ಚೆನ್ನೈ: ಕೊರಿಯಾವನ್ನು 3-2 ಗೋಲುಗಳಿಂದ ಕೆಡವಿದ ಭಾರತ “ಏಷ್ಯನ್ ಚಾಂಪಿಯನ್ಸ್ ಟ್ರೋಫಿ’ ಪಂದ್ಯಾವಳಿಯಲ್ಲಿ ತನ್ನ ಅಗ್ರಸ್ಥಾನವನ್ನು ಗಟ್ಟಿಗೊಳಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳು ಒಂದೊಂದು ಗೋಲು ಬಾರಿಸಿ ಸಮಬಲದ ಹೋರಾಟ ಜಾರಿಯಲ್ಲಿರಿಸಿದವು. ವಿರಾಮದ ಹೊತ್ತಿಗೆ ಭಾರತ 2-1 ಮುನ್ನಡೆ ಸಾಧಿಸಿತು. ನೀಲಕಂಠ ಮೊದಲ ಗೋಲು ಬಾರಿಸಿದರೆ, ನಾಯಕ ಹರ್ಮನ್‌ಪ್ರೀತ್ ಸಿಂಗ್ ದ್ವಿತೀಯ ಗೋಲು ಹೊಡೆದರು. ಈ ನಡುವೆ ಮಾಂಜೆ ಜುಂಗ್ ಕೊರಿಯಾ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದರು.
ತೃತೀಯ ಕ್ವಾರ್ಟರ್‌ನಲ್ಲಿ ಮನ್‌ದೀಪ್ ಸಿಂಗ್ ಭಾರತದ ಮುನ್ನಡೆಯನ್ನು ವಿಸ್ತರಿಸಿದರು. ಪಂದ್ಯದ ಮುಕ್ತಾಯಕ್ಕೆ 3 ನಿಮಿಷ ಉಳಿದಿರುವಾಗ ಜಿಹುನ್ ಯಾಂಗ್ ಅಂತರವನ್ನು ತಗ್ಗಿಸಿದರು.
ಪಾಕ್, ಮಲೇಷ್ಯಾ ಜಯ
ದಿನದ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ಥಾನ ಮತ್ತು ಮಲೇಷ್ಯಾ ಜಯ ಸಾಧಿಸಿದವು. ಪಾಕಿಸ್ಥಾನ 2-1ರಿಂದ ಚೀನವನ್ನು ಮಣಿಸಿತು. ಈ ಸೋಲಿನಿಂದ ಚೀನ ಕೂಟದಿಂದ ಹೊರಬಿತ್ತು.
ದ್ವಿತೀಯ ಕ್ವಾರ್ಟರ್ ಕೊನೆಗೊಳ್ಳಲು 5 ನಿಮಿಷ ಇರುವಾಗ ಮುಹಮ್ಮದ್ ಖಾನ್ ಪಾಕಿಸ್ಥಾನ ಪರ ಗೋಲಿನ ಖಾತೆ ತೆರೆದರು. 32ನೇ ನಿಮಿಷದಲ್ಲಿ ಜೀಶೆಂಗ್ ಗಾವೊ ಪಂದ್ಯವನ್ನು ಸಮಬಲಕ್ಕೆ ತಂದರು. 39ನೇ ನಿಮಿಷದಲ್ಲಿ ಅರ್ಫಾಜ್ ಮತ್ತೆ ಪಾಕ್‌ಗೆ ಮುನ್ನಡೆ ತಂದಿತ್ತರು. ಈ ಜಯದೊಂದಿಗೆ ಪಾಕಿಸ್ಥಾನ 4ನೇ ಸ್ಥಾನಕ್ಕೇರಿದೆ. ಬುಧವಾರ ಆತಿಥೇಯ ಭಾರತದ ವಿರುದ್ಧ ಸೆಣಸಲಿದೆ.ರವಿವಾರ ಭಾರತಕ್ಕೆ ಶರಣಾಗಿದ್ದ ಮಲೇಷ್ಯಾ ಸೋಮವಾರ ಜಪಾನ್‌ಗೆ 3-1 ಗೋಲುಗಳಿಂದ ಸೋಲುಣಿಸಿತು.