Advertisement

ಮಂಗಳೂರು ಸಹಿತ ದೇಶದ 6 ನಗರಗಳಲ್ಲಿ  “ಎಚ್‌ಎಂ ರ‍್ಯಾಪ್‌’ಪ್ರಕೃತಿ ವಿಕೋಪ ಅಧ್ಯಯನ 

11:59 PM May 05, 2022 | Team Udayavani |

ಮಂಗಳೂರು: ನೆರೆ, ಚಂಡಮಾರುತ ಇತ್ಯಾದಿ ಪ್ರಾಕೃತಿಕ ವಿಕೋಪಗಳಿಂದ ನಗರಗಳನ್ನು ರಕ್ಷಿಸುವ ಉದ್ದೇಶದಿಂದ ಮಂಗಳೂರು ಸಹಿತ ದೇಶದ ಆರು ನಗರಗಳಲ್ಲಿ “ಎಚ್‌ಎಂ ರ‍್ಯಾಪ್‌’ (ಹೈಡ್ರೋ-ಮೆಟೀಯೊರಾಲಾಜಿಕಲ್‌ ರಿಸೈಲೆನ್ಸ್‌ ಆ್ಯಕ್ಷನ್‌ ಪ್ಲಾನ್ಸ್‌) ಅಧ್ಯಯನ ಕೈಗೆತ್ತಿಕೊಳ್ಳಲಾಗಿದೆ.

Advertisement

ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ (ಎನ್‌ಡಿಎಂಎ)ವು “ನ್ಯಾಷನಲ್‌ ಸೈಕ್ಲೋನ್‌ ರಿಸ್ಕ್ ಮಿಟಿಗೇಷನ್‌ ಪ್ರಾಜೆಕ್ಟ್’ನಡಿ ಕೇರಳದ ಕೊಚ್ಚಿ, ಮಹಾರಾಷ್ಟ್ರದ ರತ್ನಗಿರಿ, ಗುಜರಾತ್‌ನ ಪೋರಬಂದರ್‌, ಪಶ್ಚಿಮ ಬಂಗಾಲದ ಬಿದನ್ನಗರ್‌ಗಳಲ್ಲಿ ಪ್ರಾಕೃತಿಕ ವಿಕೋಪ ಸುರಕ್ಷ ಯೋಜನೆಗಳನ್ನು ಸಿದ್ಧಪಡಿಸಲು ಮುಂದಾಗಿದೆ. ಇದರ ಪೂರ್ವಭಾವಿಯಾಗಿ ತಜ್ಞರಿಂದ “ಎಚ್‌ಎಂ ರ‍್ಯಾಪ್‌’ ನಡೆಸಲಾಗುತ್ತಿದೆ. ಎಚ್‌ಎಂ ರ‍್ಯಾಪ್‌ ನಡೆಸುವ ಜವಾಬ್ದಾರಿಯನ್ನು ಎನ್‌ಡಿಎಂಎ ರಾಯಲ್‌ ಹಾಸ್ಕೊನಿಂಗ್‌ ಸಂಸ್ಥೆಗೆ ವಹಿಸಿದ್ದು, ಅದು ಮಂಗಳೂರಿಗೆ ಸಂಬಂಧಿಸಿ ಸುರತ್ಕಲ್‌ ಎನ್‌ಐಟಿಕೆಯ ತಜ್ಞರನ್ನು ಆಯ್ಕೆ ಮಾಡಿದೆ.

ಎನ್‌ಡಿಎಂಎ ಈಗಾಗಲೇ ಡಿಜಿಪಿಎಸ್‌- ರ‍್ಯಾ ಪಿಡ್‌ ಸರ್ವೇ ಪೂರ್ಣಗೊಳಿಸಿದೆ. ಅಲ್ಲದೆ ಸಮುದ್ರದ ಮಟ್ಟದ ಅಧ್ಯಯನವನ್ನೂ ನಡೆಸಲಾಗಿದೆ. ಎನ್‌ಐಟಿಕೆ ತಜ್ಞರು ಒಂದೂವರೆ ವರ್ಷದಿಂದ ಸಮಗ್ರ ಅಧ್ಯಯನ ನಡೆಸುತ್ತಿದ್ದು, ಈ ವರದಿ ಕಿರು ಅವಧಿ (5ರಿಂದ 10 ವರ್ಷ) ಮತ್ತು ದೀರ್ಘ‌ ಅವಧಿ (40-50 ವರ್ಷ) ವರೆಗಿನ ಯೋಜನೆಗಳಿಗೆ ಸಂಬಂಧಿಸಿರುತ್ತದೆ.

ವೆದರ್‌ ರಾಡಾರ್‌ ಸ್ಥಾಪನೆ? :

ನೆರೆ, ಚಂಡಮಾರುತ, ಸಿಡಿಲು, ಭೂಕುಸಿತ, ಬಿಸಿಗಾಳಿ ಹಾಗೂ ಹವಾಮಾನ ವೈಪರೀತ್ಯದ ಇತರ ದುಷ್ಪರಿಣಾಮಗಳನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್‌ಎಂ ರ‍್ಯಾಪ್‌ ಸಲಹೆ ನೀಡಲಿದೆ. ಮಂಗಳೂರಿನಲ್ಲಿ “ವೆದರ್‌ ರಾಡಾರ್‌’ ಇಲ್ಲದಿರುವುದರಿಂದ ಇದರ ಸ್ಥಾಪನೆಗೆ ಸಲಹೆ ನೀಡುವ ಸಾಧ್ಯತೆ ಇದೆ. ವೆದರ್‌ ರಾಡಾರ್‌ 350ರಿಂದ 400 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಾಕೃತಿಕ ಅವಘಡಗಳ ಅಪಾಯದ ಮುನ್ಸೂಚನೆಯನ್ನು ನೀಡುತ್ತವೆ. ಸದ್ಯ ಕೊಚ್ಚಿನ್‌ನಲ್ಲಿ ಇಂತಹ ರಾಡಾರ್‌ ಇದೆ. ಮಂಗಳೂರಿನಲ್ಲಿ ವೇದರ್‌ ರಾಡಾರ್‌ನೊಂದಿಗೆ ಸೈಕ್ಲೋನ್‌ ಶೆಲ್ಟರ್‌, ಕ್ಷಿಪ್ರ ಸಂಚಾರಕ್ಕೆ ಅನುವಾಗುವ ರಸ್ತೆಗಳು, ಮಳೆ ನೀರು ಚರಂಡಿ ಮೇಲ್ದರ್ಜೆಗೇರಿಸುವಿಕೆ, ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳ ಪರಿಷ್ಕರಣೆ ಇತ್ಯಾದಿ ಬಗ್ಗೆಯೂ ಎಚ್‌ಎಂ ರ‍್ಯಾಪ್‌ ಬೆಳಕು ಚೆಲ್ಲುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರಾಕೃತಿಕ ವಿಕೋಪದಿಂದ ನಗರವನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಎಚ್‌ಎಂ ರ‍್ಯಾಪ್‌ ಅಧ್ಯಯನ ನಡೆಯುತ್ತಿದ್ದು, ಮಂಗಳೂರು ನಗರವನ್ನು ಪೈಲಟ್‌ ಸಿಟಿಯನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯ ಕಂದಾಯ ಇಲಾಖೆಯ ಮೂಲಕ ಮುಂದಿನ ಯೋಜನೆಗಳು ಕಾರ್ಯಗತಗೊಳ್ಳಲಿವೆ. ಇದಕ್ಕೆ ಪೂರಕವಾಗಿ ಪಾಲಿಕೆ ಕೆಲಸ ಮಾಡಲಿದೆ. -ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತರು, ಎಚ್‌ಎಂ ರ‍್ಯಾಪ್‌  ಸಿಟಿ ನೋಡೆಲ್‌ ಅಧಿಕಾರಿ

ಪ್ರಾಕೃತಿಕ ವಿಕೋಪಗಳ ಕುರಿತು ವೈಜ್ಞಾನಿಕವಾಗಿ ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ. ಅಧ್ಯಯನ ಅಂತಿಮ ಹಂತದಲ್ಲಿದ್ದು, ಮುಂದಿನ ಜೂನ್‌ ಅಥವಾ ಜುಲೈಯಲ್ಲಿ ಎನ್‌ಡಿಎಂಎಗೆ ಸಲ್ಲಿಸಲಾಗುವುದು. ಅನಂತರ ಎನ್‌ಡಿಎಂಎ ಸೂಕ್ತ ಕ್ರಮದ ಬಗ್ಗೆ ನಿರ್ಧರಿಸಲಿದೆ. -ಡಾ| ರಮೇಶ್‌, ಸಹಾಯಕ ಪ್ರಾಧ್ಯಾಪಕರು, ಎನ್‌ಐಟಿಕೆ, ಎಚ್‌ಎಂ ರ್ಯಾಪ್‌ ಸಿಟಿ ಕೋ-ಆರ್ಡಿನೇಟರ್‌

 

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next