ಗಂಗಾವತಿ: ಬೆಂಗಳೂರಿನ ಬಾಗಲೂರು ಮುಖ್ಯ ರಸ್ತೆಯಲ್ಲಿ ಸೆ.17 ರಂದು ಕಾರೊಂದು ಅಮಾಯಕ ಹೊಟೇಲ್ ಕಾರ್ಮಿಕನೊರ್ವನಿಗೆ ಢಿಕ್ಕಿ ಹೊಡೆದು ಸಾವನಪ್ಪಿದ್ದ ಪ್ರಕರಣ ನಡೆದಿದ್ದು ಅಪಘಾತ ಮಾಡಿದ ಕಾರು ಹಾಗೂ ಕಾರಿನ ಮಾಲೀಕರನ್ನು ಪತ್ತೆ ಮಾಡುವಲ್ಲಿ ಬೆಂಗಳೂರಿನ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಮೃತ ಹೊಟೇಲ್ ಕಾರ್ಮಿಕನ ಪಾಲಕರು ಹಾಗೂ ಬಂಧುಗಳು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಕೂಡಲೇ ಅಪಘಾತ ಮಾಡಿದವರನ್ನು ಪತ್ತೆ ಹಚ್ಚಬೇಕು ಹಾಗೂ ಮೃತನ ಕುಟುಂಬಕ್ಕೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ರಾಜ್ಯ ಮುಖಂಡ ಪಿ.ಲಕ್ಷ್ಮಣನಾಯಕ್ ಮಾತನಾಡಿ, ಗಂಗಾವತಿ ವಿರೂಪಾಪೂರ ತಾಂಡದ ರಾಘವೇಂದ್ರ ಲಮಾಣಿ (21) ಬೆಂಗಳೂರಿನ ಶ್ರೀಕೃಷ್ಣ ವೈಭವ ಹೋಟೆಲ್ ಕೆಲಸ ಮಾಡುತ್ತಿದ್ದ ಸೆ.17 ರಂದು ಕೆಲಸ ಮುಗಿಸಿಕೊಂಡು ತನ್ನ ರೂಮ್ ಗೆ ಹೋಗುವ ಸಂದರ್ಭ ಅತಿವೇಗವಾಗಿ ಬಂದ ಕೆಂಪು ಕಾರೊಂದು ಬಿಳಿ ಕಾರನ್ನು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ರಾಘವೇಂದ್ರ ಲಮಾಣಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕುಟುಂಬದ ಹಿರಿಯ ಮಗನಾಗಿದ್ದ ರಾಘವೇಂದ್ರ ಲಮಾಣಿ ವಿದ್ಯಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಹೊಟೇಲ್ ಕೆಲಸ ಮಾಡಲು ಹೋಗಿದ್ದ. ಇಂದಿಗೆ ಘಟನೆ ನಡೆದು 5-6 ದಿನಗಳಾದರೂ ಬೆಂಗಳೂರಿನಂತಹ ಮಹಾನಗರದಲ್ಲಿ ಆ ಕಾರು ಯಾವುದು, ಆ ಚಾಲಕ ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.
ಈ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ನಡೆದು ಇಷ್ಟು ದಿನವಾದರೂ, ಎಫ್ಐಆರ್ ದಾಖಲು ಮಾಡಲಾಗಿದ್ದಾದರೂ ಕಾರು ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಹೇಳಿ ಕೂಡಲೇ ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬ ದೇವಿ ಬಂಜಾರ ಸೇವಾ ಟ್ರಸ್ಟ್ ಅಧ್ಯಕ್ಷ ರಾಮನಾಯ್ಕ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್ ನಾಯ್ಕ, ಗೋರ್ ಸೇನಾ ರಾಜ್ಯ ಉಪಾಧ್ಯಕ್ಷ ಶಿವಪ್ಪ ಜಾಗೋ ಗೋರ್ , ಗೋರ್ ಸೇನಾ ಜಿಲ್ಲಾ ಅಧ್ಯಕ್ಷ ವೆಂಕಟೇಶ ಜಾಧವ್, ರವಿ ನಾಯ್ಕ ಚವ್ಹಾಣ್, ಹನುಮಂತಪ್ಪ ಮೇಸ್ತ್ರಿ,ಪಾಂಡುನಾಯ್ಕ ಮೇಸ್ತ್ರಿ, ಕೃಷ್ಣ ನಾಯ್ಕ, ರವಿಚಂದ್ರ ಮೇಸ್ತ್ರಿ , ಮಂಜುನಾಥ, ಸಂತೋಷ, ಶಶಿಕುಮಾರ್, ಅಂಬ್ರೇಶ್, ಲೋಕೇಶ್, ಭೋಜನಾಯ್ಕ ಇದ್ದರು.