Advertisement
ಹುಲಿಯ ಮುಖದ ಹುಲ್ಲೆ, ಹುಲ್ಲೆಯ ಮುಖದ ಹುಲಿ…’ ಅಲ್ಲಮನ ಈ ವಚನವನ್ನು ಓದುವಾಗಲೆಲ್ಲಾ ನನಗೆ ಹುಲಿಯ ಜಾಗದಲ್ಲಿ ನಗರವೂ ಹುಲ್ಲೆಯ ಜಾಗದಲ್ಲಿ ಹಳ್ಳಿಯೂ ನಿಂತಂತೆ ಕಾಣುತ್ತದೆ. ಮೇಲಿನ ಎರಡಕ್ಕೂ “ನಡು ಒಂದೇ ನೋಡಾ’ ಎನ್ನುತ್ತಾನೆ ಅಲ್ಲಮ. ಈ ನಗರ ಮತ್ತು ಗ್ರಾಮ ಎರಡಕ್ಕೂ ಸೃಷ್ಟಿಸುವ ಮತ್ತು ಜೀರ್ಣಿಸುವ “ನಡು’ ಒಂದೇ. ಇದು ಎಷ್ಟು ಸಹಜವೋ ಅಷ್ಟೇ ಇವೆರಡಕ್ಕೂ ಇರುವುದು ಅಸಹಜ ಮುಖವಾಡಗಳೇ. ಹುಲಿಗೆ ಹುಲ್ಲೆಯ ಮುಖ. ಹುಲ್ಲೆಗೆ ಹುಲಿಯ ಮುಖ! ಎರಡೂ ನಕಲಿಯೇ. ಇವುಗಳನ್ನು ಯಾವ ಕಡೆಯಿಂದ ನೋಡುತ್ತೇವೆ ಮತ್ತು ಎಷ್ಟು ನಂಬುತ್ತೇವೆ ಎಂಬುದರ ಮೇಲೆ ಅವುಗಳ ಶಕ್ತಿ ಅಡಗಿದೆ.
Related Articles
Advertisement
ಹಾಗೆ ನೋಡಿದ್ರೆ ಇಂದು ನಗರದಲ್ಲಿರುವ “ನಾಗರಿಕರು’ ಬೇರೆ ಬೇರೆ ದಾರಿಯಲ್ಲಿ ಇದೇ ಹಳ್ಳಿಯಿಂದ ಬಂದವರೇ. ಈಗ ಇಂಥವರೇ ಇದೇ ಪೇಟೆಯೊಳಗಡೆ ಬಾಳುತ್ತಾ ನಮ್ಮ ಹಳ್ಳಿಯೇ ಚೆನ್ನಾಗಿದೆ ಎನ್ನುವವರು. ಈಗ ಅನಿವಾರ್ಯವಾಗಿ ಬೇರೆಯವರೊಂದಿಗೆ ಅವಲಂಬಿತರಾದವರು. ಹಳ್ಳಿಯಲ್ಲೇ ಹುಟ್ಟಿ ಪೇಟೆಗೆ ಹೋಗಿ ಬದುಕುವ ಈ ಕೊನೆ ತಲೆಮಾರಿನವರ ಧರ್ಮಸಂಕಟ ಹೇಳಲಾಗದು. ಮಹಾನಗರದೊಳಗಡೆಯ ಪುಟ್ಟ ಪುಟ್ಟ ಹಸಿರು ಉದ್ಯಾವನದೊಳಗಡೆಯ ಕಲ್ಲು ಬೆಂಚುಗಳಲ್ಲಿ ಸಂಜೆ ಹೊತ್ತು ಹರಟುವ ಈ ಹಿರಿಜೀವಿಗಳ ಮಾತುಗಳಿಗೊಮ್ಮೆ ಕಿವಿಗೊಡಿ. ಅವರನ್ನೆಲ್ಲಾ ಸಾಕಿ ಪೋಷಿಸಿದ, ಅವರ ಪಾಲಿಗೆ ಯಕ್ಷಲೋಕವೇ ಆಗಿದ್ದ ಗ್ರಾಮಗಳ ಬಗ್ಗೆ ಅವರಿಗೆ ಈಗಲೂ ಇರುವ ಕರುಳ ಸಂಬಂಧ ಅಲೆಲ್ಲಾ ಧ್ವನಿಸುತ್ತದೆ. ತಾವು ನೆಟ್ಟ ಬೀಜ, ಬೆಳೆಸಿದ ತೋಟ, ಕಟ್ಟಿದ ಮನೆ, ಹೊಳೆ, ಗದ್ದೆ-ಬಯಲು ಎಲ್ಲವೂ ಅವರಿಗೆ ನೆನಪಿದೆ. ಅಂಥ ಹಳ್ಳಿ-ಗ್ರಾಮಗಳಿಂದು ಗಾಯಗೊಂಡಿವೆ. ಹೆದ್ದಾರಿ ಬಂದು ಊರು ಎರಡಾಗಿದೆ. ಕೈಗಾರಿಕೆ, ಉದ್ಯಮ ಏನೇನೋ ಬಂದು ಊರು ಬದಲಾದುದು ಎಲ್ಲವೂ ಅವರಿಗೆ ಗೊತ್ತಿದೆ.
ವಿದ್ಯೆ ಪದವಿಯಾಗಿ, ಆ ಪದವಿ ಉದ್ಯೋಗಕ್ಕೆ ದಾರಿಯಾಗಿ, ಹುದ್ದೆ-ನೌಕರಿ ಹಣ ಹೊಂಚಿಕೊಡುವ ವಿಧಾನವಾಗಿ ನಮ್ಮ ಮಕ್ಕಳು ಬೆಳೆಯುವ ಬಗೆಯೇ ಬೇರೆಯಾಗಿದೆ. ಆದರೆ ನಮ್ಮ ನಗರಗಳಿಗೆ ದಿನಾ ತರಕಾರಿ, ನೀರು, ಹಾಲು, ಅನ್ನ ಕೊಡುವ ಗ್ರಾಮಗಳನ್ನು ನಾವೇಕೆ ಮರೆತಿದ್ದೇವೆ? ಹಳ್ಳಿಯೊಳಗೆ ಹೊಸದಾಗಿ ಕೃಷಿಯನ್ನು ಕಟ್ಟಬೇಕಾದ ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು ನಗರದೊಳಗೇ ಹುಟ್ಟಿಕೊಂಡವು. ಹಳ್ಳಿ ಉದ್ಧಾರದ ಗ್ರಾಮೀಣ ಬ್ಯಾಂಕುಗಳು ಪಟ್ಟಣಕ್ಕೇ ಅಂಟಿಕೊಂಡವು. ಹಳ್ಳಿಗಳಿಂದ ನಗರಕ್ಕೆ ಬಂದು ಇದೇ ಕೃಷಿ ವಿಶ್ವವಿದ್ಯಾನಿಲಯಗಳಿಂದ ಕೃಷಿ ಪದವಿ ಪಡೆದ ಹಳ್ಳಿಮಕ್ಕಳು ತಜ್ಞರಾಗಿ ಪೇಟೆಯಲ್ಲೇ ಉಳಿದರು. ಔಷಧಿಯ, ಬೀಜದ ಘಟಕಗಳಲ್ಲಿ ಉದ್ಯೋಗಿಗಳಾದರೇ ಹೊರತು ಗ್ರಾಮಕ್ಕೆ ಮರಳಿ ಕೃಷಿಗೆ ಇಳಿಯಲಿಲ್ಲ. ರೈತರ ಪ್ರಯೋಗ-ಪ್ರಯತ್ನಗಳಿಗೆ ನೆರವಾಗಲಿಲ್ಲ. ಅಪ್ಪನ ದುಡಿಮೆಯನ್ನು ಮುಂದುವರಿಸಲಿಲ್ಲ. ಒಬ್ಬ ಹಜಾರೆ, ಸ್ವಾಮಿನಾಥನ್, ತೇಜಸ್ವಿ , ಕುರಿಯನ್, ನಾರಾಯಣ ರೆಡ್ಡಿ, ಪ್ರಸನ್ನ, ಎ.ಪಿ. ಚಂದ್ರಶೇಖರರಂಥವರ ದಾರಿಯಲ್ಲಿ ಸ್ವಾವಲಂಬಿ ಗ್ರಾಮಗಳನ್ನು ಕಟ್ಟುವ, ಹಳ್ಳಿಯ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಕಂಡುಹಿಡಿಯುವ ಪ್ರಯತ್ನ ಯಾರೂ ಮಾಡಲಿಲ್ಲ.
ಊರು ಕಳಚಿಕೊಂಡ, ಬೇರು ಕಳಚಿಕೊಂಡವರೆಲ್ಲಾ ಬಗೆಬಗೆಯಲ್ಲಿ ಬೆಳೆದರು. ಆದರೆ ಊರು ಮಾತ್ರ ಬೆಳೆಯಲೇ ಇಲ್ಲ. ನಗರಗಳಿಗಿಂತ ಹೆಚ್ಚು ಸಂಬಂಧ-ಸಂವೇದನೆಯ, ಮಾನ-ಮರ್ಯಾದೆಯ ಜಾಗಗಳಾಗಿ ನೆಲಸಂಬಂಧವನ್ನು ಬಳುವಳಿಯಾಗಿ ಪಡೆದ ಹಳ್ಳಿಗಳಿಂದು ವೇಷಾಂತರಕ್ಕೆ ಒಳಗಾಗಿವೆ. ಬಗೆಬಗೆಯ ಮುಖಗಳನ್ನು ಧರಿಸಿವೆ. ಅನ್ನದ ಉತ್ಪಾದಕ, ಕಡಿಮೆ ಬಳಕೆದಾರನಾದ ರೈತ ಯಾವಾಗ ನಗರದ ನಕಲಿಗೆ ಮಾರು ಹೋದನೋ ಸುಖದ ನಂಬಿಕೆಯನ್ನು ಬದಲಾಯಿಸಿಕೊಂಡನೋ ಅಂದೇ ರೈತನಿಗೆ ತನ್ನ ಹುಟ್ಟೂರು-ಉತ್ಪಾದನಾ ನೆಲೆ ಮುಖ್ಯವಾಗಲಿಲ್ಲ. ಭಾರತದ ರಾಜಕಾರಣವೂ ಗ್ರಾಮಗಳನ್ನು, ರೈತಾಪಿಗಳನ್ನು ಮತಬ್ಯಾಂಕುಗಳನ್ನಾಗಿಸಿಕೊಂಡು ಭ್ರಷ್ಟರನ್ನಾಗಿಸಿಕೊಂಡೇ ಬಂತು. ಓದದೇ ಉಳಿದ ಹಳ್ಳಿಮಂದಿ ಮೊನ್ನೆ ಮೊನ್ನೆಯವರೆಗೆ ಜಾತಿ, ಧರ್ಮ, ಮತ ಯಾವುದನ್ನೂ ನೋಡದೆ ಸಹಬಾಳ್ವೆಯಿಂದ ಬದುಕುತ್ತಿದ್ದರು. ರಾಜಕಾರಣ ಶುದ್ಧ ಹಳ್ಳಿಗಳಲ್ಲೂ ಮತೀಯತೆಯ ಅಶುದ್ಧತೆಯನ್ನು ಸುರಿಯಿತು. ಅಧಿಕಾರ ವಿಕೇಂದ್ರಿಕರಣ, ಗ್ರಾಮಾಡಳಿತ ಎಲ್ಲವೂ ಈಗ ರೈತಾಪಿ ನೆಲೆಗಳಿಗೆ ರಾಜಕಾರಣವನ್ನು ತುಂಬಿದೆ. ರೈತರಿಂದಲೇ ಚಳುವಳಿಗಾರರಾದವರು, ಮತ ಪಡೆದು ಜನಪ್ರತಿನಿಧಿಗಳಾದವರು, ಗ್ರಾಮದ ಮಧ್ಯೆಯೇ ಬೆಳೆದು ನಾಯಕರಾದವರು ಗೆದ್ದ ಮೇಲೆ, ಅಧಿಕಾರ ಪಡೆದ ಮೇಲೆ ಹಳ್ಳಿಗಳನ್ನು ಮರೆತಿದ್ದಾರೆ.
ಅಧಿಕಾರ, ಉದ್ಯೋಗ, ಆದಾಯ, ಸೌಲಭ್ಯ ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಗ್ರಾಮದ ಬೇರು ಕಳಚಿ ನಗರಕ್ಕೆ ಹೋಗಿ ಹೋಗಿ ಇನ್ನೂ ವಲಸೆ ಹೋಗಲು ಹಳ್ಳಿಯಲ್ಲಿ ಯಾರೂ ಉಳಿದಿಲ್ಲ ಎನ್ನುವಾಗ “ನಾವಿದ್ದೇವೆ’ ಎಂದು ಗ್ರಾಮಮುಖೀಗಳಾಗುವವರ ಹೊಸ ತಂಡ-ಮನಸ್ಸು ಸಿದ್ಧಗೊಳ್ಳುತ್ತಿರುವುದು ಸಂತಸದ ಸಂಗತಿ. ಲಕ್ಷ ಲಕ್ಷ ವೇತನ ಪಡೆಯುವ ಡಾಕ್ಟರ್-ಟೆಕ್ಕಿಗಳು ನಗರದ ತ್ರಿಶಂಕು ಸ್ಥಿತಿಯಲ್ಲಿ ಬಸವಳಿದು ಹಿರಿಯರ ಪಾಳುಭೂಮಿಗೆ ವಾಪಾಸಾಗುತ್ತಿರುವುದು, ಗಡಿಗುರುತಿಸಿ ಬೇಲಿ ಹಾಕಿ ಹೊಸದಾಗಿ ಬೀಜ ಬಿತ್ತುತ್ತಿರುವ ಸರಳ ಬದುಕಿನ ಪ್ರತಿನಿಧಿಗಳು ಈಗ ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಒಪ್ಪಿ ರಾಜೀನಾಮೆ ಬಿಸಾಡಿ ಕೆಸರಿಗೆ ಇಳಿದ ಯುವ ಜೋಡಿಗಳು ಅನೇಕ. ವ್ಯವಸ್ಥೆಯನ್ನು ತಿರುಗುಮುರುಗುಗೊಳಿಸಿದ ನಗರದಿಂದ ಗ್ರಾಮಕ್ಕೆ ವಲಸೆ ಆರಂಭಿಸಿದ ಇಂಥವರ ಮನಃಶಾಸ್ತ್ರ ಅರ್ಥಶಾಸ್ತ್ರ ಅಧ್ಯಯನಯೋಗ್ಯ ಮತ್ತು ಅಭಿನಂದನೀಯ.
ನರೇಂದ್ರ ರೈ ದೇರ್ಲ