ಗಡಿ ವಿಚಾರದಲ್ಲಿ ಭಾರತದಷ್ಟು ದುರಾದೃಷ್ಟವಂತ ದೇಶ ಬೇರೆ ಇರಲಿಕ್ಕಿಲ್ಲ. ಏಳು ದೇಶಗಳ ಜತೆಗೆ 15,000 ಕಿ.ಮೀ.ಗೂ ಹೆಚ್ಚು ಉದ್ದದ ಗಡಿಯನ್ನು ಭಾರತ ಹಂಚಿಕೊಂಡಿದೆ. ಈ ಪೈಕಿ ಚೀನ ಮತ್ತು ಪಾಕಿಸ್ಥಾನ ಜತೆಗಿನ ಗಡಿ ಜಗಳ ಮಾತ್ರ ಶಾಶ್ವತ ಸಮಸ್ಯೆಯಾಗಿ ಉಳಿದಿದೆ.
Advertisement
2020ರ ಬಿಕ್ಕಟ್ಟುಈ ವರ್ಷ ಅಕ್ಸಾಯ್ ಚಿನ್‌ಗೆ ಸೇರಿರುವ ಲಡಾಖ್‌ನ ಪೂರ್ವಕ್ಕಿರುವ ಗಾಲ್ವನ್ ಕಣಿವೆಯಲ್ಲಿ ಚೀನ ಮತ್ತೆ ಗಡಿ ತಂಟೆ ಪ್ರಾರಂಭಿಸಿದೆ. ನೂರಾರು ಟೆಂಟ್‌ಗಳನ್ನು ನಿರ್ಮಿಸಿ ಭಾರೀ ಪ್ರಮಾಣದಲ್ಲಿ ಸೈನಿಕರನ್ನು ಮತ್ತು ಯುದ್ಧ ಸಾಮಾಗ್ರಿಗಳನ್ನು ಸಾಗಿಸಿ ಬಂಕರುಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಉಭಯ ದೇಶಗಳ ಸೈನಿಕರ ನಡುವೆ ಹೊಡೆದಾಟವೂ ಆಗಿದೆ. ಆದರೆ ಅದು ವಿಕೋಪಕ್ಕೆ ಹೋಗಿಲ್ಲ.
ಚೀನದ ಜತೆಗೆ ಭಾರತ ಒಟ್ಟು 3,488 ಗಡಿಯನ್ನು ಹಂಚಿಕೊಂಡಿದೆ. ಜಮ್ಮು – ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಖಂಡ ಮತ್ತು ಅರುಣಾಚಲ ಪ್ರದೇಶ ಚೀನದ ಗಡಿಗೆ ಒತ್ತಿಕೊಂಡಿರುವ ನಮ್ಮ ರಾಜ್ಯಗಳು. ಅಂತೆಯೇ ಚೀನದ ನಿಯಂತ್ರಣದಲ್ಲಿರುವ ಟಿಬೆಟ್ ಸ್ವಾಯತ್ತ ಪ್ರದೇಶದ ಒಂದು ಗಡಿ ಭಾರತದ ಜತೆಗಿದೆ. ಚೀನ ಜತೆಗಿನ ಗಡಿಯನ್ನು ಪಶ್ಚಿಮದ ವಲಯ, ಮಧ್ಯ ವಲಯ ಮತ್ತು ಪೂರ್ವದ ವಲಯ ಎಂದು ಆಡಳಿತದ ಅನುಕೂಲಕ್ಕಾಗಿ ವಿಭಾಗಿಸಲಾಗಿದೆ.
Related Articles
ಇಲ್ಲಿ ವಾಸ್ತವ ಗಡಿ ರೇಖೆ ಉಭಯ ದೇಶಗಳ ಗಡಿ. ಆದರೆ ಅಕ್ಸಾಯ್ ಚಿನ್ ಪೂರ್ತಿಯಾಗಿ ತನಗೆ ಸೇರಿದ್ದು ಎನ್ನುವುದು ಚೀನದ ವಾದ. ಜನವಸತಿಯಿಲ್ಲದ ಸದಾ ಹಿಮಾವೃತವಾಗಿರುವ ಈ ಒಂದು ತುಂಡು ಭೂಮಿಯಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ.
Advertisement
ಆದರೆ ಅದಿರುವ ಜಾಗ ಮಾತ್ರ ಎರಡೂ ದೇಶಗಳಿಗೆ ಆಯಕಟ್ಟಿನ ಪ್ರದೇಶ. ಹೀಗಾಗಿ ಅಕ್ಸಾಯ್ ಚಿನ್‌ಗಾಗಿ ಈ ಪರಿಯ ಕದನ. ಸಮುದ್ರ ಮಟ್ಟದಿಂದ 22,500 ಅಡಿ ಎತ್ತರದಲ್ಲಿರುವ 37,244 ಚದರ ಕಿಲೋಮೀಟರ್ ವಿಸ್ತೀರ್ಣದ ಅಕ್ಸಾಯ್ ಚಿನ್ ಹಿಂದಿನ ಕಾಲದಲ್ಲಿ ದಕ್ಷಿಣೋತ್ತರ ದೇಶಗಳ ನಡುವಣ ವ್ಯಾಪಾರದ ಸರಕು ಸಾಗಾಟದ ಮುಖ್ಯ ಕಾರಿಡಾರ್ ಆಗಿತ್ತು.
1947ರ ಬಳಿಕದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 1947ರ ಬಳಿಕ ಅಕ್ಸಾಯ್ ಚಿನ್ ಭಾರತದ ಗಡಿ ಭಾಗವೆಂದೇ ಗುರುತಿಸಲಾಗಿತ್ತು. ಭಾರತ ಅರ್ಡಗ್-ಜಾನ್ಸನ್ ರೇಖೆಯ ಆಧಾರದಲ್ಲಿ ತನ್ನ ಗಡಿಯನ್ನು ಗುರುತಿಸಿತು. ಆದರೆ ಇದರಲ್ಲಿ ಉತ್ತರದ ಪ್ರದೇಶಗಳಾದ ಶಾಹಿದುಲ್ಲಾ ಮತ್ತು ಖೋಟನ್ ಪ್ರದೇಶಗಳು ಸೇರಿರಲಿಲ್ಲ. ಕಾರಕೋರಮ್ ಪಾಸ್‌ನಿಂದ ಕಾರಕೋರಮ್ ಪರ್ವತದ ಈಶಾನ್ಯದ ತನಕ ಮತ್ತು ಉತ್ತರದಲ್ಲಿ ಅಕ್ಸಾಯ್ ಚಿನ್ ತನಕ ಈ ಗಡಿ ರೇಖೆ ವಿಸ್ತರಿಸಿತ್ತು. ಕರಕಶ್ ನದಿ ಮತ್ತು ಯಾರ್ಕಂಡ್ ನದಿಯೂ ಸೇರಿ ಕುನ್ಸುನ್ ಪರ್ವತ ತನಕ ತನ್ನ ಗಡಿ ಎಂದು ಭಾರತ ಭಾವಿಸಿತ್ತು. ಆದರೆ ಈ ಗಡಿಯನ್ನು ಚೀನ ಒಪ್ಪಿಕೊಳ್ಳುವುದಿಲ್ಲ. ತವಾಂಗ್ ತಕರಾರು
ಇನ್ನೊಂದೆಡೆ ಅರುಣಾಚಲ ಪ್ರದೇಶದಲ್ಲಿ ಇನ್ನೊಂದು ರೀತಿಯ ಕಗ್ಗಂಟು. ಆರಂಭದಲ್ಲಿ ಗಡಿ ನಕ್ಷೆ ಬಗ್ಗೆ ಇದ್ದ ಭಿನ್ನ ಗ್ರಹಿಕೆಯೇ ಅನಂತರ ದೊಡ್ಡ ಸಮಸ್ಯೆಯ ರೂಪ ತಾಳಿತು. ಬ್ರಿಟಿಶರ ಭಾರತ, ಚೀನ ಮತ್ತು ಟಿಬೆಟ್ ನಡುವಿನ ಶಿಮ್ಲಾ ಸಮಾವೇಶದಲ್ಲಿ ಬ್ರಿಟಿಶ್ ಭಾರತದ ಪರವಾಗಿ ಸರ್ ಮೆಕ್ ಮಹೋನ್ ಪ್ರಧಾನ ಸಂಧಾನಕಾರರಾಗಿದ್ದರು. ಚೀನದ ಪ್ರತಿನಿಧಿಯಾಗಿದ್ದ ಇವಾನ್ ಚೆನ್ ಟಿಬೆಟ್ ಪರವಾಗಿ ಸಂಧಾನದಲ್ಲಿ ಭಾಗಿಯಾಗಲು ನಿರಾಕರಿಸಿದರು.
ಹೀಗಾಗಿ ಟಿಬೆಟ್ ಪ್ರತಿನಿಧಿಗಳ ಜತೆ ಮೆಕ್ ಮಹೋನ್ ಮಾತುಕತೆ ನಡೆಸಿ ಗಡಿ ಗುರುತಿಸಿದರು. ಇದು ಮೆಕ್ ಮಹೋನ್ ರೇಖೆ ಎಂದೇ ಪ್ರಸಿದ್ಧವಾಗಿದೆ. ಶಿಮ್ಲಾ ಒಪ್ಪಂದವನ್ನು ಚೀನ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಇದು ಬ್ರಿಟಿಶ್ ಮತ್ತು ಟಿಬೆಟ್ ನಡುವಿನ ದ್ವಿಪಕ್ಷೀಯ ಒಪ್ಪಂದ ಎಂದು ಪರಿಗಣಿತವಾಯಿತು. ಪರಿಣಾಮವಾಗಿ ದಕ್ಷಿಣ ಟಿಬೆಟ್ ಎಂದು ಕರೆಯಲಾಗುತ್ತಿದ್ದ ಅರುಣಾಚಲ ಪ್ರದೇಶದ ಒಂದು ಪ್ರಮುಖ ಭಾಗ ತವಾಂಗ್ ಬ್ರಿಟಿಶ್ ಭಾರತದ ಪಾಲಾಯಿತು. 1950ರಲ್ಲಿ ಟಿಬೆಟ್ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ಕಳೆದುಕೊಂಡಾಗ ತವಾಂಗ್ ಭಾರತಕ್ಕೆ ಸೇರಿತು. ಈ ತವಾಂಗ್ ಪ್ರದೇಶಕ್ಕಾಗಿಯೇ ಚೀನ ಈಗ ಕಾದಾಡುತ್ತಿದೆ. ಪ್ರಸ್ತುತ ತವಾಂಗ್ ಬದಲು ಇಡೀ ಅರುಣಾಚಲ ಪ್ರದೇಶವೇ ತನಗೆ ಸೇರಬೇಕೆಂದು ಹೇಳುತ್ತಿದೆ. ಅರುಣಾಚಲ ಪ್ರದೇಶವನ್ನು ಚೀನ ಟಿಬೆಟ್‌ನ ವಿಸ್ತರಿತ ಭಾಗವೆಂದು ಪರಿಗಣಿಸಿದೆ. ಡೋಕ್ಲಾಂ ಬಿಕ್ಕಟ್ಟು
ಭಾರತ-ಚೀನಾ-ಭೂತಾನ್ ಈ ಮೂರು ದೇಶಗಳು ಸೇರುವ ಆಯಕಟ್ಟಿನ ಜಾಗವೇ ಡೋಕ್ಲಾಂ. ನಿಜವಾಗಿ ಡೋಕ್ಲಾಂ ಭಾರತದ ಭಾಗವಲ್ಲ. ಆದರೆ ಇಲ್ಲಿ ಮೂರು ದೇಶಗಳ ಗಡಿ ಸಂಗಮಿಸುವುದರಿಂದ ಭಾರತಕ್ಕೆ ಡೋಕ್ಲಾಂ ಮುಖ್ಯವಾಗಿದೆ. 2017ರಲ್ಲಿ ಇಲ್ಲಿ ಚೀನಾ ಪಕ್ಕಾ ರಸ್ತೆಯೊಂದನ್ನು ನಿರ್ಮಿಸಲು ತೊಡಗಿದಾಗ ಎದ್ದ ವಿವಾದವೇ ಡೋಕ್ಲಾಂ ಬಿಕ್ಕಟ್ಟು. ಭೂತಾನ್ ಪರವಾಗಿ ಭಾರತ ಈ ರಸ್ತೆ ನಿರ್ಮಾಣಕ್ಕೆ ಕಡು ವಿರೋಧ ವ್ಯಕ್ತಪಡಿಸಿತು. ಇದರ ಪರಿಣಾಮವಾಗಿ 73 ದಿನ ಚೀನ ಮತ್ತು ಭಾರತದ ಸೇನೆ ಎದುರುಬದುರಾಗಿ ಕಟ್ಟೆಚ್ಚರದ ಕಾವಲು ಕಾಯುವಂತಾಯಿತು. ಚೀನ ರಸ್ತೆ ನಿರ್ಮಾಣ ಕೈಬಿಡಲು ಒಪ್ಪಿದ ಬಳಿಕ ಈ ವಿವಾದ ತಣ್ಣಗಾಗಿತ್ತು.
– ಉದಯವಾಣಿ ಅಧ್ಯಯನ ತಂಡ