ಕಲಬುರಗಿ: ಹಿಂದುಳಿದ ಹೈದ್ರಾಬಾದ ಕರ್ನಾಟಕ ಭಾಗದಲ್ಲಿನ ಶೈಕ್ಷಣಿಕ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿರುವ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ) ಇದೀಗ ಬೆಂಗಳೂರಿನಲ್ಲಿ ಇಂಟರ್‌ನ್ಯಾಷನಲ್ ಶಾಲೆಯೊಂದು ತೆರೆಯುವ ಮುಖಾಂತರ ಮಹೋನ್ನತ ಹೆಜ್ಜೆ ಇಟ್ಟಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಶುಕ್ರವಾರ ಎಚ್‌ಕೆಇ ಸಂಸ್ಥೆಯ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಎರಡನೇ, ಮೂರನೇ ಹಾಗೂ ನಾಲ್ಕನೇ ಅಂತಸ್ತಿನ ಸಂಕಿರಣ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಇಂಟರ್‌ನ್ಯಾಷನಲ್ ಶಾಲೆಗೆ ಅನುಗುಣವಾಗಿ ಕಟ್ಟಡ ನಿರ್ಮಾಣವಾಗುತ್ತಿರುವ ಜತೆಗೆ ಇತರ ಕಾರ್ಯಗಳು ಸಹ ಜತೆ-ಜತೆಗೆ ಬರಬೇಕು ಎಂದರು.
ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿ, ಈಗಾಗಲೇ ಹೇಳಿರುವಂತೆ ಬೆಂಗಳೂರಲ್ಲಿ ಎಚ್‌ಕೆಇ ರಾಷ್ಟ್ರೀಯ ಪಬ್ಲಿಕ್ ಶಾಲಾ ಕಟ್ಟಡಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ವರ್ಷ(2019)ದಿಂದ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಪಬ್ಲಿಕ್ ಶಾಲೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಬೀದರ ಹಾಗೂ ರಾಯಚೂರಲ್ಲಿ ಸಹ 10 ಹಾಗೂ 5 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಪಬ್ಲಿಕ್ ಮಾದರಿಯ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಬರುವ ಡಿಸೆಂಬರ್ ಮಾಸದಲ್ಲಿ ಕಟ್ಟಡ ಪ್ರಾರಂಭಕ್ಕೆ ಅಡಿಗಲ್ಲು ನೆರವೇರಿಸಲಾಗುವುದು. ಮುಖ್ಯವಾಗಿ ಸಂಸ್ಥೆಯ ಅನುದಾನಿತ ಪದವಿ ಕಾಲೇಜುಗಳಲ್ಲಿ 80ಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ 8 ಹುದ್ದೆಗಳ ಭರ್ತಿಗೆ ಸರ್ಕಾರದ ಅನುಮತಿ ಕೇಳಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಎಂ.ವೈ. ಪಾಟೀಲ, ಬಿ.ಜಿ. ಪಾಟೀಲ, ಸಂಸ್ಥೆ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಆಡಳಿತ ಮಂಡಳಿ ಕಾರ್ಯದರ್ಶಿ ಡಾ| ನಾಗೇಂದ್ರ ಮಂಠಾಳೆ, ಜಂಟಿ ಕಾರ್ಯದರ್ಶಿ ಗಂಗಾಧರ ಏಲಿ, ಸದಸ್ಯರಾದ ವಿಜಯಕುಮಾರ ದೇಶಮುಖ ಮುಂತಾದವರಿದ್ದರು.