Advertisement

ಅವನ ಉಪದೇಶ, ಬದುಕಿನ ತಿರುವು

06:40 PM Oct 14, 2019 | mahesh |

ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. “ಇವೆಲ್ಲ ಮಾಮೂಲು ಗುರು’ ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. “ಅವತ್ತೂಂದು ದಿನ ಕಾಲ್‌ ಮಾಡಿ, ನಿನಗೊಂದು ಕೆಲಸ ಅಂತಾ ಬೇಕು ಅಲ್ವಾ? ನಾಳೆ ಬೆಳಗ್ಗೆ ನಮ್‌ ಆಫೀಸ್‌ ಹತ್ರ ಬಾರೋ.. ಕೆಲಸಾ ಫಿಕ್ಸು..’ ಅಂದ. ಏಟಿಎಂ ಹೊರಗೆ ನಿಂತು ಕ್ರೆಡಿಟ್‌ ಕಾರ್ಡ್‌ ಮಾರುವ ಕೆಲಸ ಅದು. ಅವನ ಬಾಸು ನನ್ನ ನೋಡುತ್ತಲೇ, “ಇವನ್ಯಾರೋ ನರಪೇತಲ ನಾರಾಯಣ.. ಇವನೆಂಗೊ ಕ್ರೆಡಿಟ್‌ ಕಾರ್ಡ್‌ ಮಾರ್ತಾನೆ. ಆಗಲ್ಲ ಹೋಗೋ..’ ಅಂದು ಬಿಟ್ಟ.

Advertisement

2008 ನೇ ಇಸ್ವಿ. ನಾನಾಗ ಕೆಲಸ ಹುಡುಕುತ್ತಿದ್ದ ಸಮಯ. ಒಂದು ದೊಡ್ಡ ಕಂಪನಿಗೆ ಇಂಟರ್ವ್ಯೂಗೆ ಹೋಗಿದ್ದ ಸಂದರ್ಭ. ನನಗೆ ಆಗ ಉದ್ಯೋಗದ ಸಂದರ್ಶನ ಅಂದರೆ ಏನೋ ಒಂದು ರೀತಿಯ ಭಯ . ಏಕೆಂದರೆ, ಆ ವೇಳೆಗೆ ಇಪ್ಪತ್ತುಕ್ಕೂ ಹೆಚ್ಚುವ ಇಂಟರ್ವ್ಯೂ ಮುಗಿಸಿ, ಕೆಲಸ ಸಿಗದೆ ತಿರಸ್ಕಾರವೆಂಬುದು ಅಭ್ಯಾಸವಾಗಿತ್ತು. ಆವತ್ತು ಮಧ್ಯಾಹ್ನ ಒಂದೂವರೆಗೆ ಹೋದವನು ಸಂಜೆ ಐದರವರೆಗೆ ಕಾಯುತ್ತಾ ಕುಳಿತಿದ್ದೆ.

ಬೆಳಗ್ಗೆ ಹಾಸ್ಟೆಲ್‌ನಿಂದ ಹೊರಡುವಾಗ ಪುಳಿಯೊಗರೆ ತಿಂದಿದ್ದು ಬಿಟ್ಟರೆ, ಏನೂ ತಿನ್ನದೇ ಹೊಟ್ಟೆ ಚುರುಗುಡುತ್ತಿತ್ತು. ನನ್ನ ಪರ್ಸ್‌ ಖಾಲಿಯಿತ್ತು! ಅಷ್ಟೊತ್ತಿಗೆ ಅವನು ಬಂದ. ನನ್ನ ಪಕ್ಕ ಕುಳಿತ. “ಉಫ್ ಏನು ಟ್ರಾಫಿಕ್‌ ಗುರು..!’ ಅಂದ ನಾನು ಮಾತನಾಡಲಿಲ್ಲ.

ಕುಳಿತು ಎರಡೇ ನಿಮಿಷಕ್ಕೆ ಬ್ಯಾಗ್‌ನಿಂದ ಅವನು ಬಾಕ್ಸ್‌ ತೆಗೆದು ಚಪಾತಿ ತಿನ್ನಲು ಶುರು ಮಾಡಿದ. ನಾನು ನೋಡಲಾಗದೆ ಮುಖ ತಿರುಗಿಸಿಕೊಂಡೆ. ಒಂದು ಕ್ಷಣದಲ್ಲಿ ನನ್ನ ಭುಜ ತಟ್ಟಿದಂತಾಯ್ತು, ತಿರುಗಿ ನೋಡಿದರೆ, “ಚಪಾತಿ ಬೇಕಾ ಗುರು..?’ ಎಂದು ಬಿಟ್ಟ. ಬೇಡವೆನ್ನಲು ಬಾಯಿ ಬಂದೀತೆ?

ಹಾಗೆ, ನಮ್ಮ ಫ್ರೆಂಡ್‌ಶಿಪ್‌ ಶುರುವಾಯಿತು. ಅವನು ಒಂದು ಪ್ರೈವೇಟ್‌ ಬ್ಯಾಂಕಿನ ಕ್ರೆಡಿಟ್‌ ಕಾರ್ಡ್‌ ಸೇಲ್‌ ಮಾಡುವ ಕೆಲಸದಲ್ಲಿದ್ದ. ಪರಿಚಯವಾಗಿ ಅರ್ಧ ಘಂಟೆಯಷ್ಟೇ ತನ್ನ ಕಥೆಯನ್ನೆಲ್ಲ ಹೇಳಿಕೊಂಡುಬಿಟ್ಟ. “ಕೈಲಿ ಒಂದು ಕೆಲಸ ಅಂತಾ ಇದ್ರೆ ಕಾನ್ಫಿಡೆನ್ಸ್‌ ಲೆವೆಲ್ಲೇ ಬೇರೆ ಮಗ..’ ಎಂದು ಗುರುಗಳಂತೆ ಪಾಠ ಮಾಡಿದ. ಆ ಉದ್ಯೋಗ ಪರೀಕ್ಷೆಯಲ್ಲಿ ಇಬ್ಬರೂ ಫೇಲ್‌ ಆದೆವು. ನನ್ನೊಳಗಿನ ಕಾನ್ಫಿಡೆನ್ಸ್‌ ಇನ್ನೊಂದಿಂಚು ಕುಸಿಯಿತು!

Advertisement

ಮುಂದೆ ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. “ಇವೆಲ್ಲ ಮಾಮೂಲು ಗುರು’ ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ.

“ಅವತ್ತೂಂದು ದಿನ ಕಾಲ್‌ ಮಾಡಿ, ನಿನಗೊಂದು ಕೆಲಸ ಅಂತಾ ಬೇಕು ಅಲ್ವಾ? ನಾಳೆ ಬೆಳಗ್ಗೆ ನಮ್‌ ಆಫೀಸ್‌ ಹತ್ರ ಬಾರೋ.. ಕೆಲಸಾ ಫಿಕ್ಸು..’ ಅಂದ.

ಏಟಿಎಂ ಹೊರಗೆ ನಿಂತು ಕ್ರೆಡಿಟ್‌ ಕಾರ್ಡ್‌ ಮಾರುವ ಕೆಲಸ ಅದು. ಅವನ ಬಾಸು ನನ್ನ ನೋಡುತ್ತಲೇ, “ಇವನ್ಯಾರೋ ನರಪೇತಲ ನಾರಾಯಣ.. ಇವನೆಂಗೊ ಕ್ರೆಡಿಟ್‌ ಕಾರ್ಡ್‌ ಮಾರ್ತಾನೆ. ಆಗಲ್ಲ ಹೋಗೋ..’ ಅಂದು ಬಿಟ್ಟ.

ನನ್ನ ಫ್ರೆಂಡು, ಅವನ ಚೇಂಬರ್‌ ಒಳಗೆ ಹೋಗಿ ಅದೇನು ಮಾತಾಡಿದನೋ ಗೊತ್ತಿಲ್ಲ, ಬಾಸು ಹೊರಗೆ ಬಂದು ಡಾಕ್ಯುಮೆಂಟ್‌ ಎಲ್ಲ ತಗೊಂಡು ನಾಳೆ ಬಾರೋ.. ಎಂದು ನಡೆದ. ನಾನು ಆಕಾಶದಲ್ಲಿ ತೇಲಿ ಹೋದೆ. ಯಾವ ಕೆಲಸವಾದರೇನು? ಒಂದು ಕೆಲಸ ಸಿಕ್ಕಿತಲ್ಲ! ಆ ಕ್ಷಣಕ್ಕೆ ಅಷ್ಟು ಸಾಕಿತ್ತು.

ಕೆಲವು ಕಾರಣಗಳಿಂದ ನಾನು ಆ ಕೆಲಸಕ್ಕೆ ಸೇರಲಿಲ್ಲ. ಒಮ್ಮೆ ಫೋನು ಹಾಳಾಗಿ ಹೋಯಿತು. ಅವನ ನಂಬರ್‌ ಕಳೆದುಹೋಯಿತು. ಆದರೆ ಅವನು ನನಗೆ ಹೇಳಿಕೊಟ್ಟ ಪಾಠ ಮತ್ತು ತತ್ವಗಳಿದೆಯಲ್ಲ, ಅದು ಜೀವನಕ್ಕೆ ಸಾಕಾಗುವಷ್ಟು. ಕಷ್ಟ ನಮಗೂ ಇರುತ್ತದೆ. ಬೇರೆಯವರಿಗೂ ಬರುತ್ತದೆ. ಒಬ್ಬರದು ಜಾಸ್ತಿ, ಇನ್ನೊಬ್ಬರಿಗೆ ಕಡಿಮೆ. ಆದರೆ ನಾವು ಇನ್ನೊಬ್ಬರಿಗೆ ಏನಾದರೂ ಸಹಾಯ ಮಾಡಲು ಸಾಧ್ಯವಿದ್ದರೆ ಮಾಡಿಬಿಡಬೇಕು. ಸಂದರ್ಶನಕ್ಕೆ ಹೊರಟ ಹುಡುಗರನ್ನು ಕಂಡರೆ ಇವೆಲ್ಲ ನೆನಪಾಗಿ ನನ್ನ ಗೆಳೆಯ ಕೂಡು ಕಣ್ಣೆದುರಿಗೆ ಬರುತ್ತಾನೆ. ಅವನ ಹೆಸರು ನೆನಪಲ್ಲಿ ಇಲ್ಲದೆ ಇದ್ದರೂ, ಅವನ ಮುಖ ಕಣ್ಣಲ್ಲಿ ಅಚ್ಚೊತ್ತಿದೆ.

ಸುಬ್ರಮಣ್ಯ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next