Advertisement

ಭರ್ತಿ ಹಂತಕ್ಕೆ ಐತಿಹಾಸಿಕ ಧರ್ಮಪುರ ಕೆರೆ

03:55 PM Oct 16, 2022 | Team Udayavani |

ಧರ್ಮಪುರ: ಕಳೆದ ನಾಲ್ಕು ದಿನಗಳಿಂದ ಶಿರಾ ತಾಲೂಕು ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿರುವುದರಿಂದ ಲಕ್ಕನಹಳ್ಳಿ ಬಳಿಯ ದೊಡ್ಡ ಹಳ್ಳ ಮೈತುಂಬಿ ಹರಿಯುತ್ತಿರುವುದರಿಂದ ನಲವತ್ತು ವರ್ಷಗಳ ಬಳಿಕ ಐತಿಹಾಸಿಕ ಧರ್ಮಪುರ ಕೆರೆ ತುಂಬುವ ಹಂತಕ್ಕೆ ತಲುಪಿದೆ.

Advertisement

ಐತಿಹಾಸಿಕ ಪುರಾ ಪ್ರಸಿದ್ಧ ಧರ್ಮಪುರ ಕೆರೆ 1982ರಲ್ಲಿ ತುಂಬಿ ಕೋಡಿ ಹರಿದಿತ್ತು. ಸತತವಾಗಿ ಎರಡು ತಿಂಗಳು ಕೋಡಿ ಹರಿದಿತ್ತು. ಕೆರೆ ಒಡೆಯಬಹುದೆಂದು ಕೆಳ ಭಾಗದ ಜನರು ಅರಳೀಕೆರೆ ಗ್ರಾಮಸ್ಥರು ಗ್ರಾಮವನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಹಲಗಲದ್ದಿ, ಅರಳ್ಳಿಕೆರೆ, ಮದ್ದಿಹಳ್ಳಿ, ಪಿ.ಡಿ. ಕೋಟೆ, ಗ್ರಾಮದ ವಿದ್ಯಾರ್ಥಿಗಳು ಸುಮಾರು ತಿಂಗಳುಗಟ್ಟಲೇ ಶಾಲಾ-ಕಾಲೇಜಿಗೆ ಹೋಗಿರಲಿಲ್ಲ. ನಂತರ ಐತಿಹಾಸಿಕ ಧರ್ಮಪುರ ಕೆರೆಗೆ ನೀರು ಬಾರದೇ ಇಲ್ಲಿನ ಜನರು ಪರಿತಪ್ಪಿಸುವಂತಾಗಿತ್ತು. ಸಾವಿರ ಅಡಿ ಅಡಿವರೆಗೂ ಕೊಳವೆಬಾವಿ ಕೊರೆಸಿಯಿದರೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದ್ದರಿಂದ ಹೋಬಳಿಯ ಜನ ಬಹುತೇಕ ಜೀವನೋಪಾಯಕ್ಕೆ ಬೆಂಗಳೂರು ಮತ್ತಿತತರ ಕಡೆ ಗುಳೆ ಹೋಗಿದ್ದು ಈಗ ಇತಿಹಾಸ.

ಕಳೆದ ನಾಲ್ಕೈದು ತಿಂಗಳಿಂದ ಹೋಬಳಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಬಹುತೇಕ ಕೆರೆಗಳು ಭರ್ತಿಯಗಿ ಕೋಡಿ ಬಿದ್ದಿವೆ. ಬೇತೂರು ಕೆರೆ, ಮದ್ದೀಹಳ್ಳಿ ಕೆರೆ, ಹಲಗಲದ್ದಿ ಕೆರೆ, ಈಶ್ವರಗೆರೆ ಕೆರೆ, ಅರಳ್ಳೇಕೆರೆ ಕೆರೆ, ಶ್ರವಣಗೆರೆ ಕೆರೆ, ಸಕ್ಕರದ ಕೆರೆ, ಖಂಡೇನಹಳ್ಳಿ ಕೆರೆ, ಹರಿಯಾಬ್ಬೆ ಗೋಕಟ್ಟೆ, ಹಳ್ಳಗಳು ಮೈತುಂಬಿ ಹರಿಯುತ್ತಿವೆ. ಹೋಬಳಿಯ ಅತೀ ದೊಡ್ಡಕೆರೆ ಎನಿಸಿಕೊಡಿರುವ ಧರ್ಮಪುರ ಕೆರೆ ಭರ್ತಿ ಹಂತ ತಲುಪಿದ್ದು, ಕೋಡಿ ಹರಿಯುವುದು ನೋಡಲು ಜನರು ಕಾತುರರಾಗಿದ್ದಾರೆ.

ಮಂಗಳವಾರದಿಂದ ನೆರೆಯ ಶಿರಾ ತಾಲೂಕು ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನಲ್ಲಿ ಉತ್ತಮ ಮಳೆಯಗಿದ್ದು, ಕೆಂಕೆರೆ, ಹೇಮಾವತಿ, ಶಿವರ ಕೆರೆ, ದೊಡ್ಡ ಬಾಣಗೆರೆ, ಚಿಕ್ಕ ಬಾಣಗೆರೆ, ಬರಗೂರು, ದಾಸರಹಳ್ಳಿ, ಮೋರಬಾಗಿಲು ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಈ ಎಲ್ಲ ಕೆರೆಯ ನೀರು ಮತ್ತು ಆಂಧ್ರ ಪ್ರದೇಶದ ರತ್ನಗಿರಿ ಬೆಟ್ಟದಿಂದಲೂ ನೀರು ಲಕ್ಕನಹಳ್ಳಿ ದೊಡ್ಡ ಹಳ್ಳದ ಮೂಲಕ ಧರ್ಮಪುರ ಕೆರೆ ಸೇರುತ್ತಿದೆ. ಇದರಿಂದ ಧರ್ಮಪುರ ಕೆರೆ ಭರ್ತಿಯಾಗಿ ಕೋಡಿ ಹರಿಯಬಹುದು ಎಂಬುದು ಸದ್ಯದ ಲೆಕ್ಕಾಚಾರ.

ನಲವತ್ತು ವರ್ಷಗಳ ಬಳಿಕ ಕೆರೆಗೆ ನೀರು ಹರಿದು ಬರುತ್ತಿರುವುದನ್ನೂ ಕಣ್ತುಂಬಿಕೊಳ್ಳಲು ಜನ ದೊಡ್ಡ ಹಳ್ಳ ಮತ್ತು ಧರ್ಮಪುರ ಕೆರೆ ಬಳಿ ಜನ ಜಮಾಯಿಸುತ್ತಿದ್ದಾರೆ. “ಅಂದು ಅಷ್ಟು ಮಳೆ ಬಿದ್ದಿತ್ತು, ಈಗ ಇಷ್ಟು ಮಳೆ ಬಂದಿದೆ. ಧರ್ಮಪುರ ಕೆರೆ ತುಂಬುವುದು ನಿಶ್ಚಿತ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಎಚ್‌. ಎಂ.ಅಪ್ಪಾಜಿ ಗೌಡ ಹೇಳಿದರು.

Advertisement

ಅಂತರ್ಜಲ ವೃದ್ಧಿ

ಐತಿಹಾಸಿಕ ಧರ್ಮಪುರ ಕೆರೆ 0.3 ಟಿಎಂಸಿ ಅಡಿ ನೀರಿನ ಸಾಮಥ್ಯ ಹೊಂದಿದೆ. ಕೆರೆ ಅಂಗಳದ ವಿಸ್ತೀರ್ಣ 700 ಹೆಕ್ಟರ್‌, ಏರಿ ಉದ್ದ 1,65 ಕಿ.ಮೀ. ಇದೆ. ಸುಮಾರು 500 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕೆರೆಗೆ ನೀರು ಸಂಗ್ರಹವಾದರೆ 30 ಕಿ.ಮೀ ದೂರದವರೆಗೂ ನೀರಿನ ಅಂತರ್ಜಲ ವೃದ್ಧಿಯಾಗಲಿದೆ.

ಧರ್ಮಪುರ ಕೆರೆಗೆ ಅಪಾರ ನೀರು ಬರುತ್ತಿದ್ದು, ಕೆರೆಯ ಕೋಡಿ ಬೀಳುವ ಎರಡು ಅಡಿ ಬಾಕಿ ಇದೆ. ಇನ್ನೂ ಆಂಧ್ರ ಪ್ರದೇಶದ ಹತ್ತು ಕೆರೆಗಳು ಕೋಡಿ ಬಿದ್ದು ನೀರು ಧರ್ಮಪುರ ಕೆರೆ ಸೇರುತ್ತಿದೆ. ಧರ್ಮಪುರಕೆರೆಯ ಕೋಡಿ ಬಳಿ ಕೆಲವು ಮನೆ ಮತ್ತು ವಾಣಿಜ್ಯ ಮಳಿಗೆಗಳು ನಿರ್ಮಿಸಲಾಗಿದೆ. ನೀರು ಬಂದರೆ ಅಪಾಯ ಎದುರಾಗುವ ಸ್ಥಿತಿಯಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದರ ಗಮನ ಹರಿಸಬೇಕು.  -ಶ್ರವಣಗೆರೆ ಎಂ.ಶಿವಣ್ಣ, ಅಧ್ಯಕ್ಷರು, ಧರ್ಮಪುರ ಫೀಡರ್‌ ಚನಲ್‌ ಹೋರಾಟ ಸಮಿತಿ.

ಧರ್ಮಪುರ ಕೆರೆಗೆ ನೀರು ಬರುತ್ತಿರುವುದರಿಂದ ಈ ಭಾಗದ ಜನರಿಗೆ ತುಂಬ ಸಂತೋಷವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ ಕೋಡಿ ಬೀಳಬಹುದು. ಜನರು ಮುನ್ನಚ್ಚರಿಕೆಯಿಂದ ಇರಬೇಕು. ಧರ್ಮಪುರ ಕೆರೆಯ ಕೋಡಿ ಪಕ್ಕದಲ್ಲೇ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿ ಪಕ್ಕದ ಇರುವ ಮನೆ ತೆರವುಗೊಳಿಸಿ ಗ್ರಾಮ ಉಳಿಸಬೇಕು.  –ಟಿ.ರಂಗಸ್ವಾಮಿ, ಜೆಡಿಎಸ್‌ ಮುಖಂಡ

ಧರ್ಮಪುರ ಕೆರೆ ತುಂಬಿದರೇ 30 ಕಿ.ಮೀ ದೂರದ ಅಕ್ಕ ಪಕ್ಕ ಅಂರ್ತಜಲ ವೃದ್ಧಿಸುತ್ತದೆ. ಈ ಭಾಗದ ಜನರಿಗೆ ವರುಣ ದೇವರು ಕರುಣಿಸಿದ್ದಾನೆ. ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಕೋಡಿ ಬೀಳುವ ಸಾಧ್ಯತೆ ಹೆಚ್ಚಿದೆ. ಕೋಡಿಯ ಪಕ್ಕದಲ್ಲಿ ಮನೆಗಳನ್ನು ತೆರವುಗೊಳಿಸಿ ಗ್ರಾಮ ಉಳಿಸಬೇಕು. –ಲಕ್ಷ್ಮೀದೇವಿ, ಗ್ರಾಪಂ ಹಾಲಿ ಸದಸ್ಯೆ -ಎಂ.ಬಸೇಗೌಡ

Advertisement

Udayavani is now on Telegram. Click here to join our channel and stay updated with the latest news.

Next