ಹುಲುನ್‌ಬಯ್ರ್ (ಚೀನ): ಸುಖ್‌ಜೀತ್ ಸಿಂಗ್ ಅವರ ಅವಳಿ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ತಂಡವು ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದ ಸೋಮವಾರದ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಸುಖ್‌ಜೀತ್ ಅವರು ಪಂದ್ಯದ ಎರಡನೇ ಮತ್ತು 60ನೇ ನಿಮಿಷದಲ್ಲಿ ಗೋಲನ್ನು ಹೊಡೆದು ಸಂಭ್ರಮಿಸಿದರೆ ಅಭಿಷೇಕ್ (3ನೇ), ಸಂಜಯ್ (17 ಮತ್ತು ಉತ್ತಮ್ ಸಿಂಗ್ 54ನೇ ನಿಮಿಷದಲ್ಲಿ ಗೋಲು ಹೊಡೆದು ತಂಡದ ದೊಡ್ಡ ಗೆಲುವಿಗೆ ಕಾರಣರಾದರು. ಜಪಾನಿನ ಏಕೈಕ ಗೋಲನ್ನು 41ನೇ ನಿಮಿಷದಲ್ಲಿ ಮಾಟ್ಸುಮೊಟೊ ಕಾಝು ಮಾಸ ಹೊಡೆದಿದ್ದರು.
ನಾಲ್ಕು ಬಾರಿಯ ಚಾಂಪಿಯನ್ ಆಗಿರುವ ಭಾರತ ಈ ಕೂಟದಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಮೊದಲು ನಡೆದ ಪಂದ್ಯದಲ್ಲಿ ಅದು ಚೀನ ತಂಡವನ್ನು 3-0 ಗೋಲುಗಳಿಂದ ಉರುಳಿಸಿತ್ತು.
ಈ ಪಂದ್ಯದಲ್ಲಿ ಭಾರತದ ಆರಂಭ ಅಮೋಘವಾಗಿತ್ತು. 2ನೇ ನಿಮಿಷದಲ್ಲಿ ಸುಖ್‌ಜೀತ್ ಸಿಂಗ್ ಫೀಲ್ಡ್ ಗೋಲು ದಾಖಲಿಸಿ ಮುನ್ನಡೆ ಒದಗಿಸಿದರು. ಸಂಜಯ್ ನೀಡಿದ ಪಾಸ್ ಅನ್ನು ಸುಖ್‌ಜೀತ್ ಗೋಲಾಗಿ ಪರಿವರ್ತಿಸಲು ಯಶಸ್ವಿಯಾದರು. ಮುಂದಿನ ನಿಮಿಷದಲ್ಲಿ ಅಭಿಷೇಕ್ ಇನ್ನೊಂದು ಗೋಲು ಹೊಡೆದು ಮುನ್ನಡೆಯನ್ನು 2-0ಕ್ಕೇರಿಸಿದರು. ಅಭಿಷೇಕ್ ಅವರು ಜಪಾನಿನ ಹಲವು ಡಿಫೆಂಡರ್‌ಗಳ ಕಣ್ತಪ್ಪಿಸಿ ಚೆಂಡನ್ನು ಉರುಳಿಸಿಕೊಂಡು ಹೋಗಿ ಗೋಲು ಹೊಡೆದರು.
ಮಂಗಳವಾರ ಕೂಟಕ್ಕೆ ವಿಶ್ರಾಂತಿ ದಿನವಾಗಿದ್ದು ಬುಧವಾರ ಭಾರತವು ಕಳೆದ ಋತುವಿನ ರನ್ನರ್ ಅಪ್ ಮಲೇಷ್ಯವನ್ನು ಎದುರಿಸಲಿದೆ.