ಶಿರಸಿ: ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಸೋಂದಾ ಇತಿಹಾಸೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ಸೋಂದಾದ ಮೂರು ಧರ್ಮ ಪೀಠಗಳಾದ ಸ್ವರ್ಣವಲ್ಲೀ ಮಠ, ವಾದಿರಾಜಮಠ, ಜೈನಮಠ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮಿಥಿಕ್ ಸೊಸೈಟಿ, ಜಾಗೃತ ವೇದಿಕೆ ಸೋಂದಾ, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿ, ರಂಗ ಚರಿತ ಸೋಂದಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ.18 ಮತ್ತು 19 ರಂದು ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದೆ.
ರಾಷ್ಟ್ರಮಟ್ಟದ ಈ ಸಮ್ಮೇಳನವನ್ನು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಜೈನಮಠದ ಶ್ರೀ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಪ್ರಾಚೀನ ಭಾರತದ ವಿಜ್ಞಾನ ಸಂಶೋಧಕ ಡಾ| ಸುಂದರ ರಾಜನ್ ಬೆಂಗಳೂರು ವಹಿಸಲಿದ್ದಾರೆ. ಈ ವರ್ಷದ ಸೋದೆ ಸದಾಶಿವರಾಯ ಪ್ರಶಸ್ತಿಗೆ ಖ್ಯಾತ ಶಾಸನ ತಜ್ಞ ಡಾ| ದೇವರಕೊಂಡಾರೆಡ್ಡಿ ಭಾಜನರಾಗಿದ್ದಾರೆ.
ಜೂ.18 ರಂದು ಬೆಳಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕಿ ರೂಪಾಲಿ ನಾಯ್ಕ, ಪರಂಪರೆ ಇಲಾಖೆ ರಾಜ್ಯ ನಿರ್ದೇಶಕ ಡಾ| ಗೋಪಾಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತ ಮಟ್ಟದ ಹಿರಿಯ ಪ್ರಚಾರಕ ಪ.ರಾ. ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ. ಇತಿಹಾಸಕಾರ ಲಕ್ಷ್ಮೀಶ್ ಸೋಂದಾ ರಚಿಸಿದ ಅನುರಾಯ ಶಾಲ್ಮಲೆ, ಸದಾಶಿವರಾಯನ ನಿಗೂಢ ಆತ್ಮಕಥನ ಲೋಕಾರ್ಪಣೆಗೊಳ್ಳಲಿದೆ.
ಈ ವರ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರಾಚೀನ ಭಾರತದ ಕೊಡುಗೆಗಳು ಎಂಬ ವಿಷಯದಲ್ಲಿ ನಾಲ್ಕು ಪ್ರಧಾನ ಗೋಷ್ಠಿ ಹಾಗೂ ಎರಡು ಉಪಗೋಷ್ಠಿಗಳು ನಡೆಯಲಿವೆ. ಪ್ರಾಚೀನ ಭಾರತದ ನಗರ ವಾಸ್ತು ವಿಜ್ಞಾನ, ನೌಕಾ ತಂತ್ರಜ್ಞಾನ, ಕೃಷಿ ವಿಜ್ಞಾನ, ನೀರಾವರಿ ತಂತ್ರಜ್ಞಾನ, ಯೋಗ ವಿಜ್ಞಾನ, ಚಿಕಿತ್ಸಾ ಪದ್ಧತಿಯ ಇತಿಹಾಸ, ಖಗೋಳ ವಿಜ್ಞಾನ, ಪ್ರಾಚೀನ ಭಾರತದ ಶಾಸ್ತ್ರ ಗ್ರಂಥಗಳು, ಈ ವಿಷಯಗಳ ಕುರಿತು ಡಾ| ಅನುರಾಧಾ ವಿ., ಡಾ| ಲ.ನ. ಸ್ವಾಮಿ, ಡಾ| ನರಸಿಂಹನ್, ಡಾ| ಹರಿಹರ ಶ್ರೀನಿವಾಸರಾವ್, ಡಾ| ಕೋಟೆಮನೆ ರಾಮಚಂದ್ರ ಭಟ್, ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ, ಡಾ| ಶ್ರೀನಾಥ್ ರತ್ನಕುಮಾರ್, ಡಾ| ಜಯಸಿಂಹ ವಿಷಯ ಮಂಡಿಸಲಿದ್ದಾರೆ. ಡಾ| ಸಿ.ಎಸ್ ವಾಸುದೇವನ್, ಡಾ| ರಾಜಾರಾಮ್ ಹೆಗಡೆ, ಡಾ| ರಮೇಶ್ ನಾಯಕ್, ನರೇಂದ್ರ ಕೆ.ವಿ., ಡಾ| ಟಿ.ಎಸ್. ಹಳೆಮನೆ, ಡಾ| ವೆಂಕಟರಾವ್ ಪಲಾಟೆ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ| ಶೆಲ್ವಪಿಳ್ಳೈ ಅಯ್ಯಂಗಾರ್ ಆಶಯ ನುಡಿಗಳನ್ನು ಆಡಲಿದ್ದಾರೆ. ಎರಡನೇ ದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಟಾರ್, ಪರಂಪರೆ ಇಲಾಖೆ ನಿರ್ದೇಶಕ ಡಾ| ಗೋಪಾಲ್, ಹಂಪಿ ವಿವಿ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಅಮರೇಶ್ ಯತಗಲ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹನುಮಂತಪ್ಪ ನಿಟ್ಟೂರ್, ಸಾಹಿತಿ ಸಂತೋಷ್‌ಕುಮಾರ್ ಮೆಹೆಂದಳೆ ಭಾಗವಹಿಸಲಿದ್ದಾರೆ. ಸಮ್ಮೇಳನದ ಮೊದಲ ದಿನ ಸಂಜೆ ಶಿರಸಿ ಯಕ್ಷಗೆಜ್ಜೆ ತಂಡದಿಂದ ಬೊಮ್ಮಯ್ಯ ಗಾಂವ್ಕರ್ ವಿರಚಿತ ಐತಿಹಾಸಿಕ ಯಕ್ಷಗಾನ ಚಾಲುಕ್ಯ ವರ್ಧನ ಪ್ರದರ್ಶನವಾಗಲಿದೆ.
ವಿಶೇಷ ಆಕರ್ಷಣೆಯಾಗಿ ಹೈದ್ರಾಬಾದ್‌ನ ಮೋಹನ ಆರ್. ಅವರಿಂದ ಆದಿಮಾನವ ವಿರಚಿತ ಬಂಡೆಗಲ್ಲು ಚಿತ್ರಗಳ ಪ್ರದರ್ಶನ ಇರಲಿದೆ. ಮಿಥಿಕ್ ಸೊಶೈಟಿಯ ಉದಯ್‌ಕುಮಾರ್ ಅವರಿಂದ ಶಾಸನಗಳ ಡಿಜಿಟಲೀಕರಣ ಪ್ರಾತ್ಯಕ್ಷಿಕೆ ನಡೆಯಲಿದೆ. ಪ್ರಾಚೀನ ಭಾರತದ ವಿಜ್ಞಾನ ತಂತ್ರಜ್ಞಾನದ ಭವ್ಯ ಅನಾವರಣ ಈ ವರ್ಷದ ಇತಿಹಾಸೋತ್ಸವದ ವಿಶೇಷವಾಗಲಿದೆ.