ಬೆಂಗಳೂರು: ಭಾರತದ ನೈಜ ಇತಿಹಾಸ ಮತ್ತು ವೀರಗಾಥೆಯ ಮೇಲೆ ಬೆಳಕು ಚೆಲ್ಲುವ ಕೆಲಸ ಆಗಬೇಕು ಎಂದು ನಟ ಹಾಗೂ ರಂಗಕರ್ಮಿ ಪ್ರಕಾಶ ಬೆಳವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಬೈ ಹಿಂದೂ ಸ್ವಯಂ ಸೇವಕ ಸಂಘದ ಸಹ ಸಂಯೋಜಕ ರವಿಕುಮಾರ್ ಬರೆದಿರುವ ಇಂಡಿಯನ್ ಹಿರೋಯಿಸಂ ಇನ್ ಇಸ್ರೇಲ್ ಪುಸ್ತಕದ ಕನ್ನಡ ಅವತರಣಿಗೆ, ಆರ್‌ಎಸ್‌ಎಸ್ ಪ್ರಚಾರಕ್ ಪ್ರದೀಪ್ ಮೈಸೂರು ಕನ್ನಡಕ್ಕೆ ಅನುವಾದಿಸಿರುವ “ಬಿಚ್ಚುಗತ್ತಿ’ ಕೃತಿಯನ್ನು ಶನಿವಾರ ನಗರದ ಮಿಥಿಕ್ ಸೊಸೈಟಿಯಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಯಾರು ಬೇಕಾದರೂ ರಚಿಸಬಹುದಾದ ಚರಿತ್ರೆಯಲ್ಲಿ ಸುಳ್ಳುಗಳು ಹೆಚ್ಚಾಗುತ್ತಿವೆ. ನಮ್ಮದು ನೈಜ ಇತಿಹಾಸ. ಇದನ್ನು ಕ್ರೋಢೀಕರಿಸುವ ವ್ಯವಸ್ಥೆ ಆಗಬೇಕು. ನಮ್ಮ ಪರಂಪರೆಯ ಆಧಾರದಲ್ಲಿ ಇತಿಹಾಸ ಕೆದಕಬೇಕು. ಪಾಶ್ಚಾತ್ಯರು ನಮ್ಮಲ್ಲಿ ಕೀಳರಿಮೆ ತುಂಬುವ ಚರಿತ್ರೆ ಸೃಷ್ಟಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಸ್ರೇಲ್‌ನಲ್ಲಿ ಮಾತ್ರವಲ್ಲ ಫ್ರಾನ್ಸ್, ಜರ್ಮನಿ, ಸಿಂಗಾಪುರ ಮೊದಲಾದ ಕಡೆಗಳಲ್ಲೂ ಭಾರತೀಯ ಯೋಧರ ಸ್ಮಾರಕಗಳಿವೆ. ಯುರೋಪ್‌ನಲ್ಲಿ ಮೊದಲ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಹೈಫಾ ಯುದ್ಧದಲ್ಲಿ 13 ಲಕ್ಷ ಭಾರತೀಯ ಯೋಧರು ಪಾಲ್ಗೊಂಡಿದ್ದರು ಎಂಬುದನ್ನು ನೆನಪಿಸಿದರು.
ಮುಂಬೈ ಹಿಂದು ಸ್ವಯಂ ಸೇವಕ ಸಂಘದ ಸಹ ಸಂಯೋಜಕ ರವಿಕುಮಾರ ಅಯ್ಯರ್ ಮಾತನಾಡಿ, ವಿದೇಶದಲ್ಲಿ ಭಾರತೀಯ ಸೈನಿಕರ ಶೌರ್ಯ, ಸಾಹಸ ಇಂದಿಗೂ ಸ್ಮಾರಕಗಳಲ್ಲಿ ಜೀವಂತವಿವೆ. ಇತಿಹಾಸ ರಚಿಸಿರುವ ಪಾಶ್ಚಾತ್ಯ ಬರಹಗಾರರು ಭಾರತೀಯರನ್ನು ಸಾಹಸ ಮನೋಭಾವದವರು ಎಂದು ತೋರಿಸಿಲ್ಲ ಎಂದರು.
ದಿ ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ವಿ. ನಾಗರಾಜ್, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ ಪ್ರದೀಪ್ ಮೈಸೂರು, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗಡೆ, ತುಮಕೂರು ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.