Advertisement

ಇಸ್ತಾನ್‌ಬುಲ್‌ನಲ್ಲಿ ಸಿಕ್ಕಿದ ಚರಿತ್ರೆಯ ತುಣುಕುಗಳು

06:00 AM Jun 24, 2018 | |

ಇಸ್ತಾನ್‌ಬುಲ್‌ ಆಳಿದ ಒಬ್ಬೊಬ್ಬ ಚಕ್ರವರ್ತಿ ಅಥವಾ ಸುಲ್ತಾನ ಒಂದೊಂದು ಮಸೀದಿ ಅಥವಾ ಇಗರ್ಜಿ ಕಟ್ಟಿಸಿದ, ಒಂದೊಂದು ಸಮಾಧಿಗೆ ಜಾಗ ಮಾಡಿಕೊಂಡ. ಹಾಗಾಗಿ, ಇವತ್ತು ಇಸ್ತಾನ್‌ಬುಲ್‌ನಲ್ಲೇ ಸುಮಾರು 3600 ಮಸೀದಿಗಳಿವೆ, ನೂರಕ್ಕೂ ಹೆಚ್ಚು ಇಗರ್ಜಿಗಳಿವೆ.

Advertisement

1 ಜಗತ್ತಿನ ಭೂಪಟವನ್ನು ಎದುರಿಗೆ ಹರಡಿಕೊಳ್ಳಿ. ಯೂರೋಪ್‌ ಮತ್ತು ಏಷಿಯಾ ಖಂಡಗಳು ಒಂದನ್ನೊಂದು ಭೇಟಿಯಾಗುವ ತಾಣದಲ್ಲಿ ಇಸ್ತಾನ್‌ಬುಲ್‌ ಎನ್ನುವ ಊರನ್ನು ಗುರುತು ಮಾಡಿಕೊಳ್ಳಿ. ಈಗ ಇಸ್ತಾನ್‌ಬುಲ್‌ನಿಂದ ಆಗ್ನೇಯ ದಿಕ್ಕಿನತ್ತ ನಡೆದರೆ ಅಲ್ಲೊಂದು ಊರು, ಬಸ್ರಾ ಅಂತ. ಅದನ್ನು ಗುರುತು ಮಾಡಿಕೊಳ್ಳಿ. ಇಸ್ತಾನ್‌ಬುಲ್‌ನಿಂದ ಈಶಾನ್ಯ ದಿಕ್ಕಿನಲ್ಲಿ, ಸೋವಿಯಟ್‌ ರಷ್ಯಾದ ಬುಡದಲ್ಲಿ ಕ್ರಿಮೀ ಅಂತ ಊರಿದೆ. ಅದನ್ನು ಗುರುತು ಮಾಡಿಕೊಳ್ಳಿ. ಹಾಗೇ ಕೊಂಚ ಉತ್ತರ ದಿಕ್ಕಿನಲ್ಲಿ ಒಡೆಸ್ಸಾ ಅಂತ ಊರಿದೆಯಲ್ಲ, ಅದನ್ನೂ ಗುರುತು ಮಾಡಿಕೊಳ್ಳಿ. ಈಗ ಇಸ್ತಾನ್‌ಬುಲ್‌ನಿಂದ ವಾಯುವ್ಯ ದಿಕ್ಕಿಗೆ ನಡೆದರೆ ಅಲ್ಲೆಲ್ಲೋ ದೂರದಲ್ಲಿ ವಿಯೆನ್ನಾ ಅಂತಿದೆ. ಗುರುತು ಮಾಡಿಕೊಳ್ಳಿ. ಇಸ್ತಾನ್‌ಬುಲ್‌ನ ದಕ್ಷಿಣದಿಕ್ಕಿನಲ್ಲಿ ಕೈರೋ ಮತ್ತು ನೈಋತ್ಯದಲ್ಲಿ ಟ್ರಿಪೋಲಿ ಅಂತಿವೆ. ಅವನ್ನೂ ಗುರುತು ಮಾಡಿಕೊಳ್ಳಿ. ಈಗ ಗುರುತಿಟ್ಟುಕೊಂಡ ಎಲ್ಲಾ ಚುಕ್ಕಿಗಳನ್ನು ಜೋಡಿಸುತ್ತ ಒಂದು ಗೆರೆ ಹಾಕಿಕೊಳ್ಳಿ. ನೀವು ಎಳೆದ ಗೆರೆ ಮೆಡಿಟರೇನಿಯನ್‌ ಸಮುದ್ರ, ಕಪ್ಪು ಸಮುದ್ರ, ಮರ್‌ಮರಾ ಸಮುದ್ರಗಳನ್ನು ಆವರಿಸಿದೆ. ಯಾವುದೇ ಚುಕ್ಕಿಯಿಂದ ಅದರ ವಿರುದ್ಧ ದಿಕ್ಕಿನ ಇನ್ನೊಂದು ಚುಕ್ಕಿ ಏನಿಲ್ಲವೆಂದರೂ ಐದು ಸಾವಿರ ಕಿಲೋಮೀಟರ್‌ ಅಂತರದಲ್ಲಿದೆ. (ಅಂದರೆ ವಿಸ್ತೀರ್ಣದಲ್ಲಿ ಇಂದಿನ ಭಾರತದ ದುಪ್ಪಟ್ಟು) ಇದು ತನ್ನ ಉಚ್ಛಾ†ಯ ಕಾಲದಲ್ಲಿದ್ದ ಒಟ್ಟೋಮನ್‌ ಸಾಮ್ರಾಜ್ಯ- 1683ರಲ್ಲಿ.


ಚರಿತ್ರೆ ಕಂಡ, ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದು ಒಟ್ಟೋಮನ್‌ ಸಾಮ್ರಾಜ್ಯ. ತುರ್ಕಿ ಭಾಷೆಯಲ್ಲಿ ಒಸ್ಮಾನಲಿ- ಇಂಗ್ಲಿಷ್‌ನಲ್ಲಿ ಒಟ್ಟೋಮನ್‌ ಆಗಿದೆ. ಮೊದಲನೇ ಒಸ್ಮಾನ್‌ (1299) ಎರಡನೇ ಅಬ್ದುಲ್‌ ಮೆಜಿತ್‌ (1922) ಕಾಲದವರೆಗೆ – 1922ರಲ್ಲಿ ಟರ್ಕಿ ಗಣರಾಜ್ಯವಾಯಿತು- ಸರಿಸುಮಾರು ಆರು ನೂರು ವರ್ಷ ಇಡೀ ಜಗತ್ತನ್ನೇ ನಡುಗಿಸಿದ, ಜಗತ್ತಿನ ಕಿವಿ ಕೆಪ್ಪಾಗುವಂತೆ ಅಬ್ಬರಿಸಿದ, ಶ್ರೀಮಂತಿಕೆಯಲ್ಲಿ ಮೆರೆದ, ತನ್ನ ಚರಿತ್ರೆಯ ಒಳಸಂಚುಗಳನ್ನು, ಕೊಲೆಗಳನ್ನು, ರಾಜಕೀಯವನ್ನು ಶಾಶ್ವತವಾಗಿ ರಕ್ತದಲ್ಲಿ ಬರೆದ, 36 ಸುಲ್ತಾನರನ್ನು ಕಂಡ ಸಾಮ್ರಾಜ್ಯವಿದು. ಭಾರತದ ಅಶೋಕ ಚಕ್ರವರ್ತಿಯ ಅಥವಾ ಮೊಘಲರ ಅಥವಾ ವಿಕ್ರಮಾದಿತ್ಯ ಅಥವಾ ಚಾಲುಕ್ಯರ ಸಾಮ್ರಾಜ್ಯವನ್ನೇ ಅತಿ ದೊಡ್ಡ ಸಾಮ್ರಾಜ್ಯವೆನ್ನುವ ನಮಗೆ ಈ ಒಟ್ಟೋಮನ್‌ ಸಾಮ್ರಾಜ್ಯದ ಕಾಲ ಅಥವಾ ಹರಿವು ನಮ್ಮ ಕಲ್ಪನೆಗೂ ಸಿಗಲಾರದು. ಈ ಒಟ್ಟೋಮನ್‌ ಸಾಮ್ರಾಜ್ಯಕ್ಕೆ ನಾನ್ನೂರು ವರ್ಷಗಳು ರಾಜಧಾನಿಯಾಗಿದ್ದು ಇಸ್ತಾನ್‌ಬುಲ್‌!

2 ಎರಡು ಖಂಡಗಳಲ್ಲಿ ಹರಡಿಕೊಂಡಿರುವ ಜಗತ್ತಿನ ಏಕೈಕ ಊರು ಅಥವಾ ಪಟ್ಟಣ ಅಥವಾ ನಗರ ಅಥವಾ ರಾಜಧಾನಿ ಇಸ್ತಾನ್‌ಬುಲ್‌. ಬೊಸೊ#ರಸ್‌ ಜಲಮಾರ್ಗ ಉತ್ತರದ ಕಪ್ಪು ಸಮುದ್ರ ಮತ್ತು ದಕ್ಷಿಣದ ಮರ್‌ಮರಾ ಸಮುದ್ರವನ್ನು ಜೋಡಿಸಿದಲ್ಲಿ, ಪೂರ್ವದ ಏಷಿಯಾ ಟರ್ಕಿ ಮತ್ತು ಪಶ್ಚಿಮದ ಯೂರೋಪ್‌ ಟರ್ಕಿಯನ್ನು ದೂರ ಮಾಡುತ್ತದೆ. ವ್ಯಾಪಾರೀ ಹಡಗುಗಳೆಲ್ಲ ಈ ಬೊಸೊ#ರಸ್‌ ಜಲಮಾರ್ಗದಲ್ಲೇ ಹಾದು ಹೋಗಬೇಕು, ಇಲ್ಲವಾದಲ್ಲಿ ಸಿಲ್ಕ್ ರೂಟ್‌ ದಾರಿ ಹಿಡಿದು ಸುತ್ತು ಬಳಸಿ ಯೂರೋಪ್‌ ತಲುಪಬೇಕು. ವ್ಯಾಪಾರಿಗಳಿಗೆ ಅಷ್ಟೊಂದು ಸಮಯವೆಲ್ಲಿದೆ. ಹಾಗಾಗಿ ಜಾಗತಿಕವಾಗಿ, ಭೌಗೋಳಿಕವಾಗಿ ಇದೊಂದು ಅತಿ ಆಯಕಟ್ಟಿನ ಪ್ರದೇಶವಾಯಿತು. ಅಂತೆಯೇ ಚರಿತ್ರೆಯುದ್ದಕ್ಕೂ ಸಾಮ್ರಾಜ್ಯಗಳ ಉರಿಗಣ್ಣು ಸದಾ ಈ ಪ್ರದೇಶದ ಮೇಲೆ ಹರಿದಿದೆ.

ಇಸ್ತಾನ್‌ಬುಲ್‌ ಎನ್ನುವ ಸುಂದರಿಯ ಮೊದಲ ಹೆಸರು ಬೈಝಾಂಟಿಯಮ್‌. ಗ್ರೀಕರ ರಾಜಧಾನಿ. ಸುಮಾರು ಸಾವಿರ ವರ್ಷಗಳಾದ ಮೇಲೆ, ಕ್ರಿಶ 330ರಲ್ಲಿ, ಕಾನ್‌ಸ್ಟಾಂಟಿನ್‌ ಗ್ರೀಕರನ್ನು ಸದೆಬಡಿದು ಅದನ್ನು ತನ್ನ ರೋಮ್‌ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡ ದಿನದಿಂದ ಅದು ಕಾನ್‌ಸ್ಟಾಂಟಿನೋಪಲ್‌ (ಕಾನ್‌ಸ್ಟಾಂಟಿನ್‌ ನಗರ) ಆಗುತ್ತದೆ. ಬಸ್ರಾದಿಂದ ರಾಜ್ಯಭಾರ ಮಾಡುತ್ತಿದ್ದ ಒಟ್ಟೋಮನ್‌ ಸಾಮ್ರಾಜ್ಯದೊಂದಿಗೆ ಸದಾ ಕತ್ತಿ ಮಸೆದುಕೊಂಡೇ ಇರುತ್ತಾನೆ. 1453ರಲ್ಲಿ ಎರಡನೇ ಸುಲ್ತಾನ್‌ ಮೆಹೆ¾ತ್‌ ಖಾನ್‌ಸ್ಟಾಂಟಿನನನ್ನು ಸೋಲಿಸಿದ ದಿನದಿಂದ ಅದು ಇಸ್ತಾನ್‌ಬುಲ್‌ ಆಗಿ ಮೆರೆಯುತ್ತದೆ. 1923ರಲ್ಲಿ ಒಟ್ಟೊಮನ್‌ ಸಾಮ್ರಾಜ್ಯ ಪತನ ಹೊಂದಿ ಟರ್ಕಿ ಗಣರಾಜ್ಯವಾದಂದು ಹೊಸ ಟರ್ಕಿ ದೇಶದ ರಾಜಧಾನಿ ಅಂಕಾರವಾಗಿಬಿಡುತ್ತದೆ. ಚರಿತ್ರೆಯ ಉದ್ದಗಲಕ್ಕೂ ರಾಜಧಾನಿಯೆಂದೇ ಮೆರೆದಿದ್ದ ಇಸ್ತಾನ್‌ಬುಲ್‌ ಮೊದಲ ಬಾರಿ ರಾಜಧಾನಿಯ ಪಟ್ಟ ಕಳೆದುಕೊಂಡು ಬಿಡುತ್ತದೆ. ಆದರೆ, ಜಾಗತಿಕ ವ್ಯಾಪಾರ-ವಹಿವಾಟಿನಲ್ಲಿ ಇಸ್ತಾನ್‌ಬುಲ್‌ ಪ್ರಾಮುಖ್ಯ ಇಪ್ಪತ್ತೂಂದನೇ ಶತಮಾನದಲ್ಲೂ ಕುಂದಿಲ್ಲ.

ಇಸ್ತಾನ್‌ಬುಲ್‌ ಆಳಿದ ಒಬ್ಬೊಬ್ಬ ಚಕ್ರವರ್ತಿ ಅಥವಾ ಸುಲ್ತಾನ ಒಂದೊಂದು ಮಸೀದಿ ಅಥವಾ ಇಗರ್ಜಿ ಕಟ್ಟಿಸಿದ, ಒಂದೊಂದು ಸಮಾಧಿಗೆ ಜಾಗ ಮಾಡಿಕೊಂಡ. ಹಾಗಾಗಿ, ಇವತ್ತು ಇಸ್ತಾನ್‌ಬುಲ್‌ನಲ್ಲೇ ಸುಮಾರು 3600 ಮಸೀದಿಗಳಿವೆ, ನೂರಕ್ಕೂ ಹೆಚ್ಚು ಇಗರ್ಜಿಗಳಿವೆ. ಕೆಲ ಮಸೀದಿಗಳು ಸಾಮಾನ್ಯವಾದರೆ (ಇಂತಹವು ಬೆರಳೆಣಿಕೆಯಷ್ಟು) ಕೆಲ ಮಸೀದಿಗಳು ಭವ್ಯವಾದುವು, ಬದುಕಿನಲ್ಲಿ ಒಮ್ಮೆಯಾದರೂ ನೋಡಲೇಬೇಕು, ಅಥವಾ ನಾನು ಒಮ್ಮೆಯಾದರೂ ಅಲ್ಲಿ ಮಂಡಿಯೂರಿ ಪ್ರಾರ್ಥಿಸ ಬೇಕು ಎಂದು ಬಯಸುವಂತಹವು. ಅಂತಹ ಒಂದು ಮಸೀದಿ ಸುಲ್ತಾನಹ್ಮತ್‌ ಮಸೀದಿ ಅಥವಾ ಇಂಗ್ಲಿಶ್‌ನಲ್ಲಿ ಕರೆಯುವುದಾದರೆ ಬ್ಲೂ ಮಾಸ್ಕ್. 

Advertisement

3 ಫ‌ತೀಹ್‌ ಚರಿತ್ರೆಯ ಗತ ವೈಭವವನ್ನು, ಚರಿತ್ರೆಯ ಕುರುಹುಗಳನ್ನು, ಯುದ್ಧದ ಗಾಯಗಳನ್ನು, ಸಾವಿನ ನೆನಪುಗಳನ್ನು, ದಂಗೆಯ ರಕ್ತದ ಕಲೆಗಳನ್ನು ತುಂಬಿಕೊಂಡ ಇಸ್ತಾನ್‌ಬುಲ್‌ನ ಒಂದು ಪುಟ್ಟ ಮುನಿಸಿಪಾಲಿಟಿ. ಇಸ್ತಾನ್‌ಬುಲ್‌ ನೋಡಲು ನೀವು ಬಂದಿದ್ದಿರಾದರೆ, ನೀವು ಮೊದಲು ಬಂದಿಳಿಯುವುದೇ ಇಲ್ಲಿ. ಯಾವುದೇ ಟೂರಿಸ್ಟ್‌ ಗೈಡ್‌ ನಿಮ್ಮನ್ನು ತಂದು ನಿಲ್ಲಿಸುವುದೇ ಇಲ್ಲಿನ ದೊಡ್ಡ ಹಿಪ್ಪೊಡ್ರೋಮ್‌ ಬಯಲಿನಲ್ಲಿ. ಟರ್ಕಿ ಭಾಷೆಯಲ್ಲಿ ಇದನ್ನು ಸುಲ್ತಾನ್‌ ಅಹೆ¾ತ್‌ ಮೈದಾನಿ ಎನ್ನುತ್ತಾರೆ. ಮೊದಲು ಆಟಪಾಟಗಳಿಗೆ ಮೀಸಲಾಗಿದ್ದ ಈ ಸ್ಟೇಡಿಯಮ್‌ಅನ್ನು ರಥಗಳ ರೇಸಿಗೆ ಸಿದ್ಧಮಾಡಲು (ಬೆನ್‌ಹರ್‌ ಚಿತ್ರದ  ಕೊನೆಯಲ್ಲಿ ಇಂಥ ಒಂದು ರಥದ ರೇಸಿದೆ) ಇದರ ಉದ್ದಗಲ ಎಳೆದವನು ಕಾನ್‌ಸ್ಟಾಂಟಿನ್‌. ಈಗಲೂ ರಥಗಳು ಓಡುತ್ತಿದ್ದ ದಾರಿಯನ್ನು ತೋರಿಸುತ್ತಾರೆ. ಇಲ್ಲೊಂದು ಒಬಿಲಿಸ್ಕ್ ಇದೆ. ಐನೂರು ಟನ್ನುಗಳಷ್ಟು ಭಾರದ ಈ ಏಕಶಿಲೆಯನ್ನು ನಿಲ್ಲಿಸಿದ್ದೇ ಒಂದು ಸಾಹಸಗಾಥೆ. ಮರ್‌ಮರಾ ವಿಶ್ವವಿದ್ಯಾಲಯವನ್ನು ಬೆನ್ನಿಗೆ ಹಾಕಿಕೊಂಡು ಒಬಿಲಿಸ್ಕ್ ಮುಂದೆ ನಿಂತಲ್ಲಿ ಎದುರಿಗೆ ಮರಗಳ ಮರೆಯಲ್ಲಿ ಕಾಣುವುದು ಹೈಯಾ ಸೊಫಿಯಾ. ಬಲಕ್ಕಿರುವುದೇ ಎತ್ತರದ ಗೋಡೆಗಳ ಹಿಂದೆ ಹರಡಿ ನಿಂತ ಸುಲ್ತಾನಹ್ಮತ್‌ ಮಸೀದಿ. ನೀವು ಈ ಗೋಡೆಗಳ ಸಮೀಪ ನಿಂತಿರುವುದರಿಂದ ನಿಮಗೆ ಮಸೀದಿಯ ಗುಂಬಝ್ ಮತ್ತು ಮಿನಾರುಗಳ ಅರ್ಧ ಎತ್ತರ ಮಾತ್ರ ಕಾಣುತ್ತಿದೆ. ಈ ಮಸೀದಿಗೆ ಭವ್ಯತೆಯಲ್ಲಿ ಪೈಪೋಟಿಗೆ ನಿಂತಂತಹ ಮೂರು ಪ್ರವೇಶಗಳಿದ್ದರೂ ಈಗ ಪ್ರವೇಶವಿರುವುದು ಈ ದ್ವಾರದಿಂದ ಮಾತ್ರ. ಮೆಟ್ಟಿಲುಗಳನ್ನು ಹತ್ತಿ ಅಂಗಳಕ್ಕೆ ಕಾಲಿಟ್ಟಿರೋ, ಬೆಪ್ಪಾಗಿಬಿಡುತ್ತೀರಿ. ಭವ್ಯತೆಗೆ ಶರಣಾಗಿಬಿಡುತ್ತೀರಿ. 

ಈ ಮಸೀದಿಯ ಭವ್ಯತೆಯನ್ನು ನೋಡಿಯೇ ಅನುಭವಿಸ ಬೇಕು. ಯಾವುದೇ ಪದಗಳಿಗೆ ದಕ್ಕುವಂತಹುದಲ್ಲ ಅದು. ಅಳತೆಗಳಲ್ಲಿ ವಿವರಿಸುವುದಾದಲ್ಲಿ ಕ್ರಿಕೆಟ್‌ ಸ್ಟೇಡಿಯಮ್‌ ಕೂಡಾ ಭವ್ಯವಾಗಿಬಿಡುತ್ತದೆ. ಇಪ್ಪತ್ತು ಸಾವಿರ ಮಂದಿ ಏಕಕಾಲಕ್ಕೆ ಕುಳಿತು ಪ್ರಾರ್ಥನೆ ಮಾಡಬಹುದಿಲ್ಲಿ ಎಂದರೂ ಅದರ ವಿಸ್ತಾರ ಮತ್ತು ಘನತೆ ಅರಿವಿಗೆ ದಕ್ಕುವುದಿಲ್ಲ. ಇದಕ್ಕೆ ಬ್ಲೂಮಾಸ್ಕ್ ಅಂತ ಯಾಕೆ ಕರೆಯುತ್ತಾರೆ ಎನ್ನುವುದು ನೀವು ಈ ಮಸೀದಿಯನ್ನು ಹೊರಗಿನಿಂದ ನೋಡಿದಲ್ಲಿ ಅರ್ಥವಾಗುವುದಿಲ್ಲ. ಮಸೀದಿಯ ಹೊರಾಂಗಣದಲ್ಲಿ ಒಂದಿಂಚೂ ನೀಲಿ ಕಾಣುವುದಿಲ್ಲ. ಆದರೆ, ಒಳಗೆ ಕಾಲಿಟ್ಟಿರೋ ಬೇರೊಂದು ಜಗತ್ತನ್ನು ಪ್ರವೇಶಿಸಿದಂತೆ. ಇಡೀ ಒಳಾಂಗಣವನ್ನು ಆವರಿಸಿದ ಅದೊಂದು ರೀತಿಯ ದಿವ್ಯ ಮೌನ, ತಲೆಯೆತ್ತಿ ನೋಡಿದಲ್ಲಿ ಕೈಯಲ್ಲೇ ಮಾಡಿದ ಇಪ್ಪತ್ತೂಂದು ಸಾವಿರಕ್ಕೂ ಹೆಚ್ಚಿನ ನೀಲಿ ಸೆರಾಮಿಕ್‌ ತುಂಡುಗಳು ಮೆರೆವ ಸೌಂದರ್ಯ, ಎತ್ತರದ ಕಿಬ್ಲಾ, ನೆಲಕ್ಕೆ ಹಾಸಿದ ಕೆಂಪು ರತ್ನಗಂಬಳಿ…ಮಸೀದಿಯ ಇನ್ನೂರಾ ಅರವತ್ತನಾಲ್ಕು ಕಿಟಿಕಿಗಳನ್ನು ತೆಗೆದಾಗ ಹರಡಿಕೊಳ್ಳುವ ಬೆಳಕಿನಲ್ಲಿ ಕಾಣುವುದು ಒಂದು ದಿವ್ಯ ಸೌಂದರ್ಯ, ಮನುಷ್ಯನ ಕುಸುರಿ ಕೆಲಸಕ್ಕೆ ಉದಾಹರಣೆಯಾಗಿ ನಿಂತ ಜಗತ್ತಿನ ಒಂದು ಅಚ್ಚರಿ.

ನೀವು ಹಿಪೋಡ್ರಮ್‌ ಬಯಲಲ್ಲಿ ಕಾಲಿಟ್ಟಲ್ಲಿ ಎದ್ದು ಕಾಣುವುದೇ ಎರಡು ಆಗಾಧವಾದ ಸ್ಮಾರಕಗಳು – ಎದುರಿಗೆ (ನೀವು ಒಬಿಲಿಸ್ಕ್ ಎದುರು ನಿಂತಿದ್ದಲ್ಲಿ) ಹೈಯಾ ಸೋಫಿಯಾ, (ಈ ಹೈಯಾ ಸೋಫಿಯಾಗೆ ಪೈಪೋಟಿಯಾಗಿ ನಿಲ್ಲಬಲ್ಲ ಮಸೀದಿ ಕಟ್ಟಿಸುವ ಉದ್ದೇಶದಿಂದಲೇ ಸುಲ್ತಾನಹೆತ್‌ ಮಸೀದಿ ತಲೆಯೆತ್ತಿ ನಿಂತಿದ್ದು) ಬಲಕ್ಕೆ  ಬ್ಲೂಮಾಸ್ಕ್. ಈ ಮಸೀದಿಗೆ ಭವ್ಯತೆಯಲ್ಲಿ ಒಂದನ್ನೊಂದು ಮೀರಿಸುವ ಮೂರು ಪ್ರವೇಶ ದ್ವಾರಗಳಿವೆ. ಆದರೂ ಈಗ ಪ್ರವೇಶವಿರುವುದು ಹಿಪೋಡ್ರಮ್‌ ಕಡೆಯಿಂದ. 

  ಸುಲ್ತಾನ್‌ ಅಹ್ಮತ್‌ ಕಟ್ಟಿಸಿದ ಜಗತ್ತಿನ ಅತ್ಯಂತ ಭವ್ಯವಾದ ಮತ್ತು ಅತಿ ಪ್ರಮುಖವಾದ ಮಸೀದಿ ಇದು. ಅಳತೆಗೂ ಪ್ರಾಮುಖ್ಯತೆಗೂ ಸಂಬಂಧವಿಲ್ಲ. ದೊಡ್ಡ ಮಸೀದಿಯಾದಲ್ಲಿ ಅದು ಪ್ರಮುಖವಾಗಿರಲೇ ಬೇಕೆಂದಿಲ್ಲ. ಒಂದು ಮಸೀದಿಯ ಪ್ರಾಮುಖ್ಯವನ್ನು ಅಳೆಯುವುದು ಅದರ ಸುತ್ತ ಆಕಾಶವನ್ನು ಚುಚ್ಚಿ ನಿಂತ ಮಿನಾರುಗಳಲ್ಲಿ. ಸಾಮಾನ್ಯವಾಗಿ ನಾವು ನೋಡುವ ಮಸೀದಿಗಳಿಗೆ ಒಂದು, ಎರಡು ಅಥವಾ ಹೆಚ್ಚೆಂದರೆ ನಾಲ್ಕು ಮಿನಾರುಗಳಿರುತ್ತವೆ. ಸುಲ್ತಾನಹ್ಮತ್‌ ಮಸೀದಿಗೆ ಆರು ಮಿನಾರುಗಳಿವೆ. ಜಗತ್ತಿನ ಕೆಲವೇ ಮಸೀದಿಗಳಿಗೆ ಆರು ಮಿನಾರುಗಳ ಭವ್ಯತೆಯಿದೆ. ಇದಕ್ಕೂ ಒಂದು ಕತೆಯಿದೆ. ಸುಲ್ತಾನ್‌ ಅಹ್ಮತ್‌ ಈ ಮಸೀದಿಯನ್ನು ಕಟ್ಟಿಸಿದಾಗ ಆತ ಈ ಮಸೀದಿಯನ್ನು ರಚಿಸಿ, ನಿರ್ಮಿಸಿದ ವಾಸ್ತುಶಿಲ್ಪಿಗೆ ಸೆದೆಫ‌ರ್‌ ಮೆಹೆ¾ದ್‌ ಆಗಾಗೆ ಹೇಳಿದನಂತೆ- ಬಂಗಾರದ (ಟರ್ಕಿ ಭಾಷೆಯಲ್ಲಿ ಅಲ್ಟಿನ್‌) ಮಿನಾರುಗಳನ್ನು ಕಟ್ಟು ಅಂತ. ಆಗ ಕೇಳಿಸಿಕೊಂಡಿದ್ದೇ ಬೇರೆ, ಆರು (ಅಲ್ಟಿ) ಮಿನಾರುಗಳನ್ನು ಕಟ್ಟು. ಅಲ್ಲಿಗೆ ಆಗ ಆರು ಮಿನಾರುಗಳನ್ನು ಕಟ್ಟಿದ. ಇದೊಂದು ವಿವಾದಕ್ಕೆ ಕಾರಣವಾಯಿತು. ಪವಿತ್ರ ಮೆಕ್ಕಾದ ಹಾರೆಮ್‌ ಮಸೀದಿಗೆ ಮಾತ್ರ ಆರು ಮಿನಾರುಗಳಿದ್ದವು. ಇದನ್ನು ಮೀರುವ ಹಕ್ಕು ಯಾರಿಗೂ ಇಲ್ಲ, ಸುಲ್ತಾನ್‌ ಆಹ್ಮತ್‌ಗೂ ಇಲ್ಲ. ಕೊನೆಗೆ ಸುಲ್ತಾನನೇ ಹಾರೆಮ್‌ ಮಸೀದಿಗೆ ಇನ್ನೊಂದು ಮಿನಾರನ್ನು ಕಟ್ಟಿಸಿಕೊಟ್ಟನಂತೆ. ಹಾಗಾಗಿ, ಏಳು ಮಿನಾರುಗಳಿರುವ ಜಗತ್ತಿನ ಏಕೈಕ ಮಸೀದಿಯೆಂದರೆ ಪವಿತ್ರ ಮೆಕ್ಕಾದ ಹಾರೆಮ್‌ ಮಾಸ್ಕ್. ಇಸ್ತಾನ್‌ಬುಲ್‌ನ ಸುಲ್ತಾನಹೆತ್‌ ಮಸೀದಿಯ ಜೊತೆ ಜೊತೆಯಲ್ಲೇ ಟರ್ಕಿ ದೇಶದಲ್ಲಿ ಇನ್ನೆರಡು ಆರು ಮಿನಾರುಗಳ ಮಸೀದಿಗಳಿ¨ªಾವೆ. ಇಸ್ತಾನ್‌ಬುಲ್‌ನಲ್ಲೇ ಇರುವ ಸುಲೇಮಾನಿಯೇ ಮಸೀದಿ ಗಾತ್ರದಲ್ಲಿ ಸುಲ್ತಾನಹೆ¾ತ್‌ ಮಸೀದಿಗಿಂತ ದೊಡ್ಡದಿದ್ದಲ್ಲಿ ಇದಕ್ಕಿರುವುದು ನಾಲ್ಕೇ ಮಿನಾರುಗಳು. 

ಎಸ್‌. ಸುರೇಂದ್ರನಾಥ್‌

Advertisement

Udayavani is now on Telegram. Click here to join our channel and stay updated with the latest news.

Next