Advertisement

ಪೆರೋಲ್‌ ಮೇಲೆ ಬಂದಿದ್ದ ಕೈದಿ ಮಗನ ಜತೆ ಆತ್ಮಹತ್ಯೆ

12:23 PM Mar 13, 2017 | |

ಬೆಂಗಳೂರು: ಕೊಲೆಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪೆರೋಲ್‌ ಮೇಲೆ ಹೊರಗೆ ಬಂದು ತನ್ನ ಮಗನ ಜತೆ ನೇಣಿಗೆ ಶರಣಾಗಿರುವ ಘಟನೆ ಭಾನುವಾರ ಬಾಗಲಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Advertisement

ಶೆಟ್ಟಿಹಳ್ಳಿಯ ಶ್ರೀಧರ್‌ಕುಮಾರ್‌(40) ಹಾಗೂ ಆತನ ಪುತ್ರ ಶ್ರೀವಿಷ್ಣು(13) ಮೃತಪಟ್ಟವರು. ಶನಿವಾರ ರಾತ್ರಿ ಪತ್ನಿ ಮತ್ತು ಪುತ್ರಿಯನ್ನು ಹತ್ತಿರದಲ್ಲೇ ಇದ್ದ ಪೋಷಕರ ಮನೆಗೆ ಕಳುಹಿಸಿದ್ದ ಶ್ರೀಧರ್‌ ಭಾನುವಾರ ಬೆಳಗ್ಗೆ ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ಅಕ್ಕನ ಗಂಡನನ್ನು ಕೊಲೆಗೈದ ಆರೋಪದ ಮೇಲೆ ಶ್ರೀಧರ್‌ಗೆ ಒಂಬತ್ತು ವರ್ಷ ಹಿಂದೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆತ ಎಂಟು ವರ್ಷ ಜೈಲು ಶಿಕ್ಷೆ ಪೂರೈಸಿದ್ದ. ಪ್ರತಿ ವರ್ಷ ಪೆರೋಲ್‌ ಮೇಲೆ ಹೊರಬರುತ್ತಿದ್ದ ಶ್ರೀಧರ್‌ ಅದೆರೀತಿ ಈ ಬಾರಿ ಮಾ. 8ರಂದು ಪೆರೋಲ್‌ ಮೇಲೆ ಮನೆಗೆ ಬಂದಿದ್ದರು. 

ಶನಿವಾರ ರಾತ್ರಿ ಊಟವಾದ ಬಳಿಕ ಪತ್ನಿ ಮತ್ತು ಮಗಳು ಪಕ್ಕದಲ್ಲೇ ಇದ್ದ ಪೋಷಕರ ಮನೆಗೆ ಹೋಗಿದ್ದರು. ಆದರೆ, ಶ್ರೀಧರ್‌ ಅಲ್ಲಿಗೆ ಬರಲು ನಿರಾಕರಿಸಿ ಮನೆಯಲ್ಲೇ ಉಳಿದುಕೊಳ್ಳುವುದಾಗಿ ತಿಳಿಸಿದ್ದರು. ಅವರ ಪುತ್ರ ಶ್ರೀವಿಷ್ಣು ಕೂಡ ತಾನು ತಂದೆಯ ಜತೆಗೆ ಇಲ್ಲೇ ಮಲಗುತ್ತೇನೆ ಎಂದು ಹೇಳಿ ತಾಯಿ ಮತ್ತು ಸಹೋದರಿಯನ್ನು ಕಳುಹಿಸಿಕೊಟ್ಟಿದ್ದ.

ತಿಂಡಿಗೆ ಬರುತ್ತೇನೆ ಎಂದವರು ಬರಲೇ ಇಲ್ಲ!: ಭಾನುವಾರ ಬೆಳಗ್ಗೆ 7-30ರ ಸುಮಾರಿಗೆ ಶ್ರೀಧರ್‌ ಅವರಿಗೆ ಕರೆ ಮಾಡಿದ ಪತ್ನಿ, ತಿಂಡಿಗೆ ಬರುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆತ ಸ್ವಲ್ಪ ಹೊತ್ತಿನಲ್ಲೇ ಬರುತ್ತೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ನಂತರ ಮಗನ ಜತೆ ಸ್ನಾನ ಮಾಡಿ ದೇವರ ಪೂಜೆ ಮುಗಿಸಿದ ಶ್ರೀಧರ್‌ ಬಳಿಕ ಪುತ್ರನ ಜತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಇತ್ತ ಎಷ್ಟು ಹೊತ್ತಾದರೂ ಪತಿ ಮತ್ತು ಪುತ್ರ ತಿಂಡಿಗೆ ಬಾರದೇ ಇದ್ದ ಕಾರಣ ಪತ್ನಿ ಮತ್ತೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಹೀಗಾಗಿ ಬೆಳಗ್ಗೆ 9.30ರ ಸುಮಾರಿಗೆ ಆಕೆ ತನ್ನ ತಂದೆ, ತಾಯಿ ಮತ್ತು ಪುತ್ರಿಯೊಂದಿಗೆ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್‌ ಆಗಿತ್ತು. ಕೂಡಲೇ ಬಾಗಿಲು ತೆರೆದು ನೋಡಿದಾಗ ತಂದೆ ಮಗ ಇಬ್ಬರೂ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದರು ಎಂದು ತಿಳಿದುಬಂದಿದೆ.

ಖನ್ನತೆಯಿಂದ ಆತ್ಮಹತ್ಯೆ!: ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾರಣಕ್ಕೆ ಬೇಸರಗೊಂಡಿದ್ದ ಶ್ರೀಧರ್‌ ಖನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಶ್ರೀಧರ್‌ ಅವರಿಗೆ ತಮ್ಮ ಪುತ್ರ ಶ್ರೀವಿಷ್ಣು ಮೇಲೆ ಹೆಚ್ಚು ಪ್ರೀತಿ ಇತ್ತು. ಹೀಗಾಗಿ ಇಬ್ಬರೂ ಜತೆಗೆ ಸಾಯೋಣ ಎಂಬ ನಿರ್ಧಾರಕ್ಕೆ ಬಂದಿರಬಹುದು. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಸಿಕ್ಕಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next