ಬೆಂಗಳೂರು: ವೈಮನಸ್ಸಿನಿಂದ ದೂರವಾಗಿದ್ದ ಯುವತಿ ಬೇರೆ ಯುವಕನೊಂದಿಗೆ ಸಲುಗೆ ಬೆಳೆಸಿದ ಕಾರಣಕ್ಕೆ ಹಳೆಯ ಪ್ರಿಯಕರ ಹೆಲ್ಮೆಟ್‌ನಿಂದ ಆಕೆಯ ತಲೆಗೆ ಹಲ್ಲೆ ಮಾಡಿದ ಪರಿಣಾಮ ಯುವತಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಾಳು ಯುವತಿಗೆ (21) ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಯುವತಿ ಹರ್ಷಿತಾ (ಹೆಸರು ಬದಲಿಸಲಾಗಿದೆ) ಮೇಲೆ ಹಲ್ಲೆ ನಡೆಸಿದ ಆಕೆಯ ಹಳೆಯ ಪ್ರಿಯಕರ ಬಬಿತ್ ಹಾಗೂ ಆತನ ಸ್ನೇಹಿತ ರಾಹುಲ್ ಎಂಬಾತನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಸಿಡದೇನಹಳ್ಳಿ ನಿವಾಸಿ ಹರ್ಷಿತಾ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಬಬಿತ್ ಹಾಗೂ ಆಕೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲ ತಿಂಗಳಿಂದ ವೈಮನಸ್ಸಿನಿಂದ ದೂರವಾಗಿದ್ದರು.
ಹರ್ಷಿತಾ ಇತ್ತೀಚೆಗೆಬಬಿತ್‌ನ ಸ್ನೇಹಿತ ರಾಹುಲ್ ಎಂಬಾತನ ಜತೆ ಸಲುಗೆಯಿಂದ ಇದ್ದಳು. ಇಬ್ಬರೂ ಸುತ್ತಾಡುತ್ತಿದ್ದುದನ್ನು ನೋಡಿದ್ದ ಬಬಿತ್ ಕೋಪಗೊಂಡು ರಾಹುಲ್‌ಗೆ ಹರ್ಷಿತಾ ಜತೆ ಸುತ್ತಾಡದಂತೆ ಎಚ್ಚರಿಕೆ ನೀಡಿದ್ದ. ಭಾನುವಾರ ರಾಹುಲ್ ಮನೆಯಲ್ಲಿ ಹರ್ಷಿತಾ ಇರುವುದನ್ನು ತಿಳಿದುಕೊಂಡಿದ್ದ ಬಬಿತ್, ಬೈಕ್‌ನಲ್ಲಿ ಅಲ್ಲಿಗೆ ತೆರಳಿದ್ದಾನೆ. ರಾಹುಲ್ ಮನೆಯಲ್ಲಿ ಜಗಳ ಮಾಡಿದ ಬಬಿತ್, ರಾಹುಲ್ ಎದುರಿನಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿ ಅಲ್ಲಿಂದ ತನ್ನ ಮನೆಗೆ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ.
ಅಷ್ಟೇ ಅಲ್ಲದೆ ಪುನಃ ಅಲ್ಲಿಯೂ ಗಲಾಟೆ ಮಾಡಿ ಕೈ ಮತ್ತು ಹೆಲ್ಮೆಟ್‌ನಿಂದ ಹರ್ಷಿತಾಳ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಹರ್ಷಿತಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಬಬಿತ್, ಹರ್ಷಿತಾ ಪೋಷಕರಿಗೆ ಕರೆ ಮಾಡಿ ಹರ್ಷಿತಾ ಕುಸಿದು ಬಿದ್ದಿರುವುದಾಗಿ ತಿಳಿಸಿ ಪರಾರಿಯಾಗಿದ್ದಾನೆ. ಕೂಡಲೇ ಅಲ್ಲಿಗೆ ತೆರಳಿದ ಆಕೆಯ ತಂದೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಷಿತಾ ಮೇಲಿನ ಹಲ್ಲೆಗೆ ಸಂಬಂಧಿಸಿದ ದೂರು ಆಧರಿಸಿ ಆರೋಪಿ ಬಬಿತ್‌ನನ್ನು ಬಂಧಿಸಲಾಗಿದೆ. ಜತೆಗೆ ಘಟನೆ ವೇಳೆ ಜತೆಯಲ್ಲಿದ್ದ ರಾಹುಲ್‌ನನ್ನು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ಹರ್ಷಿತಾ ಜತೆಗಿನ ಪ್ರೇಮ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಆರೋಪಿ ಬಬಿತ್ ಪಿಯುಸಿ ಅನುತ್ತೀರ್ಣನಾಗಿದ್ದು, ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.