Advertisement

Hoax call: ಬೆದರಿಕೆ ಹಾಕುವ ದುಷ್ಕರ್ಮಿಗಳ ವಿಮಾನಯಾನವನ್ನೇ ನಿರ್ಬಂಧಿಸಲು ನಿಯಮ: ಸಚಿವ

12:18 AM Oct 22, 2024 | Team Udayavani |

ಹೊಸದಿಲ್ಲಿ: ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕುವ ದುಷ್ಕರ್ಮಿಗಳು ವಿಮಾನದಲ್ಲಿ ಪ್ರಯಾಣಿಸದಂತೆ ಮಾಡುವ ಜೊತೆಗೆ ನಿಯಮಗಳಿಗೆ ತಿದ್ದುಪಡಿ ತಂದು ಇಂಥ ಕೃತ್ಯವೆಸಗಿದವರಿಗೆ ಜೀವಾವಧಿ ಶಿಕ್ಷೆ ಜಾರಿಗೂ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ್ ನಾಯ್ಡು ಸೋಮವಾರ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, ಕಳೆದ ಏಳು ದಿನಗಳಲ್ಲಿ ಸುಮಾರು 100 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಎಲ್ಲಾ ಬೆದರಿಕೆಗಳು ಹುಸಿ ಎಂಬುದು ನಂತರ ದೃಢಪಟ್ಟಿವೆ. ನಾಗರಿಕ ವಿಮಾನಯಾನ ಸುರಕ್ಷತೆ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ 1982 ಮತ್ತು ವಾಯುಯಾನ ಭದ್ರತಾ ನಿಯಮಗಳಿಗೆ ತಿದ್ದುಪಡಿ ತರಲು ಯೋಜಿಸಲಾಗಿದೆ. ವಿಮಾನಗಳಿಗೆ ಬಾಂಬ್ ಬೆದರಿಕೆಯ ಪರಿಸ್ಥಿತಿಯ ಕುರಿತು ಗೃಹ ಸಚಿವಾಲಯದೊಂದಿಗೆ ನಾಗರಿಕ ವಿಮಾನಯಾನ ಸುರಕ್ಷತೆ ಬ್ಯೂರೋ ನಿರಂತರವಾಗಿ ಸಂಪರ್ಕ ಹೊಂದಿದೆ ಎಂದು ತಿಳಿಸಿದರು.

ಬೆದರಿಕೆಗಳು ಹುಸಿಯಾಗಿದ್ದರೂ, ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ಸಂಸ್ಥೆಗಳು ಈ ವಿಷಯವನ್ನು ಲಘುವಾಗಿ ಪರಿಗಣಿಸಿಲ್ಲ. ಕಟ್ಟುನಿಟ್ಟಾದ ಶಿಷ್ಟಾಚಾರ ಅನುಸರಿಸುತ್ತಿವೆ. ಇಂತಹ ಬೆದರಿಕೆಗಳು ಬಂದಾಗ ಇದು ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಾಗಿದ್ದು, ಅಂತಾರಾಷ್ಟ್ರೀಯ ಶಿಷ್ಟಾಚಾರ ಅನುಸರಿಸಲಾಗುವುದು ಎಂದರು.

ಕಳೆದ ವಾರ 8 ವಿಮಾನಗಳ ಪ್ರಯಾಣವನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಪ್ರತಿಯೊಂದು ಬೆದರಿಕೆಯನ್ನೂ ಪ್ರತ್ಯೇಕವಾಗಿ ನಿರ್ಣಯಿಸಲಾಗುತ್ತದೆ. ನಮ್ಮ ಪ್ರತಿಕ್ರಿಯೆಯು ಸಮರ್ಥ ಮತ್ತು ಕ್ರಿಯಾತ್ಮಕವಾಗಿದೆ. ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅವುಗಳಲ್ಲಿ ಬಹುತೇಕ ಹುಸಿ ಬೆದರಿಕೆಯಾಗಿದ್ದರೂ ಅವುಗಳನ್ನು ಲಘುವಾಗಿ ತೆಗೆದುಕೊಂಡಿಲ್ಲ. ಪ್ರಯಾಣಿಕರ ಜೀವ, ಭದ್ರತೆ ಪರಿಸ್ಥಿತಿ ಮತ್ತು ಶಿಷ್ಟಾಚಾರ ಪ್ರಮುಖವಾಗಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಯಾವುದೇ ಪಿತೂರಿ ಕಂಡು ಬಂದಿಲ್ಲ: 75ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ:
ಸಾಮಾಜಿಕ ಜಾಲತಾಣ ಮೂಲಕ ಒಂದು ವಾರದಲ್ಲಿ 75ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಸಂದೇಶಗಳು ಬಂದಿವೆ. ಶನಿವಾರ ಒಂದೇ ದಿನ ಇಂಡಿಗೋ, ಏರ್‌ ಇಂಡಿಯಾ, ವಿಸ್ತಾರ ಸೇರಿದಂತೆ 30ಕ್ಕೂ ಹೆಚ್ಚು ವಿಮಾನಗಳಿಗೆ ಸಂದೇಶಗಳು ಬಂದಿವೆ. ಬೆದರಿಕೆ ಕೆಲವು ಸಂದೇಶಗಳಲ್ಲಿ ಒಂದೇ ರೀತಿಯ ವಾಕ್ಯಗಳು ಪುನಾರವರ್ತಿತವಾಗಿರುವ ಬಗ್ಗೆ ಪೊಲೀಸರಿಗೆ ತನಿಖೆ ವೇಳೆ ತಿಳಿದು ಬಂದಿದೆ ಎಂದು ಕೇಂದ್ರ ಸಚಿವ ಹೇಳಿದರು.  ಬೆದರಿಕೆ ಹಿಂದೆ ಸಂಚು ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ತನಿಖೆ ನಡೆಯುತ್ತಿದೆ. ನಿರ್ದಿಷ್ಟವಾದ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಆದ್ಯತೆಯಾಗಿದೆ ಎಂದು ಸಚಿವ ನಾಯ್ಡು ಹೇಳಿದರು.

Advertisement

ಉಡಾನ್ ಯೋಜನೆ ಕುರಿತು ಮಾತನಾಡಿದ ನಾಯ್ಡು, “ನಾವು ಉಡಾನ್ ಯೋಜನೆಯ 10 ವರ್ಷಗಳವರೆಗೆ ಮುಂದುವರಿಸಲು ಬಯಸುತ್ತಿದ್ದೇವೆ. ಏಕೆಂದರೆ, ಮುಂದಿನ 5 ವರ್ಷಗಳಲ್ಲಿ ನಾವು 50ಕ್ಕೂ ಹೆಚ್ಚಿನ ವಿಮಾನ ನಿಲ್ದಾಣಗಳ ಆರಂಭಿಸಲು ಯೋಜಿಸುತ್ತಿದ್ದೇವೆ. ನಾವು ಇಂದು 157 ವಿಮಾನ ನಿಲ್ದಾಣಗಳನ್ನು ಹೊಂದಿದ್ದೇವೆ. ಅದು 350ಕ್ಕೆ ಏರಬಹುದು ಎಂದು ಹೇಳಿದ್ದಾರೆ.

ಈಗಿನ ವ್ಯವಸ್ಥೆ ಏನು?
ದೇಶದಲ್ಲಿ ಹುಸಿ ಬಾಂಬ್‌ ಬೆದರಿಕೆ ಒಡ್ಡುವವರನ್ನು ಬಂಧಿಸಿ ಶಿಕ್ಷೆ ನೀಡಲು ಸದ್ಯ ನಿಗದಿತವಾದ ಕಾನೂನು ಇಲ್ಲ. ಇಂಥ ಪಿಡುಗು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾನೂನು ಜಾರಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ವಿಪಿಎನ್‌ ಬಳಿಕೆಯಿಂದ ಸಮಸ್ಯೆ
ವಿಮಾನಗಳಿಗೆ ಬೆದರಿಕೆ ಕರೆ ಒಡ್ಡುತ್ತಿರುವವರು ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಇವರೆಲ್ಲರೂ ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌ (ವಿಪಿಎನ್‌) ಬಳಕೆ ಮಾಡುತ್ತಿರುವುದರಿಂದ ಆರೋಪಿಗಳು ಇರುವ ಸರಿಯಾದ ಲೊಕೇಶನ್‌ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಪತ್ತೆ ಮಾಡುವ ತಂತ್ರಜ್ಞಾನ ಭಾರತದ ತನಿಖಾ ಏಜೆನ್ಸಿಗಳ ಬಳಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next