Advertisement

ಹಿಸಾರ್‌: ಕುಟುಂಬ ರಾಜಕೀಯದ ಕಣ

11:15 AM May 08, 2019 | Team Udayavani |

ಹರ್ಯಾಣದ ಹಿಸಾರ್‌ ಲೋಕಸಭಾ ಕ್ಷೇತ್ರವು ಮೂರು ರಾಜಕೀಯ ಕುಟುಂಬಗಳ ನಡುವಿನ ಅಖಾಡವಾಗಿ ಬದಲಾಗಿದ್ದು, ಈ ತಿಕ್ರೋನ ಸ್ಪರ್ಧೆಯು ಹರ್ಯಾಣದ ಅತಿದೊಡ್ಡ ಕುಟುಂಬ ರಾಜಕಾರಣದ ಯುದ್ಧವಾಗಿ ಬದಲಾಗಿದೆ.

Advertisement

ಈ ಬಾರಿ ಹಿಸಾರ್‌ನಲ್ಲಿ ಓಂಪ್ರಕಾಶ್‌ ಚೌಟಾಲಾ ಅವರ ಮೊಮ್ಮಗ, ಹಾಲಿ ಸಂಸದ ದುಷ್ಯಂತ್‌ ಚೌಟಾಲಾ(31), ಕೇಂದ್ರ ಸಚಿವ ಬೀರೇಂದ್ರ ಸಿಂಗ್‌ ಅವರ ಮಗ ಬೃಜೇಂದ್ರ ಸಿಂಗ್‌(46) ಮತ್ತು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್ ಅವರ ಮೊಮ್ಮಗ ಭವ್ಯ ಬಿಷ್ಣೋಯ್‌(26) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರಲ್ಲಿ ಬೃಜೇಂದ್ರ ಮತ್ತು ಭವ್ಯ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ.

31 ವರ್ಷದ ದುಷ್ಯಂತ್‌ ಚೌಟಾಲಾ, 16ನೇ ಲೋಕಸಭೆಯ ಅತಿ ಕಿರಿಯ ಸಂಸದರಲ್ಲೊಬ್ಬರು. 2014ರಲ್ಲಿ ಅವರು ಇಂಡಿಯನ್‌ ನ್ಯಾಷನಲ್ ಲೋಕದಳದ(ಐಎನ್‌ಎಲ್ಡಿ) ಟಿಕೆಟ್‌ನ ಮೇಲೆ ಗೆದ್ದಿದ್ದರು. ಚೌಟಾಲಾ ಕುಟುಂಬದ ಮೂರನೇ ಕುಡಿಯಾಗಿರುವ ದುಷ್ಯಂತ್‌ ಅವರು ಈಗ ಐಎನ್‌ಎಲ್ಡಿಯನ್ನು ತೊರೆದು ‘ಜನನಾಯಕ್‌ ಜನತಾ ಪಾರ್ಟಿ'(ಜೆಜೆಪಿ)ಹುಟ್ಟುಹಾಕಿ ಅದರ ಮೂಲಕ ಸ್ಪರ್ಧಿಸುತ್ತಿದ್ದಾರೆ.

46 ವರ್ಷದ ಬೃಜೇಂದ್ರ ಸಿಂಗ್‌, ಐಎಎಸ್‌ ಹುದ್ದೆಯನ್ನು ತೊರೆದು ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಅವರ ತಂದೆ, ಕೇಂದ್ರ ಸಚಿವ ಬೀರೇಂದ್ರ ಸಿಂಗ್‌ ಅವರು ಮಗನ ಪರ ಜೋರು ಪ್ರಚಾರ ನಡೆಸಿದ್ದಾರೆ.

ಇನ್ನು 26 ವರ್ಷದ ಭವ್ಯ ಬಿಷ್ಣೋಯ್‌, ಆಕ್ಸ್‌ಫ‌ರ್ಡ್‌ ಪದವೀಧರರಾಗಿದ್ದು, ಕಾಂಗ್ರೆಸ್‌ ಟಿಕೆಟ್‌ನ ಮೇಲೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಮೊದಲು ಭವ್ಯ ಬಿಷ್ಣೋಯ್‌ ಬದಲು ಅವರ ತಂದೆ ಕುಲದೀಪ್‌ ಬಿಷ್ಣೋಯ್‌ಗೆ ಟಿಕೆಟ್ ಕೊಡಲು ಬಯಸಿತ್ತಾದರೂ, ಕುಲದೀಪ್‌ ಅವರು ತಮ್ಮ ಮಗನನ್ನು ಅಖಾಡಕ್ಕೆ ಇಳಿಸಲು ಪಕ್ಷದ ಮನವೊಲಿಸಿದ್ದಾರೆ.

Advertisement

ಜಾಟ್ ಮತಗಳ ಹಿಂದೆ: ಹಿಸಾರ್‌ ಕ್ಷೇತ್ರದಲ್ಲಿ ಜಾಟ್ ಸಮುದಾಯದವರ ಶಕ್ತಿ ಅಧಿಕವಿದೆ. ಆದಾಗ್ಯೂ 2009ರ ಲೋಕಸಭಾ ಚುನಾವಣೆ ಮತ್ತು 2011ರ ಲೋಕಸಭಾ ಉಪಚುನಾವಣೆಯಲ್ಲಿ ಹಿಸಾರ್‌ನಲ್ಲಿ ಜಾಟೇತರ ಅಭ್ಯರ್ಥಿಗಳಾದ ಭಜನ್‌ಲಾಲ್ ಮತ್ತು ಕುಲ್ದೀಪ್‌ ಬಿಷ್ಣೋಯ್‌ ಗೆದ್ದು, ಜಾಟೇತರ ನಾಯಕರಿಗೂ ಈ ಕ್ಷೇತ್ರದಲ್ಲಿ ಜಾಗವಿದೆ ಎನ್ನುವುದನ್ನು ತೋರಿಸಿದ್ದರು. ಈಗ ಕಣದಲ್ಲಿರುವವರಲ್ಲಿ ದುಷ್ಯಂತ್‌ ಮತ್ತು ಬೃಜೇಂದ್ರ ಜಾಟ್ ಸಮುದಾಯಕ್ಕೆ ಸೇರಿದವರು. ಇನ್ನು ಐಎನ್‌ಎಲ್ಡಿ ಪಕ್ಷದ ವತಿಯಿಂದ ಕಣದಲ್ಲಿರುವ ಸುರೇಶ್‌ ಕೋs್ ಎನ್ನುವ ಅಭ್ಯರ್ಥಿಯೂ ಜಾಟ್ ಸಮುದಾಯದವರು. ರಾಜಕೀಯ ಪಂಡಿತರ ಪ್ರಕಾರ ಬಿಜೆಪಿಯ ಬೃಜೇಂದ್ರ ಅವರು ಜಾಟ್ ಮತಗಳ ಜೊತೆಗೆ, ನಗರ ಮತ್ತು ಜಾಟೇತರ ಮತಗಳನ್ನೂ ಪಡೆಯಬಹುದು ಎನ್ನುತ್ತಿದ್ದಾರೆ. ಈ ಬಾರಿ ಬೃಜೇಂದ್ರ ಅವರೇನಾದರೂ ಗೆದ್ದರೆ ಈ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿದಂತಾಗುತ್ತದೆ. ಬೃಜೇಂದ್ರ ಮತ್ತು ದುಷ್ಯಂತ್‌ ಪರೋಕ್ಷವಾಗಿ ಜಾತಿ ರಾಜಕೀಯ ಮಾಡುತ್ತಿರುವುದು ದುರದೃಷ್ಟದ ವಿಷಯ ಎನ್ನುತ್ತಾರೆ ವಿದೇಶದಿಂದ ಹಿಂದಿರುಗಿರುವ ಭವ್ಯ ಬಿಷ್ಣೋಯ್‌. ಆದರೆ ದುಷ್ಯಂತ್‌ ಮಾತ್ರ ‘ಜನ ನನ್ನನ್ನು ನಾನು ಮಾಡಿದ ಕೆಲಸಗಳಿಂದ ಗುರುತಿಸುತ್ತಾರೆಯೇ ಹೊರತು ನನ್ನ ಜಾತಿಯಿಂದಲ್ಲ’ ಎನ್ನುತ್ತಾರೆ. ಬೃಜೇಂದ್ರ ಅವರು ‘ಜನ ಕೇಂದ್ರ ಮತ್ತು ರಾಜ್ಯ ಬಿಜೆಪಿಯ ಕೆಲಸಗಳನ್ನು ನೋಡಿ ತಮಗೆ ಮತ ನೀಡುತ್ತಾರೆ’ ಎನ್ನುತ್ತಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, ಹಿಸಾರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15.76 ಲಕ್ಷ ಜಾಟ್ ಮತದಾರರಿದ್ದು, ಅವರಲ್ಲಿ 5 ಲಕ್ಷಕ್ಕೂ ಹೆಚ್ಚು ಜಾಟರು(33 ಪ್ರತಿಶತ), 1.80 ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರು (15 ಪ್ರತಿಶತ), 65 ಸಾವಿರ ಪಂಜಾಬಿಗಳು(4 ಪ್ರತಿಶತಕ್ಕೂ), 36 ಸಾವಿರಕ್ಕೂ ಅಧಿಕ ಬಿಷ್ಣೋಯ್‌ಗಳು(2.2 ಪ್ರತಿಶತ) ಮತ್ತು 4ಲಕ್ಷಕ್ಕೂ ಅಧಿಕ ಇತರೆ ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿಯ ಮತದಾರರು(23 ಪ್ರತಿಶತ) ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next