Advertisement

ಇಷ್ಟು ವರ್ಷ ಕಾದದ್ದಕ್ಕೆ ಸಾರ್ಥಕವಾಯಿತು:ಆಡ್ವಾಣಿ

09:52 AM Aug 05, 2020 | mahesh |

ಹೊಸದಿಲ್ಲಿ: ‘ರಾಮಮಂದಿರಕ್ಕೆ ಭೂಮಿಪೂಜೆ ನೆರವೇರುತ್ತಿರುವುದು ಒಂದು ಐತಿಹಾಸಿಕ ಹಾಗೂ ಭಾವನಾತ್ಮಕ ಕ್ಷಣ. ಇಷ್ಟು ವರ್ಷಗಳ ಕಾಯುವಿಕೆಯು ಕೊನೆಗೂ ಸಾರ್ಥಕವಾಯಿತು.’

Advertisement

ಹೀಗೊಂದು ಸಾರ್ಥಕ್ಯದ ನುಡಿ ಕೇಳಿಬಂದಿದ್ದು ಬಿಜೆಪಿ ಹಿರಿಯ ಮುತ್ಸದ್ಧಿ, ರಾಮಜನ್ಮಭೂಮಿ ಚಳವಳಿಯ ನೇತೃತ್ವ ವಹಿಸಿದ್ದ ಎಲ್‌.ಕೆ.ಆಡ್ವಾಣಿ ಅವರಿಂದ. ಭೂಮಿಪೂಜೆ ಹಿನ್ನೆಲೆಯಲ್ಲಿ ಮಂಗಳವಾರ ಈ ಹೇಳಿಕೆ ನೀಡಿರುವ 92 ವರ್ಷ ವಯಸ್ಸಿನ ಆಡ್ವಾಣಿ, “ಇದು ಕೇವಲ ನನಗೆ ಮಾತ್ರವಲ್ಲ, ಎಲ್ಲ ಭಾರತೀಯರಿಗೂ ಐತಿಹಾಸಿಕ ಮತ್ತು ಭಾವನಾತ್ಮಕ ದಿನವಾಗಿದೆ. ರಾಮಜನ್ಮಭೂಮಿ ಚಳವಳಿಯ ಸಮಯದಲ್ಲಿ ವಿಧಿಯು ನನಗೆ ಸೋಮನಾಥದಿಂದ ಅಯೋಧ್ಯೆಯವರೆಗೆ ರಾಮ ರಥಯಾತ್ರೆಯ ರೂಪದಲ್ಲಿ ಪವಿತ್ರ ಕಾರ್ಯವೊಂದನ್ನು ನೆರವೇರಿಸಲು ಅವಕಾಶ ಕಲ್ಪಿಸಿತು. ಅಂದಿನ ಯಾತ್ರೆಯು ಅಪರಿಮಿತ ಭಕ್ತಾದಿಗಳ ಆಕಾಂಕ್ಷೆ, ಶಕ್ತಿ ಹಾಗೂ ಉತ್ಸಾಹವನ್ನು ತೋರಿಸಿತು’ ಎಂದಿದ್ದಾರೆ.

ಸಾಮರಸ್ಯವನ್ನು ಪ್ರತಿನಿಧಿಸುವ ವಿಶ್ವಾಸ: ಸುಪ್ರೀಂ ಕೋರ್ಟ್‌ನ ನಿರ್ಣಾಯಕ ತೀರ್ಪಿನ ಫ‌ಲವಾಗಿ ರಾಮ ಮಂದಿರ ನಿರ್ಮಾಣದ ಕಾರ್ಯ ಆರಂಭ ವಾಗಿದೆ. ಇದು ಭಾರತೀಯರ ನಡುವಿನ ಬಾಂಧವ್ಯವನ್ನು ಬಲಿಷ್ಠಗೊಳಿಸಲು ನೆರವಾಗಲಿದೆ. ಶ್ರೀರಾಮ ಮಂದಿರವು ಭಾರತವನ್ನು ಒಂದು ಬಲಿಷ್ಠ, ಸಮೃದ್ಧ, ಶಾಂತಿಯುತ ಹಾಗೂ ಸಾಮರಸ್ಯಭರಿತ ದೇಶವನ್ನಾಗಿ ಪ್ರತಿನಿಧಿಸಲಿದೆ ಮತ್ತು ಎಲ್ಲರಿಗೂ ನ್ಯಾಯ ಒದಗಿಸುವ, ಯಾರನ್ನೂ ಹೊರಗಿಡದ ರಾಮರಾಜ್ಯವು ಸೃಷ್ಟಿಯಾಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದೂ ಆಡ್ವಾಣಿ ಅವರು ನುಡಿದಿದ್ದಾರೆ.

ಧನ್ಯವಾದ: ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಬಿಜೆಪಿಯ ಧ್ಯೇಯವಾಗಿತ್ತು. ಇಂದಿನ ಈ ಶುಭಸಂದರ್ಭದಲ್ಲಿ ನಾನು, ರಾಮಜನ್ಮಭೂಮಿ ಚಳವಳಿಗೆ ಮೌಲ್ಯಯುತ ಕೊಡುಗೆಗಳನ್ನು ನೀಡಿದ, ತ್ಯಾಗಗಳನ್ನು ಮಾಡಿದ ಸಂತರು, ನಾಯಕರು ಹಾಗೂ ದೇಶ-ವಿದೇಶಗಳಲ್ಲಿನ ಜನರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದೂ ಆಡ್ವಾಣಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next