Advertisement

‘ಬೇಡರ ವೇಷ’ ಯಾವ ಕಾರಣಕ್ಕಾಗಿ ಶುರುವಾಯಿತು ಗೊತ್ತಾ? ಇಲ್ಲಿದೆ ರೋಚಕ ಸತ್ಯ!

05:48 PM Mar 31, 2021 | Team Udayavani |

ಹೋಳಿ ಹುಣ್ಣಿಮೆ ಬಂದರೆ ಎಲ್ಲೆಲ್ಲೂ ಬಣ್ಣಗಳದ್ದೇ ಕಲರವ. ಎಲ್ಲಾ ಕಷ್ಟಗಳನ್ನು ಮರೆತು ಪರಸ್ಪರ ಸಾಮರಸ್ಯದಿಂದ ಬಣ್ಣ ಹಚ್ಚುತ್ತ ಪ್ರೀತಿ ಹಂಚುವ ಹಬ್ಬವೇ ಹೋಳಿ ಹುಣ್ಣಿಮೆ. ಈ ಹಬ್ಬದ ಮತ್ತೊಂದು ವಿಶೇಷ ಅಂದರೆ ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ‘ಬೇಡರ ವೇಷ’ ಆಚರಣೆ.

Advertisement

ಸಾಮಾನ್ಯವಾಗಿ ಬೇಡರ ವೇಷದ ಆಚರಣೆ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದ್ರೆ ಈ ಆಚರಣೆಯ ಹಿನ್ನೆಲೆ ಏನು ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ. ಇಂದು ನಾವು ಹೋಳಿ ಹುಣ್ಣಿಮೆಯಲ್ಲಿ ಬೇಡರ ವೇಷವನ್ನು ಏಕೆ ಹಾಕುತ್ತಾರೆ. ಅದರ ಹಿಂದಿನ ಇತಿಹಾಸ ಏನು ಎಂಬುದನ್ನ ತಿಳಿಯೋಣ. ಇದಕ್ಕೂ ಮುನ್ನ ಬೇಡರ ವೇಷ ಅಂದ್ರೆ ಏನು ಎಂಬುದನ್ನ ಇಲ್ಲಿ ಗಮನಿಸೋಣ.

ಬೇಡರ ವೇಷ ಅಂದರೆ ಇದೊಂದು ಜಾನಪದ ನೃತ್ಯ. ಕರ್ನಾಟದ ಶಿರಸಿ ಭಾಗದಲ್ಲಿ ಇದು ಪ್ರಚಲಿತದಲ್ಲಿದೆ. ಹೋಳಿ ಹುಣ್ಣಿಮೆ ಹಬ್ಬದಂದು ವಿಶೇಷ ರೀತಿಯಲ್ಲಿ ವೇಷಭೂಷಣ ತೊಟ್ಟು ರಾತ್ರಿ ಇಡೀ ನೃತ್ಯ ಮಾಡುತ್ತಾರೆ. ಮುಖಕ್ಕೆ ಬಿಳಿ, ಕೆಂಪು, ಕಪ್ಪು ಬಣ್ಣ ಬಳಿದುಕೊಂಡು, ಗಡ್ಡ ಮೀಸೆ ಕಟ್ಟಿಕೊಂಡು, ಸೊಂಟಕ್ಕೆ ಬಣ್ಣದ ಬಟ್ಟೆ ಕಟ್ಟಿಕೊಂಡು ಕಾಲುಗಳಿಗೆ ಗೆಜ್ಜೆ ಕಟ್ಟಿಕೊಂಡು ತಲೆಗೆ ಮತ್ತು ಬೆನ್ನಿಗೆ ನವಿಲುಗರಿ ಕಟ್ಟಿಕೊಂಡು ರಸ್ತೆಗೆ ಬಂದರೆ ಎಂತವರಿಗೂ ಎದೆಯಲ್ಲಿ ನಡುಕ ಹುಟ್ಟುತ್ತದೆ. ಇವರನ್ನು ನಿಯಂತ್ರಿಸಲು ಬೆನ್ನಿಗೆ ಹಗ್ಗ ಕಟ್ಟಿ ಇಬ್ಬರು ಹಿಡಿದಿರುತ್ತಾರೆ.

ಹೋಳಿ ಹುಣ್ಣಿಮೆಯ ರಾತ್ರಿ ಈ ಬೇಡ ವೇಷಧಾರಿಗಳು ವೀರಾವೇಷದಿಂದ ಕುಣಿಯುತ್ತಾರೆ. ರಸ್ತೆ ತುಂಬೆಲ್ಲ ತಮಟೆ, ಡೋಲುಗಳ ನಾದಕ್ಕೆ ಹೆಜ್ಜೆ ಹಾಕುವ ಇವರನ್ನು ನೋಡಲು ಜನ ಸಾಗರವೇ ಸೇರಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಮುಂಡಗೋಡ ತಾಲೂಕುಗಳಲ್ಲಿ ಈ ಆಚರಣೆ ಚಿರ ಪರಿಚಿತ.

Advertisement

ನಗರದ ಬೀದಿಗಳಲ್ಲಿ ನಡುರಾತ್ರಿ ಮೇಳೈಸುವ ಈ ಜಾನಪದೀಯ ಸಂಪ್ರದಾಯವನ್ನು ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿರುತ್ತಾರೆ.

ಬೇಡರ ವೇಷ ಶುರುವಾಗಿದ್ದು ಯಾವಾಗಿನಿಂದ : ನಮಗೆ ಬೇಡರ ವೇಷ ಅಂದರೆ ಗೊತ್ತಾಗಿದೆ. ಇದೀಗ ಈ ವೇಷ ಎಂದಿನಿಂದ ಪ್ರಚಲಿತಕ್ಕೆ ಬಂತು ಎಂಬುದನ್ನ ತಿಳಿದುಕೊಳ್ಳೋಣ. 300 ವರ್ಷಗಳ ಹಿಂದೆ ಅಂದರೆ ಸ್ವತಂತ್ರ ಪೂರ್ವದಲ್ಲಿ ವಿಜಯ ನಗರ ಅರಸರ ಆಳ್ವಿಕೆ ಮುಗಿದ ನಂತರ ಶಿರಸಿ ಸೇರಿದಂತೆ ದಕ್ಷಿಣ ಭಾರತದ  ಹಲವಾರು ಪ್ರದೇಶಗಳನ್ನು ‘ಸೋಂದ’ ಮನೆತನವು ವಶಪಡಿಸಿಕೊಂಡಿತು. ಈ ವೇಳೆ ಶಿರಸಿಯನ್ನು ಕಲ್ಯಾಣ ಪಟ್ಟಣ ಎಂದು ಕರೆಯಾಗುತ್ತಿತ್ತು.ಈ ಸೋಂದ ಮನೆತನಕ್ಕೆ ಯಾವಾಗಲೂ ಇದ್ದ ಒಂದೇ ಒಂದು ಉಪಟಳ ಅಂದರೆ ಮುಸಲ್ಮಾನರ ದಾಳಿ. ಇದರಿಂದ ನೊಂದು ಬೆಂದ ಈ ಮನೆತನವು, ಮುಸಲ್ಮಾನರ ದಾಳಿಯನ್ನು ತಡೆಯಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿತು. ಆ ವ್ಯಕ್ತಿಯೇ ‘ಮಲ್ಲೇಶಿ’. ಮಲ್ಲೇಶಿಯು ಬೇಡ ಸಮುದಾಯಕ್ಕೆ ಸೇರಿದ್ದು, ಶೂರ-ಧೀರನಾಗಿದ್ದ. ಅಲ್ಲದೆ ಈ ಹಿಂದೆ ವಿಜಯನಗರ ಅರಸರ ಕಾಲದ ಸೇನೆಯಲ್ಲಿ ಕೆಲಸವನ್ನೂ ಮಾಡಿದ್ದ.

ಮಲ್ಲೇಶಿಯು ಮೊದ ಮೊದಲು ತನಗೆ ನೇಮಿಸಿದ ಕೆಲಸವನ್ನು ಶ್ರದ್ಧೆಯಿಂದಲೇ ಮಾಡಿದ್ದ. ನಂತರದ ದಿನಗಳಲ್ಲಿ ಕ್ರೂರಿ ಮತ್ತು ಕಾಮಾಂಧನಾಗಿ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ. ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡನಾಗಿದ್ದ ದಾಸಪ್ಪನಿಗೆ ಒಬ್ಬಳು ಮಗಳಿದ್ದು, ಅವಳ ಹೆಸರು ರುದ್ರಾಂಬಿಕಾ. ಈ ಹೆಣ್ಣಿನ ಮೇಲೆ ಮಲ್ಲೇಶಿಯ ಕಣ್ಣು ಬಿದ್ದು, ನಾನು ಇವಳನ್ನು ಮದುವೆಯಾಗುತ್ತೇನೆ ಎಂದು, ಮದುವೆಯನ್ನೂ ಆದ.

ಮದುವೆಯಾದ ನಂತರವೂ ಮಲ್ಲೇಶಿಯ ದುರಾಡಳಿತ ನಿಲ್ಲಲಿಲ್ಲ. ಇದರಿಂದ ರುದ್ರಾಂಬಿಕಾ ಕೂಡ ಸಿಟ್ಟಿಗೆದ್ದು ಮಲ್ಲೇಶಿಯನ್ನು ಕೊಲ್ಲಬೇಕೆಂದು ಯೋಜನೆ ರೂಪಿಸಿದ್ದಳು.

ಒಂದು ಹೋಳಿ ಹುಣ್ಣಿಮೆಯ ರಾತ್ರಿ ಮಲ್ಲೇಶಿಯು ಕುಣಿಯುತ್ತಿರುವ ಸಂದರ್ಭದಲ್ಲಿ ಪತಿಯ ಕಣ್ಣಿಗೆ ರುದ್ರಾಂಬಿಕಾ ಆಸಿಡ್ ಹಾಕುತ್ತಾಳೆ. ಇದರಿಂದ ಸಿಟ್ಟಿಗೆದ್ದ ಮಲ್ಲೇಶಿ ರುದ್ರಾಂಬಿಕಾಳನ್ನು ಕೊಲೆ ಮಾಡಲು ಮುಂದಾದಾಗ ಅದೇ ಊರಿನ 12 ಮಂದಿ ಆತನನ್ನು ಜೀವಂತವಾಗಿ ಸುಟ್ಟು ಹಾಕುತ್ತಾರೆ.

ಇದಾದ ಮೇಲೆ ತನ್ನ ಗಂಡನ ಚಿತೆಯಲ್ಲಿ ಹೋಗಿ ರುದ್ರಾಂಬಿಕಾ ಕೂಡ ಪ್ರಾಣ ಬಿಡುತ್ತಾಳೆ. ಈ ರುದ್ರಾಂಬಿಕಾಳ ತ್ಯಾಗದ ಪ್ರತಿರೂಪವಾಗಿ ಅಲ್ಲಿನ ಜನರು ಪ್ರತೀ ವರ್ಷ ಬೇಡರ ವೇಷ ಹಾಕಿಕೊಂಡು ಅವಳ ನೆನಪು ಮಾಡಿಕೊಂಡು ಕುಣಿಯುತ್ತಾರೆ. ಈ ಆಚರಣೆ ಇಂದಿಗೂ ನಡೆದು ಬಂದಿದೆ.

ಗಿರೀಶ ಗಂಗನಹಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next