿಗೆ ಬಂದ ಅವಳು ನನಗಿಂತ ಹೆಚ್ಚಿನ ಅಂಕ ಗಳಿಸತೊಡಗಿದಳು. ನನ್ನದು 50ರಲ್ಲಿ 35-42ರ ರೇಂಜ್‌ ಅಂಕ ಗಳಿಕೆಯಾದರೆ, ಆಕೆಯದು 50ಕ್ಕೆ 49. ಸಹಜವಾಗಿಯೇ ನಾನವಳನ್ನು ದ್ವೇಷಿಸತೊಡಗಿದೆ. ಅನಂತರವೇ ಪ್ರೇಮಾಂಕುರವಾದುದು’ ಎಂದು ಶ್ರೀಜೇಶ್‌ ಬಹಳ ತಮಾಷೆಯಾಗಿ ಹೇಳಿದರು. ಅನೀಶ್ಯಾ ಲಾಂಗ್‌ಜಂಪ್‌ನಲ್ಲಿ ಗಮನ ಸೆಳೆದಿದ್ದರು.

ಮತ್ತೋರ್ವ ಶ್ರೀಜೇಶ್‌ ಬರಲಿ
“ಶ್ರೀಜೇಶ್‌ ಅವರಿನ್ನು ದೇಶದ ಜೂನಿಯರ್‌ ಹಾಕಿಯತ್ತ ಮುಖ ಮಾಡಲಿದ್ದಾರೆ. ಹೀಗಾಗಿ ಅವರ ನಂ. 16 ಜೆರ್ಸಿಗೆ ವಿದಾಯ ಹೇಳಲಾಗುವುದು. ಆದರೆ ಜೂನಿಯರ್‌ ತಂಡದಲ್ಲಿ ಈ ಸಂಖ್ಯೆ ಕಾಣಿಸಿಕೊಳ್ಳಲಿದೆ. ಅವರು ಜೂನಿಯರ್‌ ತಂಡದ ಮೂಲಕ ಮತ್ತೋರ್ವ ಶ್ರೀಜೇಶ್‌ನನ್ನು ಹುಟ್ಟುಹಾಕಿ ಭಾರತಕ್ಕೆ ಕೊಡುಗೆಯಾಗಿ ನೀಡಲಿ’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ್‌ ಸಿಂಗ್‌ ಹೇಳಿದರು. ಸಮಾರಂಭದಲ್ಲಿ ಹಾಕಿ ಆಟಗಾರರೆಲ್ಲ “ಶ್ರೀಜೇಶ್‌ 16′ ಎಂದು ಬರೆಯಲ್ಪಟ್ಟಿದ್ದ ಕೆಂಪು ಟೀ ಶರ್ಟ್‌ ಧರಿಸಿ ಗೌರವ ಸಲ್ಲಿಸಿದರು.

“ಇದು 18 ವರ್ಷಗಳ ಸುದೀರ್ಘ‌ ಪಯಣ. ನಾನು ಎಲ್ಲ ಏರಿಳಿತಗಳ ಅನುಭವ ಗಳಿಸಿದೆ. ಹಾಕಿ ನನ್ನನ್ನಿಂದು ಓರ್ವ ವ್ಯಕ್ತಿಯನ್ನಾಗಿ ರೂಪಿಸಿ ಇಲ್ಲಿ ನಿಲ್ಲಿಸಿದೆ. ತಂಡವನ್ನು ಬಿಟ್ಟು ಹೋಗಲು ಬಹಳ ಬೇಸರವಾಗುತ್ತಿದೆ. ತಂಡ ನನ್ನ ಪಾಲಿನ ಎರಡನೇ ಕುಟುಂಬವಿದ್ದಂತೆ”  - ಶ್ರೀಜೇಶ್‌

Advertisement

Udayavani is now on Telegram. Click here to join our channel and stay updated with the latest news.

Next