Advertisement

ಪೋಲಿಯೋದಂತೆ ಎಚ್‌ಐವಿ ನಿರ್ಮೂಲನೆಯಾಗಲಿ

05:20 PM Dec 17, 2017 | Team Udayavani |

ನಗರ: ಮಾಹಿತಿ ಕಾರ್ಯಾಗಾರದ ಮೂಲಕ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಮುಂದೊಂದು ದಿನ ಪೋಲಿಯೋದಂತೆ ಮಾರಕ ಕಾಯಿಲೆ ಎಚ್‌ಐವಿ ಕೂಡ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕು ಎಂದು ಪುತ್ತೂರು ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧಿಧೀಶ, ಜೆಎಂ ಎಫ್‌ಸಿ ಮಂಜುನಾಥ್‌ ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಸರಕಾರಿ ಆಸ್ಪತ್ರೆ ಸಹಯೋಗದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಎಚ್‌ ಐವಿ- ಏಡ್ಸ್‌ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಕಾನೂನು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಹಿಂದೆ ಗಣನೀಯವಾಗಿತ್ತು. ಆದರೆ ಇಂದು ಜಾಗೃತಿ ಮೂಡಿದೆ. ಡಿ. 1ರಂದೇ ವಿಶ್ವ ಏಡ್ಸ್‌ ದಿನವನ್ನು ಆಚರಿಸಬೇಕಿತ್ತು. ಆದರೆ ಕಾರಣಾಂತರದಿಂದ ಆಗಲಿಲ್ಲ. ಎಚ್‌ಐವಿಯ ಗಂಭೀರತೆಯನ್ನು ಅರಿತು 1987- 88ರಿಂದ ಡಬ್ಲ್ಯುಎಚ್‌ಒ ಎಲ್ಲರ ಸಹಕಾರದೊಂದಿಗೆ ಜಗತ್ತಿನಾದ್ಯಂತ ಆಚರಣೆ ಮಾಡುತ್ತಿದೆ. ಭಾರತದಲ್ಲಿ ಆರಂಭದಲ್ಲಿ ಇದ್ದ ಎಚ್‌ಐವಿ ಪೀಡಿತರ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಾ ಬಂದಿದೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣದತ್ತ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು.

ಜಾಗೃತಿ ಮೂಡಿಸಬೇಕಿದೆ
ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಐಸಿಟಿಸಿ ಸಲಹೆಗಾರ ತಾರಾನಾಥ ಮಾಹಿತಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸಲು ಮಾಹಿತಿ ಕಾರ್ಯಕ್ರಮ ಶಕ್ತಿಯುತವಾಗಿ ಕೆಲಸ ಮಾಡಬೇಕಿದೆ. ಎಚ್‌ಐವಿ ಸಮಸ್ಯೆ ಹೇಳಿಕೊಂಡು ಬರುವವರಿಗೆ ಮಾನಸಿಕ ಧೈರ್ಯ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸರಕಾರಿ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕರಿದ್ದಾರೆ. ಮೊದಲಿಗೆ ಎಚ್‌ಐವಿ ಇರುವಿಕೆ ಬಗ್ಗೆ ಪರೀಕ್ಷೆ ನಡೆಸಿ, ರೋಗದ ಪತ್ತೆ ಹಚ್ಚುವಿಕೆ ನಡೆಸಲಾಗುವುದು. ಬಳಿಕ ಸೂಕ್ತ ಚಿಕಿತ್ಸಾ ಕ್ರಮ ಅನುಸರಿಸಲಾಗುವುದು ಎಂದರು.

ಶಿಸ್ತು, ಸಂಯಮ ಅಳವಡಿಸಿ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಅವರು ಮಾತನಾಡಿ, ಏಡ್ಸ್‌ ಎನ್ನುವ ಮಾರಣಾಂತಿಕ ಸೋಂಕಿಗೆ ವಿಜ್ಞಾನದಲ್ಲಿ ಇನ್ನೂ ಸೂಕ್ತ ಔಷಧ ಪತ್ತೆಯಾಗಿಲ್ಲ. ಜನತೆ ಶಿಸ್ತು, ಸಂಯಮ, ವಿಶ್ವಾಸದ ಜೀವನ ನಡೆಸಿದರೆ ಸೋಂಕು ತಗುಲದಂತೆ ನೋಡಿಕೊಳ್ಳಬಹುದು. ಆದರೆ ಏಡ್ಸ್‌ ಪೀಡಿತರನ್ನು ಅಘೋಷಿತವಾಗಿ ಬಹಿಷ್ಕರಿಸುವುದು ಅಮಾನವೀಯ ಆಗಿರುತ್ತದೆ. ಆದ್ದರಿಂದ ಏಡ್ಸ್‌ ಪೀಡಿತರನ್ನು ಮಾನವೀಯ ನೆಲೆಯಲ್ಲಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

Advertisement

ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಕುಮಾರನಾಥ್‌ ಎಸ್‌. ಶುಭಹಾರೈಸಿದರು. ವಕೀಲರ ಸಂಘದ ಜತೆ ಕಾರ್ಯದರ್ಶಿ ದೀಪಕ್‌ ಬೊಳ್ವಾರ್‌, ಸರಕಾರಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ| ಅಜಯ್‌ ಉಪಸ್ಥಿತರಿದ್ದರು. ಸರಕಾರಿ ಆಸ್ಪತ್ರೆಯ ಎಕ್ಸ್‌ರೇ ಟೆಕ್ನಿಷಿಯನ್‌ ಮಂಗಣ್ಣ ಗೌಡ ಸ್ವಾಗತಿಸಿ, ವಂದಿಸಿದರು.

ಪ್ರತ್ಯೇಕವಾಗಿ ನೋಡದಿರಿ
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾ ಧಿಕಾರಿ ಡಾ| ವೀಣಾ ಪಿ.ಎಸ್‌. ಮಾತನಾಡಿ, ಎಚ್‌ಐವಿ ಪೀಡಿತರನ್ನು ಯಾವುದೇ ಕಾರಣಕ್ಕೂ ಪ್ರತ್ಯೇಕವಾಗಿ ನೋಡಬಾರದು. ಅವರೂ ನಮ್ಮಲ್ಲಿ ಒಬ್ಬರಾಗಿರುತ್ತಾರೆ. ಇಂತಹ ಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಆಗ ಅವರಿಗೆ ಸಮಾಜದಲ್ಲಿ ಆತಂಕ ಇಲ್ಲದೆ ಬದುಕು ಸಾಗಿಸಲು ಸಾಧ್ಯ. ಕೆಮ್ಮುವುದರಿಂದ, ಸೀನುವುದರಿಂದ, ಮುಟ್ಟುವುದರಿಂದ ಎಚ್‌ಐವಿ ಬರುತ್ತದೆ ಎಂಬ ಅಭಿಪ್ರಾಯ ತಪ್ಪು. ಇಂತಹ ಕಲ್ಪನೆ ಬಿಟ್ಟು ಸಹಬಾಳ್ವೆಯ ಬದುಕು ಸಾಗಿಸಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next