ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಗೆ ಭಂಗ ತರುವ ಪಾಕಿಸ್ತಾನದ ಯತ್ನ ಮುಂದುವರಿದಿದ್ದು, ಈಗ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮೂಲಕ ಭಾರತದ ವಿರುದ್ಧ ವಿಷಕಾರುವ ಯತ್ನವನ್ನು ನಡೆಸಿರುವುದು ಬೆಳಕಿಗೆ ಬಂದಿದೆ.
ಭಾರತದ ಭದ್ರತಾ ಪಡೆಗಳ ವಿರುದ್ಧ ಹೋರಾಡಲು ಕಾಶ್ಮೀರಿಗರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಪಾಕ್ ಸರ್ಕಾರಕ್ಕೆ ಉಗ್ರ ಸಲಾಹುದ್ದೀನ್ ಸೂಚಿಸುತ್ತಿರುವ ವಿಡಿಯೋವೊಂದು ಬಹಿರಂಗವಾಗಿದೆ.
“ಭಾರತದ ವಿರುದ್ಧದ ನಮ್ಮ ಯುದ್ಧ ಮುಂದುವರಿದಿದೆ. ಭಾರತೀಯ ಪಡೆಗಳ ವಿರುದ್ಧ ಹೋರಾಡಲು ಕಾಶ್ಮೀರಿಗರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಪಾಕಿಸ್ತಾನ ಸರ್ಕಾರದ ಕರ್ತವ್ಯವಾಗಿದೆ. ಅಲ್ಲಾಹನ ಹೆಸರಲ್ಲಿ ಭಯೋತ್ಪಾದನೆ ಸಾರಲು ಕಾಶ್ಮೀರಿಗರಿಗೆ ಪಾಕ್ ಸಹಾಯ ಮಾಡಲೇಬೇಕು. ಕಾಶ್ಮೀರದ ಮೇಲೆ ಭಾರತದ ನಿಯಂತ್ರಣವನ್ನು ಕೊನೆಗಾಣಿಸಲು ಕಠಿಣ ಕ್ರಮ ಕೈಗೊಳ್ಳಲೇಬೇಕಾಗುತ್ತದೆ’ ಎಂದು ಸಲಾಹುದ್ದೀನ್ ಹೇಳಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಈ ಪ್ರಚೋದನಾತ್ಮಕ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, “ಉಗ್ರ ಸಲಾಹುದ್ದೀನ್ ಎಲ್ಲರ ಗಮನ ಸೆಳೆಯಲು ಇಂಥದ್ದನ್ನೆಲ್ಲ ಮಾಡುತ್ತಿದ್ದಾನೆ. ಆತನಿಗೆ ನಿಜವಾಗಲೂ ತಾಕತ್ತಿದ್ದರೆ, ಶ್ರೀನಗರದ ಲಾಲ್‌ಚೌಕ್‌ಗೆ ಬಂದು ನಿಂತುಕೊಳ್ಳಲಿ. ಆಗ ಅವನಿಗೆ ಏನಾಗುತ್ತದೆ ಎಂದು ನೋಡಿ. ಈ ಭಯೋತ್ಪಾದಕರನ್ನೆಲ್ಲ ಗಂಭೀರವಾಗಿ ಪರಿಗಣಿಸದೇ ಇರುವುದೇ ಒಳ್ಳೆಯದು’ ಎಂದಿದ್ದಾರೆ.
ಐವರು ಶಂಕಿತ ಉಗ್ರರ ಬಂಧನ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಶನಿವಾರ ಪೊಲೀಸರು ಮತ್ತು ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿವೆ. ವಾಹನಗಳ ತಪಾಸಣೆ ವೇಳೆ ಈ ಶಂಕಿತರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಪಿಸ್ತೂಲ್ ಮತ್ತು ಪ್ರಚೋದನಾತ್ಮಕ ಸಾಹಿತ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.