Advertisement

ಐತಿಹಾಸಿಕ ರಾಕ್ಷಸ ತಂಗಡಿ -ಪೌರಾಣಿಕ ಹಿನ್ನೆಲೆಯ ಕರ್ಣ ಸಾಂಗತ್ಯ

12:52 AM Jan 03, 2020 | mahesh |

ಗಿರೀಶ್‌ ಕಾರ್ನಾಡ್‌ ಬರೆದ ಕೊನೆಯ ನಾಟಕ “ರಾಕ್ಷಸ – ತಂಗಡಿ’ (ನಿರ್ದೇಶನ : ಬಿ.ಆರ್‌. ವೆಂಕಟರಮಣ ಐತಾಳ) ನೀನಾಸಮ್‌ ತಿರುಗಾಟದ ಈ ವರ್ಷದ ಮೊದಲ ನಾಟಕ. ಇದೊಂದು ಐತಿಹಾಸಿಕ ಹಂದರದ ರಾಜಕೀಯ ನಾಟಕ. ವಿಜಯನಗರ ಸಾಮ್ರಾಜ್ಯ ಪತನವಾಗಲು ಅನೇಕ ಒಳಸುಳಿಗಳು ಕಾರಣವಾಗಿವೆ. ಕೃಷ್ಣ ದೇವರಾಯನ ಅಳಿಯ ರಾಮರಾಯ ದಕ್ಷ, ಸಾಹಸಿ. ಹೀಗಾಗಿ ಕೃಷ್ಣ ದೇವರಾಯನ ನೇರ ಉತ್ತರಾಧಿಕಾರಿಗಳನ್ನು ಕೈಗೊಂಬೆ ಮಾಡಿಕೊಳ್ಳುತ್ತಾನೆ. ಆಡಳಿತ ಎಲ್ಲವೂ ಇವನದೆ. ಇಂಥ ಸಂದರ್ಭದಲ್ಲಿಯೇ ಬಿಜಾಪುರದ ಸುಲ್ತಾನ್‌ ಅಧಿಲ್‌ ಷಾ ಇತರ ತುಂಡರಸರಾದ ಕುತುಬ್‌ಷಾ, ನಿಝಾಮ್‌ಷಾ, ಬರೀದ್‌ಷಾ ಈ ನಾಲ್ಕು ಜನರು ಒಟ್ಟಾಗಿ ರಾಮರಾಯನ ಮೇಲೆ ಮುಗಿಬೀಳುತ್ತಾರೆ. ಬಿಡಿಬಿಡಿಯಾಗಿ ಅವರನ್ನು ಗೆದ್ದಿದ್ದ ರಾಮರಾಯ ಅತ್ಯುತ್ಸಾಹದಿಂದಲೇ ಯುದ್ಧವನ್ನು ಎದುರಿಸುತ್ತಾನೆ. ಯುದ್ಧದಲ್ಲಿ ಹತನಾಗುತ್ತಾನೆ ರಾಮರಾಯ. ನಂತರ ಇಡೀ ವಿಜಯನಗರ ಕೊಳ್ಳೆ ಹೊಡೆಯಲ್ಪಡುತ್ತದೆ. ಈ ಕೊಳ್ಳೆ ಕೇವಲ ಬಹಮನಿ ಸೇನೆಯಿಂದಲ್ಲ. ಸ್ಥಳೀಯರು ಇದರ ಪ್ರಯೋಜನ ಪಡೆದು ಇಡೀ ವಿಜಯನಗರವನ್ನು ಸೂರೆ ಮಾಡುತ್ತಾರೆ.

Advertisement

ಅಲ್ಲಿಂದಲೇ ನಾಟಕ ಆರಂಭ. ಅಲ್ಲಿ ಎಲ್ಲ ರೀತಿಯ ಬಟ್ಟೆಗಳು, ಮಹಿಳೆಯರ ವಸ್ತ್ರಗಳನ್ನು ರಂಗದ ಮೇಲೆ ಎಸೆದು ತೋರಿಸುವುದರಿಂದ. (ಇಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿ ಮಾಡಿ ತೋರಿಸಬೇಕಿತ್ತು) ಯುದ್ಧವೆಂದರೆ ಅದು ಸೋತ ದೇಶದ ಬರಿಯ ಸಂಪತ್ತಿನ ವಜ್ರ, ಆಭರಣ, ಹಣ ಇತರಗಳಷ್ಟೇ ಸೂರೆಯಲ್ಲ. ಗೆದ್ದ ಸೈನಿಕರು ಸೋತ ರಾಜ್ಯದ ಮಹಿಳೆಯರ ಮಡಿಲಿಗೆ ಮೊದಲು ಕೈಹಾಕುತ್ತಾರೆ. ಅದಕ್ಕಾಗಿ ಕೆಟ್ಟ ರಾಜನಿದ್ದರೂ ಆದೀತು. ರಾಜನಿಲ್ಲದ ರಾಜ್ಯಬೇಡ. ಅರಾಜಕತ್ವ (Anarchy) ಯಾರಿಗೂ ಬೇಡ. ಯುದ್ಧದ ನಿರರ್ಥಕತೆಯನ್ನು ಇನ್ನೂ ಚೆನ್ನಾಗಿ ತೋರಿಸಬೇಕಿತ್ತು. ಮನುಷ್ಯ ಸಂಭಾವಿತನೆಂದು ವರ್ತಿಸುವುದು ನಾಗರಿಕ ಸಮಾಜದಲ್ಲಿ ಕಾನೂನು ಗಟ್ಟಿ ಇದ್ದಾಗ ಮಾತ್ರ.

ನಾಟಕದಲ್ಲಿ ವಿಜೃಂಭಿಸುವನು ಅಳಿಯ ರಾಮರಾಯ (ಎಚ್‌. ಮಂಜುನಾಥ್‌ ಕಾಸರಗೋಡು). ತಮ್ಮ ಗಟ್ಟಿಯಾದ ಚುರುಕು ನಡಿಗೆ, ಭಾವಭಂಗಿ ತೀಕ್ಷ್ಣ ಕಣ್ಣುನೋಟಗಳಿಂದ. ಮಂಜುನಾಥ ಎ.ಸಿ. (ನಿಝಾಮ್‌ ಶಹ) ಚಂದನ್‌ ಎಸ್‌. (ಕುತುಬ್‌ ಶಹ) ಸಂತೋಷ ಕುಮಾರ ಮೆಳ್ಳಿ (ಅದಿಲ್‌ ಶಹ) ರಂಜಿತಾ ಈ. ಜಾಧವ್‌ (ತಿರುಮಲಾಂಬ) ಚೆನ್ನಾಗಿಯೇ ನಟಿಸಿದ್ದಾರೆ. ಸಂತೋಷ ಕುಮಾರ ಮೆಳ್ಳಿಯವರದ್ದು ಎರಡೂ ಸಂದರ್ಭಗಳಲ್ಲಿಯೂ ಉತ್ತಮ ಅಭಿನಯ.

ಜನ ನಂಬುಗೆಯ (ಅಥವಾ ನಮ್ಮ ಪಠ್ಯ ಮತ್ತು ಆಡುನುಡಿಗಳಿಂದ) ಇದು ಮತಸಂಘರ್ಷ. ಹಿಂದೂ ಮತ್ತು ಮುಸ್ಲಿಂ ಧರ್ಮದ ಸಂಘರ್ಷ ಅಲ್ಲ. ಎರಡೂ ಕಡೆಯ ಸೈನಿಕ ಆಯಾ ಧರ್ಮದವರಲ್ಲದ ಸೈನಿಕರು, ಅಧಿಕಾರಿಗಳೂ ಇದ್ದಾರೆ. ಅಧಿಲ್‌ ಶಹ ಮತ್ತು ಅಳಿಯ ರಾಮರಾಯರ ನಡುವೆ ತಂದೆ – ಮಗನ ಬಾಂಧವ್ಯವಿದೆ. ಈ ಸಂಬಂಧ, ಪ್ರೀತಿ ಎನ್ನುವುದು ಮತಾತೀತವಾದದ್ದೆಂದೂ ನಾಟಕ ಸೂಕ್ಷ್ಮವಾಗಿ ಹೇಳುತ್ತದೆ. ಸೂತ್ರಧಾರರಂತೆ ವರ್ತಿಸುವ ಗುಂಪು ಹೇಳುವ ಹಾಡುಗಳ ಏಕತಾನತೆಯನ್ನು ತಪ್ಪಿಸಬೇಕಾಗಿತ್ತು ಎನಿಸುತ್ತದೆ.

ಕಾರ್ನಾಡರ ನಾಟಕಗಳು ಜೀವಾಳವಿರುವುದೆ ಸಂಭಾಷಣೆಗಳಲ್ಲಿ (ಉ.ದಾ: ಯಯಾತಿ, ತುಘಲಕ್‌). ಇಂಥ ಧ್ವನಿಪೂರ್ಣ ಸಂಭಾಷಣೆಗಳ ಕೊರತೆ ಕಾಡುತ್ತದೆ ಈ ನಾಟಕದಲ್ಲಿ .

Advertisement

ಎರಡನೇ ನಾಟಕ “ಕರ್ಣ ಸಾಂಗತ್ಯ’. ಪಂಪ ಮಹಾಕವಿಯು “ನೆನೆಯದಿರಣ್ಣ ಪೆರೆದಾರುಂ, ನೆನವೊಡೆಕರ್ಣನಂ ನೆನೆಯ’ ಎಂಬ ಮಾತು ಕರ್ಣವನ್ನು ಮನನ ಮಾಡಿಕೊಂಡಾಗ ನಮಗೆ ಬೇರೆ ಕರ್ಣನ ಕಾಣಲು ಅಸಾಧ್ಯ. “ಜನಪದ ಮಹಾಭಾರತ, ಕುಮಾರ ವ್ಯಾಸ ಭಾರತ, ಪಂಪ ಭಾರತ ಮತ್ತು ಅಮೃತ ಸೋಮೇಶ್ವರ ಒಂದು ಯಕ್ಷಗಾನ ಪ್ರಸಂಗ ಇವುಗಳನ್ನು ಸಹಯೋಗಿಸಿ ಕಟ್ಟಿರುವುದು ಈ ರಂಗ ಪಠ್ಯ’ ಎಂಬುದಾಗಿ ಕರಪತ್ರದಲ್ಲಿ ಹೇಳಲಾಗಿದೆ. ಏನೇ ಆದರೂ ಕರ್ಣ ಕಥನಕ್ಕೆ ಬೇರೆ ಸಂಗತಿಗಳನ್ನು ಸೇರಿಸಲಾಗುವುದಿಲ್ಲ. ಆತನು ದುರಂತ ನಾಯಕನೆಂದು ಅಲ್ಲಗಳೆಯಲಾಗುವುದಿಲ್ಲ. ಸೂರ್ಯ ದೇವರಿಂದ ಹುಟ್ಟುವುದು, ನದಿಗೆ ಎಸೆಯುವುದು, ಬೆಸ್ತರಿಗೆ ಸಿಗುವುದು, ಹಸ್ತಿನಾವತಿ ರಾಜಕುಮಾರರ ಶಸ್ತ್ರಾಸ್ತ್ರಗಳ ಪರೀಕ್ಷೆಯಲ್ಲಿ ಇವನು ಭಾಗವಹಿಸುವುದು, ಅವಮಾನ ಹೊಂದುವುದು, ಅಂಗರಾಜ್ಯದ ಪಟ್ಟ ದಕ್ಕಿ ಕೌರವರ ಪಕ್ಷ ಸೇರುವುದು, ಕೃಷ್ಣನಿಂದ ಜನ್ಮ ರಹಸ್ಯ ತಿಳಿದು ಶಕ್ತಿಹೀನವಾಗುವುದು, ಕುಂತಿಗೆ ಭಾಷೆ ಕೊಟ್ಟು ನಿರ್ಜೀವನಾಗುವುದು, ಶಲ್ಯ ಕೈ ಕೊಡುವುದು, ಯುದ್ಧದಲ್ಲಿ ರಥದ ಚಕ್ರ ಮುರಿದು ಬೀಳುವುದು, ಕೃಷ್ಣ ವೇಷಧಾರಿಯಾಗಿ ಕರ್ಣ ಕುಂಡಲ, ಕವಚ, ಜಲಕವನ್ನು ಕಿತ್ತುಕೊಳ್ಳುವುದು. ಅವೆಲ್ಲಾ ಸಾವಿನತ್ತ ಹೆಜ್ಜೆಗಳು…

“ಕರ್ಣ ಸಾಂಗತ್ಯ’ದಲ್ಲಿ ದ್ರೌಪದಿಗೆ ಕರ್ಣನ ಮೇಲೆ ಆಸೆ ಇತ್ತು ಎಂದು ತೋರಿಸುವುದು ದೃಶ್ಯವಾಗಿ ಚೆನ್ನಾಗಿ ಕಂಡರೂ ಅದು ಅನಗತ್ಯವಾಗಿತ್ತು. ಅದು ದ್ರೌಪದಿ ಸಾಂಗತ್ಯ! ಕೊನೆಯಲ್ಲಿ ಕರ್ಣ “ಏಕೆ ಈ ಎಲ್ಲಾ ಸಂಕಟಗಳು ನನಗೇ ಬಂದವು?’ ಎಂದು ಕೃಷ್ಣನನ್ನು ಕೇಳುವಷ್ಟರಲ್ಲಿಗೆ ನಾಟಕ ಮುಗಿದಿದ್ದರೆ ಅರ್ಥಪೂರ್ಣವಾಗುತ್ತಿತ್ತು. ದುರಂತ ಕಾಣುತ್ತಿತ್ತು. ಆದರೆ ಅದರ ಮುಂದಿನ ಕತೆ ಕೃಷ್ಣನು ಇದು ಜನ್ಮಾಂತರದ ಶಾಪದ ಅನಿವಾರ್ಯತೆಯೆಂದು ಹೇಳಿದಾಗ ದೃಶ್ಯ ಮಾಧ್ಯಮದಲ್ಲಿ ಅದು ಚೆನ್ನಾಗಿ ಕಂಡರೂ ಇಡೀ ಕರ್ಣನ ವ್ಯಕ್ತಿತ್ವವೇ ಮಸುಕಾಗುತ್ತದೆ. ಆದರೆ ನಾಟಕದ ದೃಶ್ಯ ಸಂಯೋಜನೆಯಲ್ಲಿ ಗಣೇಶ ಮಂದರ್ತಿ (ನಿರ್ದೇಶಕ) ಯಶಸ್ವಿಯಾಗಿದ್ದಾರೆ. ಪ್ರಶಾಂತ ಶೆಟ್ಟಿ (ಕರ್ಣ), ಸಂತೋಷ ಕುಮಾರ್‌ ಮಳ್ಳಿ (ಕೃಷ್ಣ ), ಉಜ್ವಲ್‌ ಯು.ವಿ. (ಅರ್ಜುನ), ನಾಗೇಂದ್ರ ಶ್ರೀನಿವಾಸ್‌ (ದುರ್ಯೋಧನ, ಮಂಜುನಾಥ್‌ ಹರೇಮಠ (ಭೀಮ) ಚೆನ್ನಾಗಿಯೇ ಅಭಿನಯಿಸಿದ್ದಾರೆ.

“ನೀನಾಸಮ್‌ ತಿರುಗಾಟ’ದಲ್ಲಿ ನಟರಿಗಿಂತ ಹೆಚ್ಚಾಗಿ, ದೃಶ್ಯಗಳನ್ನು ಕಟ್ಟುವುದು, ಹಿತಮಿತವಾಗಿ ಸಂಗೀತ, ಬೆಳಕು ವಿನ್ಯಾಸ ಇವೆಲ್ಲವೂ ನಾಟಕವನ್ನು ಎತ್ತಿ ಹಿಡಿಯುತ್ತದೆ. ನಟರಲ್ಲಿನ ಸಹಕಾರ, ಚುರುಕುದೃಶ್ಯ ಬದಲಾವಣೆ, ಸರಳ ವಸ್ತ್ರಾಲಂಕಾರದ ತಜ್ಞತೆ – ಎಲ್ಲವೂ ಸಹಕಾರಿಯಾಗಿರುತ್ತದೆ. ಕೆಲವೊಮ್ಮೆ ನಾಟಕಕ್ಕನುಗುಣವಾಗಿ ಒಬ್ಬ, ಒಬ್ಬಳಿಗೆ ಒಂದು ಮುಖ್ಯ ಪಾತ್ರ ದೊರಕಿದಾಗ ಆತ /ಆಕೆ)/ ಎದ್ದುಕಂಡರೂ (ಅವರವರ ಪ್ರತಿಭೆಯನ್ನು ಅಲ್ಲಗೆಳೆಯದೆ) ಅದಕ್ಕೆ ತುಂಬಾ ಮಹತ್ವವನ್ನು ನೀನಾಸಮ್‌ ತಿರುಗಾಟದಲ್ಲಿ ಪರಿಗಣಿಸಬಾರದು. ಅದು ನೀನಾಸಮ್‌.

ಡಾ| ಜಯಪ್ರಕಾಶ ಮಾವಿನಕುಳಿ

Advertisement

Udayavani is now on Telegram. Click here to join our channel and stay updated with the latest news.

Next