ಬೆಂಗಳೂರು: ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ರ್ಪೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ “ರಾಜಸತ್ತೆ”ಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ ಎಂದು ಕಿಡಿಕಾರಿದೆ.
ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ. ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ ಮತಾಂಧನಿಗೆ “ಮೈಸೂರು ಹುಲಿ” ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ? ಟಿಪ್ಪು ಇತಿಹಾಸ ಎಂದರೆ ಅದು ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ. ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಸತ್ಯವನ್ನು ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ ಮಾಡುವ ಅಪಮಾನ ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ ಗೆ ಮಾಜಿ ಪತ್ರಕರ್ತ ಸೇರಿ ಇಬ್ಬರು ಉಗ್ರರ ಸಾವು
ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ನೀಡಿದರು. ಟಿಪ್ಪು ನಡೆಸಿದ ಹತ್ಯಾಕಾಂಡಕ್ಕೆ ಟಿಪ್ಪುರಾಮಯ್ಯ ಒಪ್ಪಿಗೆಯ ಮುದ್ರೆ ನೀಡಿದ್ದರು. ಈಗ ಅದೇ ಭಜಕರ ಗುಂಪು ಟಿಪ್ಪುಸುಳ್ಳುಇತಿಹಾಸ ಬಯಲಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ನಲ್ಲಿ ಆರೋಪಿಸಿದೆ.