ಗದಗ: ಕೋವಿಡ್ 19 ಲಾಕ್‌ಡೌನ್ ಸಡಿಲಗೊಳಿಸಿರುವ ರಾಜ್ಯ ಸರಕಾರದ ನಿರ್ಧಾರ ಬೆಂಗಳೂರು ಕೇಂದ್ರಿತ ಹಾಗೂ ಸ್ಥಿತಿವಂತರ ಪರವಾದ ನಿರ್ಧಾರವಾಗಿದೆ. ಸರಕಾರದ ಈ ನಿರ್ಧಾರದಿಂದ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗಿದ್ದು, ತಕ್ಷಣವೇ ಈ ನಿರ್ಧಾರ ಬದಲಿಸಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‌ಡೌನ್‌ನ್ನು ಮೇ 3, 2020ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಪ್ರಕಟಿಸಿತ್ತು. ಆದರೆ ಏಕಾಏಕಿ ಮೇ 22ರಂದು ಲಾಕ್‌ಡೌನ್ ಸಡಿಲಗೊಳಿಸಿದೆ. ಅದರೊಂದಿಗೆ ರಿಯಲ್ ಎಸ್ಟೇಟ್, ಕಟ್ಟಡ ಕಾಮಗಾರಿಗಳಿಗೆ ಅವಕಾಶ ನೀಡಿರುವುದು ಉಳ್ಳವರ ಪರವಾದ ನಿರ್ಧಾರ ಎಂಬುದು ಸುಳ್ಳಲ್ಲ. ರಾಜ್ಯದಲ್ಲಿ ಈ ಲಾಕ್‌ಡೌನ್ ಸಡಿಲಿಕೆ ನಂತರ ಬೆಂಗಳೂರು ಮತ್ತಿತರ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಸೋಂಕು ಸಾಮುದಾಯಕ್ಕೆ ಹಬ್ಬುತ್ತಿದೆ ಎಂಬುದು ಭಾಸವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯ ಸರಕಾರ ತನ್ನ ನಿರ್ಧಾರ ಪುನರ್ ವಿಮರ್ಶೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಏ. 22ರವರೆಗೆ 29,512 ಜನರನ್ನು ಪರೀಕ್ಷೆಗೊಳಪಡಿಸಿದೆ. ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಬೆನ್ನುಚಪ್ಪರಿಸಿಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ 95,210, ತಮಿಳುನಾಡಿನಲ್ಲಿ 65,977, ಆಂಧ್ರಪ್ರದೇಶದಲ್ಲಿ 54,338, ಕೇರಳದಲ್ಲಿ 21,334, ಗುಜರಾತ್‌ನಲ್ಲಿ 42,384, ರಾಜಸ್ಥಾನದಲ್ಲಿ 74,484, ಮಧ್ಯಪ್ರದೇಶದಲ್ಲಿ 33,074, ಉತ್ತರಪ್ರದೇಶದಲ್ಲಿ 45,483 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಹೆಚ್ಚಿನ ತಪಾಸಣೆ ನಡೆಸದೇ, ರಾಜ್ಯದ ಜನತೆಯಿಂದ ಸತ್ಯವನ್ನು ಮರೆಮಾಚಲಾಗಿದೆ ಎಂದು ಕಿಡಿಕಾರಿದರು. ಜಿಪಂ ಅಧ್ಯಕ್ಷ ಸಿದ್ದು ಪಾಟೀಲ, ವಾಸಣ್ಣ ಕುರಡಗಿ ಇದ್ದರು.
ಕಳಪೆ ಕಿಟ್ ತನಿಖೆಯಾಗಲಿ : ರಾಜ್ಯ ಸರಕಾರ ಖರೀದಿಸಿರುವ ಕೋವಿಡ್ 19 ಟೆಸ್ಟಿಂಗ್ ಕಿಟ್ ಗಳು ಬಳಕೆಗೆ ಉಪಯುಕ್ತವಲ್ಲ ಎಂದು ಐಸಿಎಂಆರ್ ಹೇಳಿರುವ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಕಿಟ್‌ಗಳ ಖರೀದಿ ಪ್ರಕ್ರಿಯೆಯನ್ನು ಉನ್ನತ ತನಿಖೆಗೆ ಒಳಪಡಿಸಬೇಕು. ಈ ಕೂಡಲೇ ಕೋವಿಡ್-19 ಟೆಸ್ಟಿಂಗ್ ಕಿಟ್‌ಗಳ ಖರೀದಿಗೆ ಆದೇಶ ನೀಡಿದ್ದು ಯಾರು? ಪೂರೈಸಿದ್ದು ಯಾರು? ಹಾಗೂ ಖರೀದಿಗೂ ಮುನ್ನ ಕಿಟ್‌ಗಳ ಗುಣಮಟ್ಟವನ್ನು ಪರಿಶೀಲಿಸಲಾಗಿದೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪಾದರಾಯನಪುರ ನಿವಾಸಿಗಳಲ್ಲಿ ಐವರಿಗೆ ಕೋವಿಡ್ 19 ದೃಢಪಟ್ಟಿದೆ. ಹೀಗಾಗಿ ಅವರನ್ನು ಹಸಿರು ವಲಯದಲ್ಲಿರುವ ರಾಮನಗರದ ಜೈಲಿನಲ್ಲಿ ಇಡಲು ಮಾಜಿ ಮುಖ್ಯಮಮತ್ರಿ ಎಚ್.ಡಿ. ಕುಮಾರಸ್ವಾಮಿ ವಿರೋಧಿ ಸಿರಬಹುದು. ರೆಡ್ ಝೋನ್ ನಲ್ಲಿರುವ ಜನರನ್ನು ಗ್ರೀನ್ ಜೋನ್‌ನಲ್ಲಿ ಕ್ವಾರಂಟೈನ್, ಐಸೋಲೇಷನ್ ಮಾಡುವ ಮುನ್ನ ಸರಕಾರವೂ ಯೋಚಿಸಬೇಕು.
– ಎಚ್.ಕೆ. ಪಾಟೀಲ, ಶಾಸಕ