ಮಂಗಳೂರು: ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನದ ಈ ಸಂದರ್ಭದಲ್ಲಿ ನಾವು ಸ್ವಾಂತಂತ್ರ್ಯ ಸಂಗ್ರಾಮ ಕಾಲಘಟ್ಟದ ಐತಿಹಾಸಿಕ ಘಟನೆಗಳನ್ನು ಸ್ಮರಿಸಿ ಅದರಿಂದ ಸ್ಫೂರ್ತಿ ಪಡೆಯಬೇಕು ಎಂದು ಮೀನುಗಾರಿಕೆ, ಬಂದರು ಖಾತೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬುಧವಾರ ದ.ಕ. ಜಿಲ್ಲಾಡ ಳಿತ, ಜಿ.ಪಂ., ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಕಸಾಪ, ಭಾರತ್ ಸೇವಾ ದಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದ ಗಾಂಧಿ ಪಾರ್ಕ್‌ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಚಿವರು, ದ.ಕ. ಜಿಲ್ಲೆಗೆ ಗಾಂಧೀಜಿ 3 ಬಾರಿ ಭೇಟಿ ನೀಡಿದ್ದರು. ಸತ್ಯ, ಅಹಿಂಸೆ, ಸ್ವಚ್ಛತೆ, ಸ್ವಾಂತಂತ್ರ್ಯದ ಕುರಿತು ಮಾತನಾಡಿದ್ದರು. ಅವರ ಆದರ್ಶಗಳನ್ನು ಯುವಜನರು ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.
“ಪಾಪು ಬಾಪು’ ಪುಸ್ತಕ ಬಿಡುಗಡೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದ ಮಹಾತ್ಮಾ ಗಾಂಧಿ ಅವರ ಜೀವನ ಮತ್ತು ವಿಚಾರ ಧಾರೆಗೆ ಸಂಬಂಧಿಸಿದ “ಪಾಪು ಬಾಪು’ ಎಂಬ ಕಿರು ಪುಸ್ತಕವನ್ನು (ಲೇಖಕ: ಬೊಳುವಾರು ಮಹಮದ್ ಕುಂಞಿ) ಶಾಸಕ ಡಿ. ವೇದವ್ಯಾಸ ಕಾಮತ್ ಬಿಡುಗಡೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಪೊಲೀಸ್ ಕಮಿಷನರ್ ಡಾ| ಹರ್ಷ ಪಿ.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ತಹಶೀಲ್ದಾರ್ ಗುರುಪ್ರಸಾದ್, ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಪ್ರಧಾನ ಕಾರ್ಯದರ್ಶಿ ಟಿ.ಕೆ. ಸುಧೀರ್, ವಿ.ವಿ. ಫ್ರಾನ್ಸಿಸ್, ಮಂಜೇ ಗೌಡ ಉಪಸ್ಥಿತರಿದ್ದರು.
ಪ್ರದೀಪ ಕುಮಾರ್ ಕಲ್ಕೂರ ಪ್ರಸ್ತಾವನೆಗೈದರು. ಪ್ರಾರಂಭದಲ್ಲಿ ಬಲ್ಮಠ ಸರಕಾರಿ ಪ.ಪೂ. ಕಾಲೇಜು ಆವರಣದಿಂದ ಪುರಭವನದ ತನಕ ಪ್ರಭಾತ ಪೇರಿ ನಡೆಯಿತು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.