ಶ್ರೀನಗರ : ಜಮ್ಮು ಕಾಶ್ಮೀರದಲ್ಲಿನ ಉಗ್ರ ಸಂಘಟನೆಗಳಿಗೆ ಹರಿದು ಬರುತ್ತಿದೆ ಎನ್ನಲಾದ ವಿದೇಶಿ ನಿಧಿಯ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ಬೆಳಗ್ಗೆ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ನ ಮಗ ಶಕೀಲ್ ನನ್ನು ಆತನ ರಾಮಬಾಗ್‌ನಲ್ಲಿನ ನಿವಾಸದಲ್ಲಿ ಬಂಧಿಸಿದೆ.
ಶಕೀಲ್ ಹಿಜ್ಬುಲ್ ಮುಖ್ಯಸ್ಥನ ಎರಡನೇ ಮಗ ಮತ್ತು “ಸ್ಕಿಮ್ಸ್ ಸೌರಾ’ ದಲ್ಲಿ ಹಿರಿಯ ಲ್ಯಾಬ್ ಟೆಕ್ನೀಶಿಯನ್ ಆಗಿ ದುಡಿಯುತ್ತಿದ್ದಾನೆ.
ಇದೇ ವೇಳೆ ಸಂವಿಧಾನದ 35ಎ ವಿಧಿಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿರುವುದರ ವಿರುದ್ಧ ಕಾಶ್ಮೀರದ ಪ್ರತ್ಯೇಕತಾವಾದಿಗಳು ಬಂದ್ ಕರೆ ನೀಡಿರುವುದನ್ನು ಅನುಸರಿಸಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆಗಳನ್ನು ತಡೆಯಲು ನಿರ್ಬಂಧಕಾಜ್ಞೆ ವಿಧಿಸಲಾಗಿದೆ.
ಪ್ರತ್ಯೇಕತಾವಾದಿಗಳ ಬಂದ್ ಕರೆಯ ಪ್ರಯುಕ್ತ ಇಂದು ಕಾಶ್ಮೀರ ಕಣಿವೆಯಲ್ಲಿ ಜನಜೀವನ ಬಹುತೇಕ ನಿಲುಗಡೆಗೆ ಬಂದಿದೆ. ಆದರೆ ಎಲ್ಲಿಯೂ ಅಹಿತಕರ ಘಟನೆ ನಡೆದ ವರದಿಗಳಿಲ್ಲ.
ಸಯ್ಯದ್ ಅಲಿ ಗೀಲಾನಿ, ಮೀರ್ ವೇಜ್ ಉಮರ್ ಫಾರೂಕ್ ಮತ್ತು ಮುಹಮ್ಮದ್ ಯಾಸಿನ್ ಮಲಿಕ್ ನೇತೃತ್ವದ ಜಂಟಿ ಪ್ರತಿರೋಧ ಸಂಘಟನೆ ಆಗಸ್ಟ್ 30 ಮತ್ತು 31ರಂದು ಕಾಶ್ಮೀರ ಬಂದ್ ಗೆ ಕರೆ ನೀಡಿದೆ.