Advertisement

ಕಾಂಗ್ರೆಸ್‌ ಪಕ್ಷವನ್ನು ಚರಿತ್ರೆ ಕ್ಷಮಿಸದು: ಸುಧಾಕರ

08:51 PM Oct 23, 2021 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್‌ ಲಸಿಕೆ ವಿಚಾರದಲ್ಲಿ ಆರಂಭದಿಂದಲೂ ಅಪ್ರಪ್ರಚಾರ, ಅಸಹಕಾರ ಹಾಗೂ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತ ಬಂದ ಕಾಂಗ್ರೆಸ್‌ ಪಕ್ಷವನ್ನು ಚರಿತ್ರೆ ಹಾಗೂ ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಸುಮಾರು 100 ಕೋಟಿ ಜನರಿಗೆ ಲಸಿಕೆ ನೀಡಿರುವುದು ಸಾಧನೆ ಅಲ್ಲವೇ, ಇದು ವಿಪಕ್ಷಗಳ ಕಣ್ಣಿಗೆ ಕಾಣಿಸುತ್ತಿಲ್ಲವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ ವಾಗ್ಧಾಳಿ ನಡೆಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕೇವಲ 9 ತಿಂಗಳಲ್ಲಿ ದೇಶದ 100 ಕೋಟಿ ಜನರಿಗೆ ಲಸಿಕೆ ನೀಡಿದ್ದು ಭಾರತೀಯರಾಗಿ ಸಂಭ್ರಮಿಸುವ, ಹೆಮ್ಮೆಯ ಕ್ಷಣವಾಗಿದೆ. ಇದೊಂದು ದೊಡ್ಡ ಮೈಲುಗಲ್ಲಾಗಿದ್ದು, ನವ ಭಾರತ ನಿರ್ಮಾಣ ನಿಟ್ಟಿನಲ್ಲಿ ಪ್ರಧಾನಿಯವರ
ದೃಷ್ಟಿಕೋನ-ಬದ್ಧತೆ ಇದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿಯೂ 6.20 ಕೋಟಿ ಜನರಿಗೆ ಮೊದಲನೇ ಡೋಸ್‌ ಲಸಿಕೆ ನೀಡಲಾಗಿದ್ದು, ಇದಕ್ಕೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದ್ಧತೆ ಕಾರಣವಾಗಿದೆ ಎಂದರು.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌, ವೆಂಟಿಲೇಟರ್‌ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಹೆಚ್ಚಿಸಲಾಗಿದೆ. ಶೇ.90ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇಲ್ಲ. ವೆಂಟಿಲೇಟರ್‌ ಬಳಕೆಗೆ ಇನ್ನಿತರ ಕಾರ್ಯಕ್ಕೆ ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ 104 ಆರೋಗ್ಯ ಸಹಾಯವಾಣಿ ಸಿಬ್ಬಂದಿಗೆ ವೇತನ ದೊರೆಯದಿರುವ ಕುರಿತಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ಸರಕಾರಗಳು ಸಹಾಯವಾಣಿ ಕೇಂದ್ರ ನಿರ್ವಹಣೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಸಮರ್ಪಕ ಷರತ್ತು ವಿಧಿಸದ ಕಾರಣ ಸಮಸ್ಯೆ ಎದುರಿಸುವಂತಾಗಿದೆ. ಏಜೆನ್ಸಿಗಳನ್ನು ಬದಲಾಯಿಸಲಾಗುತ್ತಿದ್ದು, ಕಟ್ಟುನಿಟ್ಟಿನ ಷರತ್ತು ವಿಧಿಸಲಾಗುತ್ತಿದೆ ಎಂದರು.

ಮೋದಿ ಮುತ್ಸದ್ದಿ ರಾಜಕಾರಣಿ ಎಂಬುದು ಸಾಬೀತು
ಲಸಿಕೆ ವಿಚಾರದಲ್ಲಿ ಪ್ರಧಾನಿ ಮೋದಿಯವರು ರಾಜಕಾರಣ ಇಲ್ಲವೆ ತಾರತಮ್ಯಕ್ಕೆ ಮುಂದಾಗಲಿಲ್ಲ. ಲಸಿಕೆ ವಿಚಾರದಲ್ಲಿ ಮಹಾರಾಷ್ಟ್ರ, ಕೇರಳಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದರು. ಅಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲ. ರೋಗದ ಗಂಭೀರತೆ ಅರಿತು ಅದಕ್ಕೆ ಸ್ಪಂದಿಸುವ ಕಾರ್ಯ ಮಾಡಿದರು. ಪ್ರಧಾನಿಯವರು ತಾವೊಬ್ಬ ಮುತ್ಸದ್ಧಿ ರಾಜಕಾರಣಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.

Advertisement

ಅಂಕಿ-ಅಂಶಗಳ ಮೇಲಾದರೂ ಸ್ವಲ್ಪ ಕಣ್ಣಾಡಿಸಿ
ಅಮೆರಿಕದಲ್ಲಿ ಇದುವರೆಗೂ 40 ಕೋಟಿ ಜನರಿಗೆ ಲಸಿಕೆ ನೀಡಿದ್ದರೆ, ಬ್ರೆಜಿಲ್‌ನಲ್ಲಿ 24.9 ಕೋಟಿ ಜನರಿಗೆ, ಇಂಗ್ಲೆಂಡ್‌ನ‌ಲ್ಲಿ 9.4 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಐರೋಪ್ಯ ಖಂಡದ 44 ದೇಶಗಳು ಹಾಗೂ ಅಮೆರಿಕ ಸೇರಿ ಎರಡು ಖಂಡದಲ್ಲಿ ಎಷ್ಟು ಲಸಿಕೆ ನೀಡಲಾಗಿದೆಯೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ನಮ್ಮ ದೇಶದಲ್ಲಿ ನೀಡಲಾಗಿದೆ. ಅಮೆರಿಕದಂತಹ ಶ್ರೀಮಂತ ದೇಶಗಳಲ್ಲಿಯೂ ಹಣ
ಪಡೆದು ಲಸಿಕೆ ನೀಡಲಾಗುತ್ತಿದ್ದರೆ, ಭಾರತದಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ.

ಇನ್ನು ಕೋವಿಡ್‌ನಿಂದಾದ ಸಾವಿನ ವಿಚಾರಕ್ಕೆ ಬಂದರೆ 10 ಲಕ್ಷ ಜನ ಸೋಂಕಿತರ ಪ್ರಮಾಣ ಇಟಲಿಯಲ್ಲಿ 77,999, ಇಂಗ್ಲೆಂಡ್‌ನ‌ಲ್ಲಿ 1.21ಲಕ್ಷ , ಅಮೆರಿಕಾದಲ್ಲಿ 1.36 ಲಕ್ಷ, ಭಾರತದಲ್ಲಿ ಇದರ ಪ್ರಮಾಣ ಕೇವಲ 24,346 ಆಗಿದೆ. ಇನ್ನು ಕೋವಿಡ್‌ನಿಂದ 10 ಲಕ್ಷ ಸೋಂಕಿತರಲ್ಲಿ ಮೃತಪಟ್ಟವರ ಅಂಕಿ-ಅಂಶ ನೋಡಿದರೆ ರಷ್ಯಾದಲ್ಲಿ 1,500 ಜನ, ಇಂಗ್ಲೆಂಡ್‌ನ‌ಲ್ಲಿ 2020 ಜನರು ಮೃತಪಟ್ಟರೆ  ಭಾರತದಲ್ಲಿ ಅದರ
ಪ್ರಮಾಣ 323 ಆಗಿದೆ. ವಿಪಕ್ಷಗಳು ವಿನಾಕಾರಣ ಆರೋಪ-ಟೀಕೆಗಳ ಬದಲು ಈ ಅಂಕಿ-ಅಂಶಗಳನ್ನಾದರೂ ಕಣ್ಣಾಡಿಸುವ ಕೆಲಸ ಮಾಡಲಿ ಎಂದರು.

30 ವರ್ಷಗಳೇ ಬೇಕಾಗಿತ್ತು!
ಬಿಸಿಜಿ ಲಸಿಕೆ 1926 ಕಂಡುಹಿಡಿದರೆ ಅದು ಭಾರತಕ್ಕೆ ಬಂದಿದ್ದು 1951ರಲ್ಲಿ. ಡಿಪಿಟಿ ಲಸಿಕೆ 1948ರಲ್ಲಿ ಬಂದರೆ, ಭಾರತಕ್ಕೆ ಬಂದಿದ್ದು 1962ರಲ್ಲಿ. ಒಪಿಬಿ ಲಸಿಕೆ 1961ರಲ್ಲಿ ತಯಾರಾದರೆ ಭಾರತಕ್ಕೆ ಬಂದಿದ್ದು 1970ರಲ್ಲಿ. ಹೆಪಟೈಟಿಸ್‌ ಬಿ ಲಸಿಕೆ ಅಮೆರಿಕ, ಐರೋಪ್ಯ ದೇಶಗಳಲ್ಲಿ 1982ರಲ್ಲಿ ಬಂದರೆ, ಭಾರತಕ್ಕೆ ಬಂದಿದ್ದು 1997ಕ್ಕೆ ಹಾಗೂ ಅದರ ಬಳಕೆ ಆಗಿದ್ದು 2002ರಲ್ಲಿ. ಸಮರ್ಪಕ ರೀತಿಯಲ್ಲಿ ನೀಡಿಕೆಯಾಗಿದ್ದು 2010ರ ನಂತರದಲ್ಲಿ. ಈ ರೀತಿಯ 12 ಲಸಿಕೆಗಳು ಭಾರತಕ್ಕೆ ಬಂದಿದ್ದು ವಿಳಂಬವಾಗಿ. ಆದರೆ ಕೋವಿಡ್‌ ಕುರಿತಾಗಿ ವಿಶ್ವದಲ್ಲಿ ಮೊದಲ ಲಸಿಕೆ ಬಂದಿದ್ದು 2020ರ ಡಿಸೆಂಬರ್‌ನಲ್ಲಿ, ಭಾರತದಲ್ಲಿ 2021ರ ಜನೆವರಿಯಲ್ಲಿಯೇ ಕೋವ್ಯಾಕ್ಸಿನ್‌ ಲಸಿಕೆ ತಯಾರಿಸಲಾಯಿತು. ಇದು ವಿಪಕ್ಷಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next