ಕಲಿನಾ: ಮುಂಬಯಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ರೋಮಾಂಚನವಾಗುತ್ತದೆ. ಈ ಮಹಾನಗರದಲ್ಲಿ ಕನ್ನಡಿಗರ ಸಾಧನೆಯೂ ಉಲ್ಲೇಖನೀಯವಾಗಿದೆ. ಮುಂಬಯಿಯ ಅದ್ಭುತ -ನಿಗೂಢ ಅಂಶಗಳೇ ನನ್ನ ಬರವ ಣಿಗೆಗೆ ಪ್ರೇರಣೆ ಎಂಬುದಾಗಿ ಪತ್ರಕರ್ತ, ಸಾಹಿತಿ, ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ ರಾನಡೆ ಭವನದಲ್ಲಿರುವ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾ ನಿಲಯ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಮುಂಬಯಿಯಲ್ಲಿ ಕನ್ನಡ-ಮರಾಠಿ, ಗುಜರಾತಿ ಭಾಷೆಗಳ ಪ್ರಭಾವ ದಟ್ಟವಾಗಿತ್ತು. ಬ್ರಿಟಿಷ್ ಕಾಲದಲ್ಲಿ ಮುಂಬಯಿಯನ್ನು ಕಟ್ಟಿ ಬೆಳೆಸುವಲ್ಲಿ ಕನ್ನಡಿಗರು ಅಪಾರ ಕೊಡುಗೆ ನೀಡಿದ್ದಾರೆ. ಬಿ.ಜಿ. ಖೇರ್, ರಾವ್ ಬಹದ್ದೂರ, ರಾಮಪಂಜಿ, ಜಿ.ಎನ್. ವೈದ್ಯನಾಥ, ಇಮಾರತಿ ಮೊದಲಾದವರ ಸಾಧನೆಗಳನ್ನು ನಾವು ಮರೆತು ಬಿಟ್ಟಿದ್ದೇವೆ.ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮುಂಬಯಿಯಲ್ಲಿ ಗಣ್ಯಸ್ಥಾ ನದಲ್ಲಿ ಸಾಧನೆಗೈದರು. ಮುಂಬಯಿಗೆ ಕರ್ನಾಟಕದಿಂದ ಬಂದ ಕನ್ನಡಿಗರಲ್ಲಿ ಮೊಗವೀರರೇ ಪ್ರಥಮಿಗರು. ಆ ಬಳಿಕ ಬಂದವರು ಈ ನೆಲದಲ್ಲಿ ಮಾಡಿದ ಅಪಾರ ಸಾಧನೆ ಸ್ಮರಣೀಯ. ಕನ್ನಡ ವಿಭಾಗ ಮುಂಬಯಿ ಕನ್ನಡಿಗರ ಸಾಧನೆಗಳನ್ನು ದಾಖಲು ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿ ಅಭಿಮಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ: ಮತ್ತೆ ಸಾವಿನ ಭೀತಿಯಲ್ಲಿ ಹಜಾರಸ್!
ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಪ್ರಾಸ್ತಾವಿಸಿ, ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಅಶೋಕ್ ಸುವರ್ಣ ಅವರ ಕೊಡುಗೆ ಮಹತ್ತರವಾದುದು. ಅಧ್ಯಯನಶೀಲ, ರೂಢಗುಣ, ಅಧಿಕೃತೆ ಯಿಂದ ಅವರ ಕೃತಿಗಳು ನಮ್ಮ ಗಮನ ಸೆಳೆಯುತ್ತವೆ. ಮೊಗವೀರ ಪತ್ರಿಕೆಯ ಸಂಪಾ ದಕರಾಗಿ ಕೆಲವು ನೂತನ ಉಪಕ್ರಮಗಳನ್ನು ಚಾಲ್ತಿಗೆ ತಂದ ಶ್ರೇಯಸ್ಸು ಅವರದು. ಬರೆಯುವ ಜನಕ್ಕೆ ದೊಡ್ಡ ಪ್ರಮಾಣದಲ್ಲಿ ವೇದಿಕೆ ಒದಗಿಸುತ್ತಾ ಬಂದ ಸ್ನೇಹಜೀವಿ. ಸುವರ್ಣ ಅವರ ಸಾಧನೆಗಳು ಹೊಸ ತಲೆಮಾರಿಗೆ ಮಾದರಿ ಎಂದು ತಿಳಿಸಿದರು.
ಇದೇ ಸಂದರ್ಭ ಡಾ| ಉಪಾಧ್ಯ ಅವರು ಅಶೋಕ ಸುವರ್ಣ ವಿರಚಿತ ಇತ್ತೀಚಿನ ಕೃತಿ ಮುಂಬಯಿ ಪರಿಕ್ರಮಣವನ್ನು ವಿವಿಯಲ್ಲಿ ಬಿಡುಗಡೆ ಮಾಡಿದರು. ಗೋಪಾಲ್ ತ್ರಾಸಿ ಅವರು ಸಂಪಾದಿಸಿದ ಸಮರ್ಥ ಪತ್ರಕರ್ತ ಸಂಪಾದಕ ಅಶೋಕ ಸುವರ್ಣ ಕೃತಿಯನ್ನು ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಬಿಡುಗಡೆಗೊಳಿಸಿದರು. ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ದಿನಕರ್ ನಂದಿ ಚಂದನ್, ಸದಾನಂದ ತಾವರೆಕೆರೆ, ಪ್ರತಿಭಾ ರಾವ್, ಲಕ್ಷ್ಮೀ ರಾಥೋಡ್, ಹರೀಶ್ ಪೂಜಾರಿ ಪಾಲ್ಗೊಂಡರು. ಕುಮಾರಿ ಶ್ರಾವ್ಯಾ ರಾವ್ ಅವರು ಸ್ವಾಗತಗೀತೆ ಹಾಡಿದರು. ಸುರೇಖಾ ದೇವಾಡಿಗ ವಂದಿಸಿದರು.