Advertisement

ಜವಾರಿ ಕಿ ಸವಾರಿ

10:15 AM Feb 07, 2020 | mahesh |

ಪ್ರಾಚೀನ ಕಾಲದಲ್ಲಿ “ಕಲ್ಲಂಬರಿಗೆ’ ಎಂದು ಕರೆಯಲ್ಪಡುತ್ತಿದ್ದ ನಗರ ಮುಂದೆ “ಗುಲಬರ್ಗಾ’ ಆಗಿ, ಇಂದು “ಕಲಬುರಗಿ’ ಅಗಿದೆ. ರಾಷ್ಟ್ರಕೂಟರು, ಚಾಲುಕ್ಯರು, ಸುಲ್ತಾನರು ಆಳಿದ ಈ ನೆಲ ಶರಣರು, ಕವಿ ಸಂತರು, ಪುಣ್ಯಪುರುಷರು ನಡೆದಾಡಿದ ನೆಲವೂ ಹೌದು. ಕೋಟೆ, ಮಂದಿರ, ಮಸೀದಿ, ಮಿನಾರಗಳು ಹಾಗೂ ಸ್ಮಾರಕಗಳು ಅಪಾರ ಸಂಖ್ಯೆಯಲ್ಲಿವೆ. ಅವುಗಳಲ್ಲಿ ಕೆಲವನ್ನು ಆರಿಸಿ ಇಲ್ಲಿ ನೀಡಿದ್ದೇವೆ. ಅಲ್ಲದೆ ಸಮ್ಮೇಳನ ನಡೆಯುವ ಸ್ಥಳದಿಂದ ಈ ತಾಣಗಳು ಎಷ್ಟು ದೂರದಲ್ಲಿದೆ ಎಂಬುದನ್ನೂ ನೀಡಿದ್ದೇವೆ. ಸಮ್ಮೇಳನದ ನೆಪದಲ್ಲಿ ಈ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡುವುದನ್ನು ಮರೆಯದಿರಿ.

Advertisement

1. ಬಹಮನಿ ಕೋಟೆ
ಕಲಬುರಗಿ ನಗರಕ್ಕೆ ಬಂದ ತಕ್ಷಣ ಕಣ್ಣಿಗೆ ಬೀಳುವ ಕೋಟೆಯಿದು. ಬಹಮನಿ ಸುಲ್ತಾನರ ರಾಜಧಾನಿ ಇದೇ ಆಗಿತ್ತು. ಮೂಲ ಕೋಟೆಯನ್ನು ವಾರಂಗಲ್ಲಿನ ಕಾಕತೀಯರ ಸಾಮಂತನಾದ ರಾಜಾ ಗುಲಚಂದ ಕಟ್ಟಿಸಿದನೆಂದೂ, ಮುಂದೆ ಬಹಮನಿ ಸುಲ್ತಾನ ಅಲ್ಲಾವುದ್ದೀನ್‌ ಹಸನ್‌ ಬಹಮನಿ ಷಾ ಅದನ್ನು ಬಲಪಡಿಸಿದ ಎಂಬುದಾಗಿಯೂ ಇತಿಹಾಸದಿಂದ ತಿಳಿದು ಬರುತ್ತದೆ. ಕೋಟೆಯ ಒಳಗಡೆ ಇರುವ ರಣಮಂಡಲದಲ್ಲಿ ಅರಮನೆಗೆ ಸಂಬಂಧಿಸಿದ ಅವಶೇಷಗಳು, ಹಿಂದೂ ದೇವಾಲಯ, ಮದ್ದು ಗುಂಡುಗಳ ಸಂಗ್ರಹವಿದೆ.
ದೂರ: 6.4 ಕಿ.ಮೀ 15 ನಿಮಿಷ
ರಿಕ್ಷಾ, ಕಾರು, ಬೈಕು

2. ಜಾಮಾ ಮಸೀದಿ
ಕಲಬುರಗಿ ಕೋಟೆಯ ಮಧ್ಯಭಾಗದಲ್ಲಿಯೇ ಇರುವ ಜಾಮಾ ಮಸೀದಿ ಏಷ್ಯಾದಲ್ಲೇ ದೊಡ್ಡದೆಂದು ಹೇಳಲಾಗುತ್ತದೆ. ಅದು, ಏಕಕಾಲಕ್ಕೆ 5 ಸಾವಿರ ಜನರು ಪ್ರಾರ್ಥನೆ ಮಾಡುವಷ್ಟು ಸ್ಥಳಾವಕಾಶ ಹೊಂದಿದೆ. 1367ರಲ್ಲಿ ಅದರ ನಿರ್ಮಾಣವಾಗಿದೆ. ಮಸೀದಿ ಒಳಭಾಗದಲ್ಲಿ 115 ಕಂಬಗಳು, 250 ವಿವಿಧ ಕಮಾನುಗಳಿವೆ. ಪ್ರಾರ್ಥನೆ ಸ್ಥಳದ ಗುಮ್ಮಟವು ಅತ್ಯಂತ ಸುಂದರವಾಗಿದೆ.
ದೂರ: 6.5 ಕಿ.ಮೀ 15 ನಿಮಿಷ
ರಿಕ್ಷಾ, ಕಾರು, ಬೈಕು

3. ಅಲ್ಲಾವುದ್ದೀನ್‌ ಹಸನಗಂಗೂ ಗೋರಿ
ಬಹಮನಿ ರಾಜ್ಯದ ಸ್ಥಾಪಕನಾದ ಅಲ್ಲಾವುದ್ದೀನ್‌ ಹಸನ ಗಂಗೂ ಬಹಮನ್‌ ಷಾನ ಗೋರಿ ಇದು. 1358ರಲ್ಲಿ ನಿಧನ ಹೊಂದಿದ್ದು, ಆತನ ಆಸೆಯಂತೆ ಆತನೇ ನಿರ್ಮಿಸಿದ ಕಟ್ಟಡದಲ್ಲಿ ಸಮಾಧಿ ಮಾಡಲಾಯಿತು.
ಕೋಟೆಯ ಪಶ್ಚಿಮ ಭಾಗದಲ್ಲಿ, ಇಂದಿನ ಕೈಲಾಸನಗರದಲ್ಲಿ ಈತನ ಸಮಾಧಿ ಇದೆ. 6 ಅಡಿ ಎತ್ತರದ ವೇದಿಕೆ ಮೇಲೆ ನಿರ್ಮಿಸಿರುವ ಈ ಗೋರಿಯು ತುಘಲಕ್‌ ಶೈಲಿಯಲ್ಲಿದೆ.
ದೂರ: 7.5 ಕಿ.ಮೀ. 19 ನಿಮಿಷ
ರಿಕ್ಷಾ, ಕಾರು, ಬೈಕು


4. ಚೋರ್‌ಗುಂಬಜ್‌
ಕಲಬುರಗಿ ನಗರದ ಪಶ್ಚಿಮ ಭಾಗದಲ್ಲಿ ಎತ್ತರವಾದ ಪ್ರದೇಶದಲ್ಲಿದೆ ಚೌಕಾಕಾರದ ಕೋಟೆ ಚೋರಗುಂಬಜ್‌. ಖ್ವಾಜಾ ಬಂದೇನವಾಜ್‌ರಿಗಾಗಿ ಒಬ್ಬ ಪರ್ಷಿಯನ್‌ ವ್ಯಾಪಾರಿ ಇದನ್ನು ನಿರ್ಮಿಸಿದ. ಆತ ಕಳ್ಳತನ ಮಾಡಿದ ಹಣದಿಂದ ಈ ನಿರ್ಮಿತಿ ಕಟ್ಟಿದನೆಂಬುದು ತಿಳಿದಾಗ ಸಂತರು, ಅಲ್ಲಿ ನೆಲೆಸಲಿಲ್ಲ. ಬದಲಾಗಿ ಕೋಟೆಯ ಒಳಭಾಗದಲ್ಲಿರುವ ಕಂಖಾದಲ್ಲಿ ನೆಲೆಸಿದರು. ಅಂದಿನಿಂದಲೂ ಇದನ್ನು ಚೋರಗುಂಬಜ್‌ ಎಂದೇ ಕರೆಯಲಾಗುತ್ತದೆ. ವಿಜಾಪುರದ ಗೋಳಗುಮ್ಮಟಕ್ಕೆ ಇದೇ ಪ್ರೇರಣೆ.
ದೂರ: 10.1 ಕಿ.ಮೀ. 22 ನಿಮಿಷ
ರಿಕ್ಷಾ, ಕಾರು, ಬೈಕು

Advertisement

5. ಶೇಖ್‌ ರೋಜಾ ದರ್ಗಾ
ಶಹಾಬಜಾರ್‌ ಪ್ರದೇಶದ ಶೇಖರೋಜಾದಲ್ಲಿರುವ ದ್ವಾರ, ಶ್ರೇಷ್ಟ ಸಂತರಾದ ಹಜರತ್‌ ಶೇಖ್‌ ಸಿರಾಜ್‌- ಉದ್‌ ದಿನ್‌- ಜುನೈದಿಯವರು ದರ್ಗಾಗೆ ಪ್ರವೇಶಿಸುತ್ತಿದ್ದ ದ್ವಾರವಾಗಿದೆ. ಸುಮಾರು 115 ವರ್ಷಗಳ ಕಾಲ ಬದುಕಿದ ಸಂತರು ಆರಂಭಿಕ ಬಹಮನಿ ಸುಲ್ತಾನರ ಮಾರ್ಗದರ್ಶಕರಾಗಿದ್ದರು. ಈ ಎರಡು ಮಿನಾರ್‌ಗಳ ಮಧ್ಯದಲ್ಲಿ ಪ್ರವೇಶ ದ್ವಾರವಿದೆ. ಇದನ್ನು ಶೇಖರೋಜಾ ಎಂದೇ ಕರೆಯಲಾಗುತ್ತದೆ. ಇಂಡೋ ಇಸ್ಲಾಂ ಶೈಲಿಯಲ್ಲಿ ನಿರ್ಮಿಸಿರುವ ಪ್ರವೇಶ ದ್ವಾರಗಳ ಮಿನಾರಗಳು ನೋಡಲು ಅತ್ಯಂತ ಆಕರ್ಷಣೀಯವಾಗಿವೆ.
ದೂರ: 8.2 ಕಿ.ಮೀ. 18 ನಿಮಿಷ
ರಿಕ್ಷಾ, ಕಾರು, ಬೈಕು

6. ಖ್ವಾಜಾ ಬಂದೇ ನವಾಜ್‌ ದರ್ಗಾ
ಭಾರತದ ದೊಡ್ಡ ದರ್ಗಾವಾಗಿರುವ ಅಜ್ಮೇರಿಯ ದರ್ಗಾದ ನಂತರ ಸೂಫಿ ಸಂತ ಈ ಖ್ವಾಜಾ ಬಂದೇ ನವಾಜ್‌ ದರ್ಗಾವಾಗಿದೆ. ಕ್ರಿ.ಶ. 1407ರಿಂದ 1422ರಲ್ಲಿ ಕಲಬುರಗಿಯಲ್ಲಿ ನೆಲೆನಿಂತ ಶ್ರೇಷ್ಠ ಸೂಫಿ ಸಂತರಾದ ಬಂದೇ ನವಾಜರು. ಅವರ ಅನುಯಾಯಿಗಳಲ್ಲಿ ಹಿಂದೂ ಮುಸ್ಲಿಂ ಎರಡೂ ಧರ್ಮದವರಿದ್ದರು. ಅವರ ಸ್ಮರಣಾರ್ಥ ಈ ಬೃಹದಾಕಾರದ ದರ್ಗಾ ನಿರ್ಮಿಸಲಾಗಿದೆ. ದರ್ಗಾದ ಗ್ರಂಥಾಲಯದಲ್ಲಿ ಅರೇಬಿಕ್‌, ಪರ್ಷಿಯನ್‌ ಮತ್ತು ಉರ್ದು ಭಾಷೆಗಳ ಸುಮಾರು 10 ಸಾವಿರ ಅಮೂಲ್ಯ ಗ್ರಂಥಗಳಿವೆ.
ದೂರ: 6.2 ಕಿ.ಮೀ. 14 ನಿಮಿಷ
ರಿಕ್ಷಾ, ಕಾರು, ಬೈಕು

7. ಶರಣಬಸವೇಶ್ವರ ದೇವಸ್ಥಾನ
ಮಹಾದಾಸೋಹಿ ಶರಣಬಸವೇಶ್ವರರು ತಮ್ಮ ಲೀಲೆಗಳನ್ನು ಹಾಗೂ ನಡೆ ನುಡಿಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾಗೃತಿ ಮೂಡಿಸಿದವರು. ಅದರ ಪರಿಣಾಮ ಈ ಭಾಗದ ಆರಾಧ್ಯದೈವರಾಗಿದ್ದಾರೆ. 1822ರಲ್ಲಿ ಶ್ರೀ ಶರಣಬಸವೇಶ್ವರರು ಲಿಂಗೈಕ್ಯರಾದ ನಂತರ ಸಮಾಧಿ ಮೇಲೆ ನಿರ್ಮಿಸಲಾದ ದೇವಾಲಯವಿದು. ದೇವಸ್ಥಾನದ ಮೇಲ್ಭಾಗ ಶಿಖರದ ಸುತ್ತಲೂ ಶ್ರೀ ಶರಣಬಸವೇಶ್ವರರ ಜೀವನಕ್ಕೆ ಸಂಬಂಧಿಸಿದ ಹಾಗೂ ಇತರ ದೇವರುಗಳ ಮೂರ್ತಿಗಳನ್ನು ರಚಿಸಲಾಗಿದೆ.
ದೂರ: 6.2 ಕಿ.ಮೀ. 13 ನಿಮಿಷ
ರಿಕ್ಷಾ, ಕಾರು, ಬೈಕು


8. ಬುದ್ಧ ವಿಹಾರ
ಕಲಬುರಗಿ ನಗರದ ಪೂರ್ವಭಾಗ, ವಿಶ್ವವಿದ್ಯಾಲಯ ಪಕ್ಕದಲ್ಲಿಯೇ ಸುಮಾರು 70 ಎಕರೆ ಪ್ರದೇಶದಲ್ಲಿ ಶ್ವೇತ ವರ್ಣದಲ್ಲಿ ನಿರ್ಮಾಣಗೊಂಡ ಬುದ್ಧ ವಿಹಾರ ಭಾರತದ ವಿಹಾರಗಳಲ್ಲಿಯೇ ಅತ್ಯಂತ ಬೃಹದಾಕಾರದಲ್ಲಿದೆ. ವಿಹಾರದಲ್ಲಿ ಪಂಚಲೋಹದಲ್ಲಿ ನಿರ್ಮಾಣಗೊಂಡ 6 ಅಡಿ ಎತ್ತರದ ಬುದ್ಧನ ಬಂಗಾರ ಲೇಪನದ ಮನಮೋಹಕವಾಗಿದೆ. ಇದು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರದ ವಿಗ್ರಹವಾಗಿದೆ. ಈ ವಿಹಾರದ 170 ಕಂಬಗಳು, 284 ಭಾಗಗಳನ್ನು ನೋಡಿದರೆ ಅಜಂತಾ, ಎಲ್ಲೋರಾದ ಗುಹೆಗಳಂತೆ ಭಾಸವಾಗುತ್ತದೆ.
ದೂರ: 1 ಕಿ.ಮೀ. 4 ನಿಮಿಷ
ರಿಕ್ಷಾ, ಕಾರು, ಬೈಕು ಕಾಲ್ನಡಿಗೆ

9. ಸಮಾಧಾನ್‌ ಆಶ್ರಮ
ಕಲಬುರಗಿ ನಗರದ ಹೊರವಲಯ ಜೇವರ್ಗಿ ರಸ್ತೆಯ ಆಕಾಶವಾಣಿ ಕೇಂದ್ರದ ಹಿಂದುಗಡೆ ಪಿರಮಿಡ್‌ ಮಾದರಿಯಲ್ಲಿ ನಿರ್ಮಿಸಲಾದ ಸಮಾಧಾನ್‌ ಧ್ಯಾನಮಂದಿರ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ಅಪೇಕ್ಷೆ ಮೇರೆಗೆ ನಿರ್ಮಾಣಗೊಂಡ ಈ ಧ್ಯಾನ ಮಂದಿರ ಗುಂಪಾ ಆಕಾರದಲ್ಲಿದ್ದು, ವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ. ಧ್ಯಾನ ಮಂದಿರದೊಳಗೆ 15 ನಿಮಿಷಗಳ ಕಾಲ ಧ್ಯಾನ ಮಾಡಿದರೆ ಎಂಥ ಒತ್ತಡ ನಿವಾರಿಸಿಕೊಳ್ಳಬಹುದಾಗಿದೆ. ಅಂತಹ ಶಕ್ತಿ ಅಡಕವಾಗಿದೆ ಎನ್ನಲಾಗುತ್ತದೆ.
ದೂರ: 10 ಕಿ.ಮೀ. 18 ನಿಮಿಷ
ರಿಕ್ಷಾ, ಕಾರು, ಬೈಕು

10. ಗಾಣಗಾಪೂರ ದತ್ತ
ಕಲಬುರಗಿಯಿಂದ ಪಶ್ಚಿಮಕ್ಕೆ ದಕ್ಷಿಣಭಾರತದ ಪ್ರಸಿದ್ಧ ಯಾತ್ರಾ ಸ್ಥಳ ದೇವಲ ಗಾಣಗಾಪುರವಿದ್ದು, ಅಲ್ಲಿ ಪವಿತ್ರ ದತ್ತಾತ್ರೇಯ ದೇವಸ್ಥಾನವಿದೆ. ನರಸಿಂಹ ಸರಸ್ವತಿ ಸ್ವಾಮಿಗಳು 550 ವರ್ಷಗಳ ಹಿಂದೆ ಪಾದುಕೆಗಳು ಬಿಟ್ಟು ಭೀಮಾ ನದಿಯಲ್ಲಿ ಮಾಯವಾಗಿದ್ದರ ಹಿನ್ನಲೆಯಲ್ಲಿ ಪಾದುಕೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಭೂತ, ಪ್ರೇತ ಹಾಗೂ ಮಾನಸಿಕ ಮತ್ತು ಕುಷ್ಠ ರೋಗಕ್ಕೆ ಒಳಗಾದವರು ದೇವಸ್ಥಾನದ ಆರತಿ ಮಾಡುವ ಶಬ್ದ ಕಿವಿಗೆ ಬಿದ್ದರೆ ಗುಣಮುಖವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿ ಅಶ್ವಥ ವೃಕ್ಷದ ಕೆಳಗಡೆ ದತ್ತರು ಭಕ್ತರಿಗೆ ಪ್ರವಚನ ಹೇಳುತ್ತಿದ್ದರಂತೆ. ಅಶ್ಚರ್ಯವೆಂದರೆ ಈ ಮರ ಇಂದಿನ ದಿನದವರೆಗೂ ಇದೆ.
ದೂರ: 47 ಕಿ.ಮೀ. 56 ನಿಮಿಷ
ಬಸ್ಸು, ಕಾರು, ಬೈಕು

11. ಘತ್ತರಗಿ ಭಾಗ್ಯವಂತಿ ದೇವಸ್ಥಾನ
ಬೇಡಿದ ವರ ನೀಡುವ ದೇವತೆಯೆಂದೇ ಖ್ಯಾತಿ ಪಡೆದಿರುವ ಭಾಗ್ಯವಂತಿ ದೇವಸ್ಥಾನ ಅಫಜಲಪೂರ ತಾಲೂಕಿನಲ್ಲಿದೆ. ಶಕ್ತಿ ಕೆಂದ್ರವಾಗಿರುವ ಭಾಗ್ಯವಂತಿ ದೇವಸ್ಥಾನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಭಾಗ್ಯವಂತಿ ವಿಜಯನಗರದ ಅರಸ ಮನೆತನದ ಕುಲದೇವತೆಯಾಗಿದ್ದಳು ಎನ್ನಲಾಗುತ್ತದೆ. ವಿಜಯನಗರದ ಕೊನೆಯ ಅರಸು ರಾಮರಾಯ ಭಾಗ್ಯವಂತಿ ದೇವಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ವಿಜಯನಗರ ಪತನ ಹೊಂದಿತು ಎಂಬ ನಂಬುಗೆ ಇಲ್ಲಿನವರದು. ನಂತರ ಭಾಗ್ಯವಂತಿ ದೇವಿಯು ಸರ್ಪರೂಪದಲ್ಲಿ ಘತ್ತರಗಿಗೆ ಬಂದು ನೆಲೆಸಿದಳು ಎಂಬುದು ಪ್ರತೀತಿ.
ದೂರ: 70 ಕಿ.ಮೀ. 1 ಗಂಟೆ 40 ನಿಮಿಷ
ಬಸ್ಸು, ಕಾರು, ಬೈಕು


12. ಕಾಳಗಿ ನೀಲಕಂಠ ಕಾಳೇಶ್ವರ
ಕಲಬುರಗಿಯಿಂದ 50 ಕೀ.ಮೀ ದೂರದಲ್ಲಿರುವ ಕಾಳಗಿ ಇತ್ತೀಚಿಗಷ್ಟೆ ನೂತನ ತಾಲ್ಲೂಕಾಗಿ ಹೊರ ಹೊಮ್ಮಿದೆ. ಇಲ್ಲಿ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ ಹಾಗೂ ಸ್ಮಾರಕಗಳಿದ್ದು, ಪ್ರಾಚೀನ ಪರಂಪರೆ ಹೊಂದಿದೆ. ಶಾಸನಗಳಲ್ಲಿ ಕಾಳುಗೆ ಎಂದು ಉಲ್ಲೇಖವಾಗಿದೆ. ಕಲ್ಯಾಣಿ ಚಾಲುಕ್ಯ ಅರಸ ಜಗದೇಕ ಮಲ್ಲನು ಸೋಮೇಶ್ವರ ದೇವಸ್ಥಾನಕ್ಕೆ ದತ್ತಿ ನೀಡಿರುವ ವಿಷಯ ಈ ಶಾಸನಗಳಲ್ಲಿ ಉಲ್ಲೇಖವಿದೆ. ಕಲ್ಯಾಣಿ ಚಾಲುಕ್ಯರ ಶೈಲಿಯ ಈ ದೇವಾಲಯವು ಕಲಬುರಗಿ ಜಿಲ್ಲೆಯ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.
ದೂರ: 45 ಕಿ.ಮೀ. 1 ಗಂಟೆ
ಬಸ್ಸು, ಕಾರು, ಬೈಕು

13. ಸನ್ನತಿಯ ಬೌದ್ಧ ತಾಣ
ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್‌ ಅಶೋಕನ ಕಾಲಘಟ್ಟದ ಐತಿಹಾಸಿಕ ಕುರುಹುಗಳನ್ನು ಹೊತ್ತು ನಿಂತಿರುವ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮ, ಪ್ರಮುಖ ಐತಿಹಾಸಿಕ ತಾಣವಾಗಿದೆ. 1994-2001ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಕೈಗೊಂಡ ಉತ್ಖನನದಲ್ಲಿ ಬುದ್ಧನ ನೂರಾರು ಶಿಲಾ ಮೂರ್ತಿಗಳು, ಬ್ರಹದಾಕಾರದ ಬೌದ್ಧ ಸ್ತೂಪ, ಅಶೋಕನ ರೇಖಾಚಿತ್ರ, ಬುದ್ಧ ವಿಹಾರ, ನಾಗಾ ಜನಾಂಗದ ಕಥೆ ಹೇಳುವ ಸಾವಿರಾರು ಶಿಲ್ಪಕಲೆಗಳು ನೆಲದಡಿ ಪತ್ತೆಯಾಗಿದ್ದವು. ಬ್ರಾಹ್ಮಿ ಲಿಪಿಯಲ್ಲಿ ಅಶೋಕನ ಕಾಲಘಟ್ಟವನ್ನು ದಾಖಲಿಸಿರುವ ಪಾಲಿ ಭಾಷೆಯ ಶಿಲಾ ಶಾಸನವೂ ಇಲ್ಲಿದೆ.
ದೂರ: 75 ಕಿ.ಮೀ. 1 ಗಂಟೆ
ಬಸ್ಸು (ಅಪರೂಪ), ಕಾರು, ಬೈಕು

14. ಸನ್ನತಿ ಚಂದ್ರಲಾ ಪರಮೇಶ್ವರಿ
ಭಾರತದ ಶಕ್ತಿ ಪೀಠಗಳಲೊಂದಾದ ಈ ಐತಿಹಾಸಿಕ ದೇಗುಲ ಪ್ರಸಿದ್ದಿ ಪಡೆದ ಕ್ಷೇತ್ರ, ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ಭೀಮಾನದಿ ದಡದಲ್ಲಿ ನೆಲೆಗೊಂಡಿದೆ.
ದೇವಸ್ಥಾನದ ಕಾಳಿಕಾ ವಿಗ್ರಹದ ಪಾಣಿಪೀಠದ ಮೇಲೆ ಸಾಮ್ರಾಟ್‌ ಅಶೋಕನ ಕಾಲದ್ದು ಎಂದು ಹೇಳಲಾದ ಶಿಲಾ ಶಾಸನ ದೊರೆತಿದೆ. ಚಂದ್ರಲಾಂಬಾ ಎಂದು ಕರೆಯಲ್ಪಡುತ್ತಿದ್ದ ದೇವಿಯನ್ನು ಈಗ ಚಂದ್ರಲಾ ಪರಮೇಶ್ವರಿ ಎಂಬುದಾಗಿ ಕರೆಯಲಾಗುತ್ತದೆ.
ದೂರ: 75 ಕಿ.ಮೀ. 1 ಗಂಟೆ
ಬಸ್ಸು (ಕಡಿಮೆ), ಕಾರು, ಬೈಕು


15. ನಾಗಾವಿಯ ಪ್ರಾಚೀನ ಧಾರ್ಮಿಕ ವಿಶ್ವವಿದ್ಯಾಲಯ
ಚಿತ್ತಾಪೂರ ತಾಲೂಕಿನ ನಾಗಾವಿ ಪ್ರಾಚೀನ ಕಾಲದಲ್ಲಿ ಶಿಕ್ಷಣ ಕೇಂದ್ರವಾಗಿತ್ತು. ಕಲ್ಯಾಣಿ ಚಾಲುಕ್ಯರ ದೊರೆ ಆರನೇ ವಿಕ್ರಮಾದಿತ್ಯ ಇದನ್ನು ದಕ್ಷಿಣ ಭಾರತದ ನಳಂದ ವಿಶ್ವವಿದ್ಯಾಲಯನ್ನಾಗಿ ರೂಪಿಸಿದ್ದ. ಇಲ್ಲಿನ ಕಟ್ಟಡವೊಂದರ ಕಂಬಗಳನ್ನು ಎಣಿಸಲಾಗದು ಎಂಬ ಪ್ರತೀತಿ ಇದೆ. ಒಂದು ಬಾರಿ ಎಣಿಸಿದರೆ 62, ಮತ್ತೂಮ್ಮೆ 58 ಆಗುತ್ತವೆ. ಹೀಗೆ ಇವುಗಳನ್ನು ಎಣಿಸಿ ಸೋತವರು ಅನೇಕರಿದ್ದಾರೆ. ರಾಷ್ಟ್ರಕೂಟರ ಕುಲದೇವತೆಯಾದ ನಾಗಲಾಂಬಿಕಾ ದೇವಿಯ ಮಂದಿರವೂ ಇಲ್ಲಿದೆ.
ದೂರ: 63 ಕಿ.ಮೀ. 1 ಗಂಟೆ 15 ನಿಮಿಷ
ಬಸ್ಸು , ಕಾರು, ಬೈಕು

16. ಮಾತಾ ಮಾಣಿಕೇಶ್ವರಿ
ಲೋಕ ಕಲ್ಯಾಣಕ್ಕಾಗಿ ಸತತ 86 ವರ್ಷಗಳ ಕಾಲ ಅನ್ನ, ನೀರು ತ್ಯಜಿಸಿ ಕೇವಲ ಶಿವಧ್ಯಾನದಲ್ಲಿ ಭಕ್ತರ ಪಾಲಿನ ಆರಾಧ್ಯದೆ„ವವಾಗಿರುವ ಮಾತಾ ಮಾಣಿಕೇಶ್ವರಿ ಅಮ್ಮನವರು ನೆಲೆಸಿರುವ ಕ್ಷೇತ್ರವೇ ಯಾನಗುಂದಿ ಗ್ರಾಮದ ಮಾಣಿಕ್ಯಗಿರಿ ಬೆಟ್ಟ. ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದಲ್ಲಿ ನೆಲೆಸಿರುವ ತಾಯಿ, ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬುದು ಭಕ್ತರ ನಂಬುಗೆ.
ದೂರ: 92 ಕಿ.ಮೀ. 1 ಗಂಟೆ 54 ನಿಮಿಷ
ಬಸ್ಸು (ಕಡಿಮೆ), ಕಾರು, ಬೈಕು

17. ಮಳಖೇಡದ ಬೃಂದಾವನ
ಮಧ್ವಾಚಾರ್ಯರ ಶಿಷ್ಯರಲ್ಲಿ ಒಬ್ಬರಾದ ಅಕ್ಷೊಭ್ಯತೀರ್ಥರ ಮೂಲ ವೃಂದಾವನವಿರುವ, ದ್ವೆ„ತ ಮತ್ತು ಭಕ್ತಿಮಾರ್ಗವನ್ನು ಪ್ರಚುರಪಡಿಸಿದ ಮಹಾನ್‌ ದಾರ್ಶನಿಕ ಜಯತೀರ್ಥರ ಮೂಲ ವೃಂದಾವನವೂ, ಪವಿತ್ರ ಉತ್ತರಾ ಮಠ ಇರುವ ಕ್ಷೇತ್ರವೇ ಮಳಖೇಡ. ಟೀಕಾಚಾರ್ಯರೆಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಜಯತೀರ್ಥರು 21 ಗ್ರಂಥಗಳನ್ನು ರಚಿಸಿದವರು.
ದೂರ: 34 ಕಿ.ಮೀ. 36 ನಿಮಿಷ
ಬಸ್ಸು , ಕಾರು, ಬೈಕು

18. ರಾಷ್ಟ್ರಕೂಟರ ಕೋಟೆ
9ನೇ ಶತಮಾನದಲ್ಲಿ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ, ಕನ್ಯಾಕುಮಾರಿವರೆಗೂ ತನ್ನ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದ್ದ ರಾಷ್ಟ್ರಕೂಟರ ಕೋಟೆ ಸೇಡಂ ತಾಲೂಕಿನ ಮಳಖೇಡದಲ್ಲಿದೆ. ಪ್ರಾಚೀನ ಕಾಲದಲ್ಲಿ “ಮಾನ್ಯಖೇಟ’ ಎಂದು ಕರೆಸಿಕೊಳ್ಳುತ್ತಿತ್ತು, ಹತ್ತಾರು ಕೋಟೆ ಕೊತ್ತಲಗಳಿಂದ ಆವೃತ್ತವಾಗಿರುವ 3 ಸುತ್ತಿನ ರಾಜರ ಕೋಟೆ ಪ್ರಮುಖ ಆಕರ್ಷಣೆಯಾಗಿದೆ.
ದೂರ: 34.3 ಕಿ.ಮೀ. 38 ನಿಮಿಷ
ಬಸ್ಸು , ಕಾರು, ಬೈಕು

19. ತಿರುಪತಿಯ ಪೂರ್ವದ್ವಾರ ಬಲಭೀಮಸೇನ ದೇವಸ್ಥಾನ
ಜಗತ್ಪ್ರಸಿದ್ಧ, ತಿರುಪತಿಯ ತಿಮ್ಮಪ್ಪನ ದೇವಾಲಯಕ್ಕೆ ಪೂರ್ವದ್ವಾರ ಎಂದೇ ಹೆಸರಾದುದು ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿರುವ ಶ್ರೀಬಲಭೀಮಸೇನ ದೇವಾಲಯ. ತಿರುಪತಿಯಲ್ಲಿ ತಿಮ್ಮಪ್ಪನಿಗೆ ಜರುಗುವ ಪ್ರತಿಯೊಂದು ಸೇವೆ ಯಥಾವತ್ತಾಗಿ ಇಲ್ಲಿಯೂ ಮಾಡಲಾಗುತ್ತದೆ. ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಮುನ್ನ ಉದ್ಭವ ಮೂರ್ತಿಯಾದ ಬಲಭೀಮಸೇನ ದೇವರ ದರ್ಶನ ಪಡೆಯುವುದು ವಾಡಿಕೆ.
ದೂರ: 78 ಕಿ.ಮೀ. 1 ಗಂಟೆ 34 ನಿಮಿಷ
ಬಸ್ಸು (ಕಡಿಮೆ), ಕಾರು, ಬೈಕು


20. ಪಂಚಲಿಂಗೇಶ್ವರದ ಬಾಣಂತಿ ಕಂಬ
ಐತಿಹಾಸಿಕವಾಗಿಯೂ ಸಾಂಸ್ಕೃತಿಕವಾಗಿಯೂ ಸುಪ್ರಸಿದ್ಧವಾಗಿರುವ ಹೆ„ದ್ರಾಬಾದ್‌ ಕರ್ನಾಟಕದ ಗಡಿಭಾಗದ ತಾಲೂಕು ಕೇಂದ್ರವಾದ ಸೇಡಂನಲ್ಲಿ ವಿಶಿಷ್ಟ ಹಾಗು ವಿಸ್ಮಯಕಾರಿ ಪಳೆಯುಳಿಕೆಗಳು ನೋಡಲು ಸಿಗುತ್ತವೆ. ಇಲ್ಲಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದುದು. ಇಲ್ಲಿನ “ಬಾಣಂತಿ ಕಂಬ’ ಎಂದು ಕರೆಯಲ್ಪಡುವ ಏಕಶಿಲಾ ಸ್ಥಂಭ ಪ್ರವಾಸಿಗರ ಗಮನ ಸೆಳೆಯುತ್ತದೆ. ಈ ಹೆಸರಿನ ಹಿಂದೆ ಪುರಾಣದ ಐತಿಹ್ಯವನ್ನು ಗುರುತಿಸಬಹುದಾಗಿದೆ.
ದೂರ: 50 ಕಿ.ಮೀ. 58 ನಿಮಿಷ
ಬಸ್ಸು , ಕಾರು, ಬೈಕು

21. ನರೋಣಾ ಕ್ಷೇಮಲಿಂಗೇಶ್ವರ
ಕೃತಾಯುಗದಿಂದ ಶಿವನು ನರೋಣಾದಲ್ಲಿ ವಾಸವಿದ್ದಾನೆಂದು ಪುರಾಣಗಳು ಹೇಳುತ್ತವೆ. ತ್ರೇತಾಯುಗದಲ್ಲಿ ಶ್ರೀರಾಮನು ಶಾಂತಿಗಾಗಿ ಈ ಕ್ಷೇತ್ರಕ್ಕೆ ಬಂದು ಒಂದು ಸರೋವರ ಕಟ್ಟಿಸಿದನು. ಅದುವೇ ಶ್ರೀರಾಮ ಸರೋವರವೆಂದು ಹೆಸರಾಗಿದೆ. ಈ ಸ್ಥಳದಲ್ಲಿ ದುಷ್ಟಶಕ್ತಿ ಕಾಣದು ಎನ್ನುವ ಕಾರಣಕ್ಕೆ ಈ ಸ್ಥಳಕ್ಕೆ ನರೋಣಾ ಎಂಬ ಹೆಸರು ಬಂದಿತು. ಪ್ರಕೃತಿಯ ಸೌಂದರ್ಯ ಮಡಿಲಲ್ಲಿರುವ ಈ ದಿವ್ಯ ತಾಣ ಅನೇಕ ಋಷಿ ಮುನಿಗಳು ನಡೆದಾಡಿದ ನೆಲ.
ದೂರ: 32 ಕಿ.ಮೀ. 57 ನಿಮಿಷ
ಬಸ್ಸು , ಕಾರು, ಬೈಕು

– ಹಣಮಂತರಾವ್‌ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next