ನಿಶಾಪುರ ಪರ್ಶಿಯಾದ ಸಮೃದ್ಧ ನಗರಗಳಲ್ಲೊಂದಾಗಿತ್ತು, ಮಂಗೋಲಿಯನ್ ರಾಜ ಚೆಂಗೀಸ್ ಖಾನ್‌ನ ಕಣ್ಣು ಈ ನಗರದ ಮೇಲೆ ಬೀಳುವ ತನಕ. ಕ್ರೂರತನಕ್ಕೆ ಹೆಸರುವಾಸಿಯಾದ ಚೆಂಗೀಸ್ ಖಾನ್ ನಿಶಾಪುರದ ರಾಜನನ್ನು ಶರಣಾಗಲು ತಿಳಿಸಿದ. ಆದರೆ ರಾಜರಿಗೆ ತಮ್ಮ ಆತ್ಮಗೌರವ ಪ್ರತಿಷ್ಠೆ ಪ್ರಾಣಕ್ಕಿಂತಲೂ ಹೆಚ್ಚು. ಇತಿಹಾಸ ಗಮನಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಅಂತೆಯೇ ನಿಶಾಪುರದ ರಾಜ ಶರಣಾಗಲು ನಿರಾಕರಿಸಿದ. ಯುದ್ಧ ಶುರುವಾಯಿತು. ಈ ಕಾದಾಟದಲ್ಲಿ ಖಾನನ ಅಳಿಯ ಟೊಕೊಚರ್ ಶತ್ರುವಿನ ಬಾಣದಿಂದ ಮೃತಪಟ್ಟ. ಆತ ಚೆಂಗೀಸ್ ಖಾನನಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ. ಆತನ ಸಾವು ಅವನ ಮನಸ್ಸನ್ನು ಕದಡಿತು. ಪತಿಯನ್ನು ಕಳೆದುಕೊಂಡ ಖಾನನ ಮಗಳು ರೋಷದಿಂದ “ಎದುರು ಸಿಗುವ ನಿಶಾಪುರದ ಪ್ರತಿಯೊಬ್ಬ ಪ್ರಜೆಯ ರುಂಡ ಚೆಂಡಾಡಿ’ ಎಂದು ಅಬ್ಬರಿಸಿದಳು. ಮಗಳಿಗೆ ಬಂದೊದಗಿದ ಪರಿಸ್ಥಿತಿಯಿಂದ ಕ್ರುದ್ಧನಾದ ಚೆಂಗೀಸ್ ಖಾನ್ ಮಗಳ ಆಸೆಯನ್ನು ಅಕ್ಷರಶಃ ಪೂರೈಸಲು ಇಳಿದುಬಿಟ್ಟ. ತಂಗಿಯ ಮಾತನ್ನು ಪಾಲಿಸಿ ಎಂದು ತನ್ನ ಸೈನಿಕರಿಗೆ ಆಜ್ಞಾಪಿಸಿದ. ಇದರ ಪರಿಣಾಮ ಒಂದು ಗಂಟೆಯ ಅವಧಿಯಲ್ಲಿ ಲಕ್ಷ ಮಂದಿಯ ಮಾರಣಹೋಮವಾಯಿತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಸತ್ತ ಸೈನಿಕರ ಸಂಖ್ಯೆಯ ಕುರಿತು ಅನುಮಾನಗಳಿದ್ದರೂ, ಅಂದು ರುಂಡಗಳ ಪಿರಮಿಡ್ಡೇ ನಿರ್ಮಾಣವಾಗಿತ್ತು ಎಂದು ಇತಿಹಾಸಕಾರರು ಬರೆದಿದ್ದಾರೆ.
ಹವನ