ಪಟ್ನಾ : ಇಲ್ಲಿನ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಹುಸಿ ಕರೆ ಬಂದುದನ್ನು ಅನುಸರಿಸಿ ನಿನ್ನೆ ಭಾನುವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಆತಂಕ, ಗೊಂದಲ, ಭೀತಿ ತಲೆದೋರಿತು.
ಕರೆ ಬಂದಾಕ್ಷಣ ವಿಮಾನ ನಿಲ್ದಾಣಲ್ಲಿನ ಭದ್ರತಾ ಅಧಿಕಾರಿಗಳು ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡರು. ಕರೆ ಮಾಡಿದಾತ ತಾನು ಕೋಲ್ಕತದವನೆಂದೂ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿಯೂ ಬೆದರಿಕೆ ಹಾಕಿದ್ದ.
ಒಡನೆಯೇ ಬಾಂಬ್ ವಿಲೇವಾರಿ ದಳ, ಶ್ವಾನದಳ ಗಳನ್ನು ಶೋಧ ಕಾರ್ಯಾಚರಣೆಗೆ ಇಳಿಸಲಾಯಿತು. ವಿಮಾನದ ಹಾರಾಟಗಳನ್ನು ಸ್ವಲ್ಪಕಾಲ ನಿಲ್ಲಿಸಲಾಯಿತು. ಪರಿಣಾಮವಾಗಿ ಹಲವಾರು ವಿಮಾನಗಳ ಹಾರಾಟ ವಿಳಂಬಗೊಂಡಿತು.
ವಿಮಾನ ನಿಲ್ದಾಣವನ್ನು ಆಮೂಲಾಗ್ರವಾಗಿ ಶೋಧಿಸಿ ಯಾವುದೇ ಸ್ಫೋಟಕ ಪತ್ತೆಯಾಗದಿದ್ದಾಗ ಅನಾಮಿಕನ ಕರೆ ಹುಸಿ ಎಂದು ಅಧಿಕಾರಿಗಳು ಘೋಷಿಸಿದರು.
ಹುಸಿ ಕರೆಯ ಮೂಲವನ್ನು ಪತ್ತೆ ಹಚ್ಚಲಾಗುತ್ತಿದ್ದು ದುಷ್ಕರ್ಮಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್‌ಎಸ್‌ಪಿ ಗರೀಮಾ ಮಲಿಕ್ ತಿಳಿಸಿದ್ದಾರೆ.