Advertisement

HIV ಸೋಂಕು ಇಳಿಮುಖ: ದಿನೇಶ್‌ ಗುಂಡೂರಾವ್‌

11:12 PM Dec 01, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ದಶಕದಲ್ಲಿ ಎಚ್‌ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅದರಲ್ಲೂ “ಗರ್ಭಿಣಿಯರಲ್ಲಿ ಶೂನ್ಯ’ ಸಾಧನೆಯತ್ತ ಹೆಜ್ಜೆ ಇಟ್ಟಿದ್ದು, ಎಚ್‌ಐವಿ ಸೋಂಕು ಮುಕ್ತ ಆಗುವ ದಿನಗಳು ದೂರ ಇಲ್ಲ.

Advertisement

2013-14ರಲ್ಲಿ ಆಗಿನ ಸಂಖ್ಯೆಗೆ ಅನುಗುಣವಾಗಿ ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಿದಾಗ, ಸೋಂಕು ಪ್ರಮಾಣ ಶೇ. 0.12 ಇತ್ತು. 2023ರ ಅಕ್ಟೋಬರ್‌ ಅಂತ್ಯಕ್ಕೆ ಶೇ. 0.03ಗೆ ತಲುಪಿದೆ. ಅಂದರೆ ಶೂನ್ಯ ಸಾಧನೆಗೆ ಬಹುತೇಕ ಹತ್ತಿರ ಇದ್ದೇವೆ. ಮುಂಬರುವ ದಿನಗಳಲ್ಲಿ ರಾಜ್ಯವು ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಮುಕ್ತವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್‌ ದಿನಾಚರಣೆ ಹಾಗೂ ಸಂಸ್ಥೆಯ ರಜತ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2013-14ರಲ್ಲಿ ಪರೀಕ್ಷೆಗೊಳಪಡಿಸಿದ ಗರ್ಭಿಣಿಯರಲ್ಲಿ 1,445 ಸೋಂಕಿತರಿದ್ದರು. ಈಗ 338ಕ್ಕೆ ಇಳಿಕೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ಪರೀಕ್ಷೆಗೊಳಪಡಿಸಿದ ಸಾಮಾನ್ಯ ಜನರಲ್ಲಿ ಶೇ. 1.77ರಿಂದ 0.36ಕ್ಕೆ ಇಳಿಕೆಯಾಗಿದೆ. ಈ ಅಂಕಿಅಂಶ ತುಸು ಸಮಾಧಾನಕರ ಸಂಗತಿಯಾಗಿದೆ. ನಿಯಂತ್ರಣದಲ್ಲಿ ಯಶಸ್ಸು ಸಿಗುತ್ತಿದೆ. ಆದರೆ ಇಷ್ಟಕ್ಕೇ ವಿಶ್ರಮಿಸುವಂತಿಲ್ಲ. 2030ರ ವೇಳೆಗೆ ರಾಜ್ಯವನ್ನು ಶೂನ್ಯದ ಗುರಿ ಮುಟ್ಟಿಸಬೇಕಿದೆ. ಇದಕ್ಕಾಗಿ ಇನ್ನಷ್ಟು ದಿಟ್ಟ ಹೆಜ್ಜೆ ಇಟ್ಟು, ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ ಎಆರ್‌ಟಿ ಗೆ ನೋಂದಾಯಿಸಿಕೊಂಡವರ ಸಂಖ್ಯೆ 3.82 ಲಕ್ಷ ಇದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 1.85 ಲಕ್ಷ ಆಗಿದೆ. ನಮ್ಮ ಉದ್ದೇಶ ಪರೀಕ್ಷೆಗಳನ್ನು ಸಾಧ್ಯವಾದಷ್ಟು ಹೆಚ್ಚಿಸಬೇಕು. ಸೋಂಕಿತರಿದ್ದರೆ, ಅಂತಹವರು ಸಮಾಧಾನಕರ ಜೀವನ ನಡೆಸುವ ವಾತಾವರಣ ಸೃಷ್ಟಿಸಬೇಕು. ಅದಕ್ಕೆ ಅಗತ್ಯ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

Advertisement

ಏಡ್ಸ್‌ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ರಾಯಭಾರಿ ಆಗಿರುವ ನಟ ಪ್ರೇಮ್‌ ಮಾತನಾಡಿ, ಸೋಂಕಿತರ ಬಗ್ಗೆ ಭಯಪಡಬಾರದು. ತಾರತಮ್ಯ ಮಾಡಬಾರದು. ಅವರೂ ಸಮಾಜದ ಭಾಗವಾಗಿದ್ದಾರೆ. ಎಲ್ಲರಂತೆ ಸೋಂಕಿತರನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್‌ ಅಹಮ್ಮದ್‌, ಗೋವಿಂದರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಣದೀಪ್‌, ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌, ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ ಯೋಜನೆ ನಿರ್ದೇಶಕ ಎನ್‌.ಎಂ. ನಾಗರಾಜ ಉಪಸ್ಥಿತರಿದ್ದರು.

5 ವರ್ಷಗಳಲ್ಲಿ ಏಡ್ಸ್‌ ಮುಕ್ತವಾಗಲಿ: ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಏಡ್ಸ್‌ ಮುಕ್ತವಾಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. ಏಡ್ಸ್‌ ಸೋಂಕು ಪ್ರಕರಣಗಳಲ್ಲಿ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇದು ಸಮಾಧಾನಕರ ಬೆಳವಣಿಗೆ ಅಲ್ಲ. ಹೆಚ್ಚು ಜಾಗೃತರಾಗಬೇಕಾದ ಅಗತ್ಯ ಇದೆ. 2015ರಿಂದ 2020ರ ವರೆಗೆ ಏಡ್ಸ್‌ ಸೋಂಕು ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ ಹೊಂದಲಾಗಿತ್ತು. ಆದರೆ ಇನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಇದು ಬರೀ ಆರೋಗ್ಯ ಇಲಾಖೆಯಿಂದ ಸಾಧ್ಯವಿಲ್ಲ; ಇಡೀ ಸಮಾಜದ ಹೊಣೆ ಆಗಬೇಕು ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next