ನನಗೆ ನೂರಾರು ಗುರುಗಳಿದ್ದಾರೆ. ಹೈಸ್ಕೂಲ್‌ನಲ್ಲಿದ್ದಾಗ ನನಗೆ ನಾಟಕ ಕಲಿಸಿದವರು ಪೂರಿಗಾಲಿ ಸಿದ್ಧಪ್ಪ. ಅವರು ಸರ್ಕಾರಿ ಶಾಲೆಯಲ್ಲಿ ನಾಟಕದ ಮೇಷ್ಟ್ರಾಗಿದ್ದರು. ಬಿಳಿ ಪಂಚೆ, ಕೈಯಲ್ಲೊಂದು ಕೋಲು, ನಶ್ಯದ ಡಬ್ಬ… ಇದು ಅವರ ಚಿತ್ರಣ. ನಾನು ಏಕಪಾತ್ರಾಭಿನಯ ಮಾಡಿದಾಗ ನನ್ನ ನಟನೆ ನೋಡಿ ತುಂಬಾ ಸಂತೋಷಪಡ್ತಿದ್ರು. ಎಲ್ಲಾದರೂ ಸಿನಿಮಾ ಪೋಸ್ಟರ್ ಇದ್ದರೆ ಅದನ್ನು ತೋರಿಸಿ “ಮುಂದೊಂದು ದಿನ ನೀನೂ ಪೋಸ್ಟರ್‌ನಲ್ಲಿ ಬರ್ತಿಯಾ. ನೀನು ಇದೇ ರೀತಿ ಸಾಧನೆ ಮಾಡತೀಯಾ’ ಅಂದಿದ್ರು. ಅಲ್ಲಿಂದಲೇ ನನಗೆ ನಟನೆ ಕಡೆ ಹೆಚ್ಚು ಒಲವು ಮೂಡಿದ್ದು.
ನನಗೆ ಶಾಸ್ತ್ರೋಕ್ತವಾಗಿ ರಂಗಭೂಮಿ ಕಲಿಸಿದವರೆಂದರೆ ಅಶೋಕ ಬಾದರದಿನ್ನಿ. ಅವರು ನಡೆಸಿದ 21 ದಿನಗಳ ರಂಗ ತರಬೇತಿಯಲ್ಲಿ ಭಾಗವಹಿಸಿದ್ದೆ. ನಂತರ ನನ್ನ ಜೀವನ ಪ್ರಜ್ಞೆ, ಧೋರಣೆ ಬದಲಿಸಿದ್ದು ನೀನಾಸಂ. ಕೆ.ವಿ. ಸುಬ್ಬಣ್ಣ, ಚಿದಂಬರರಾವ್ ಜಂಬೆ, ಪ್ರಸನ್ನ, ಅಲ್ಲಿನ ಗುರುಗಳು. ಅವರಿಂದ ಕಲಿತದ್ದು ಬಹಳ. ನೀನಾಸಂನಲ್ಲೇ ನನಗೆ ಬಿ.ವಿ. ಕಾರಂತರ ಪರಿಚಯವಾಯ್ತು. ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರ ರೀತಿ, ರಂಗಭೂಮಿ ಮೂಲಕ ಜಗತ್ತನ್ನು ಗ್ರಹಿಸಿದ ಪರಿ ನನಗೆ ಸದಾ ಮಾದರಿ. ಕೆ.ವಿ. ಸುಬ್ಬಣ್ಣ ಮತ್ತು ಬಿ.ವಿ. ಕಾರಂತರು ನನ್ನ ಜೀವನದ ರಂಗ ದಾರ್ಶನಿಕರು.
ಅರಿತಿದ್ದು , ಅಳವಡಿಸಿದ್ದು…
ಬಿ.ವಿ. ಕಾರಂತರು ಎಷ್ಟೇ ಕ್ಲಿಷ್ಟ ವಿಷಯವನ್ನೂ ಸರಳವಾಗಿ ಹೇಳಬಲ್ಲ ಚಾಣಾಕ್ಷರು. ಅವರ ವಿಚಾರ-ವರ್ತನೆ, ಪಾಠ ಮಾಡುವ ಶೈಲಿ, ದೂರದರ್ಶಿತ್ವ, ಇನ್ನೊಬ್ಬ ನಟನನ್ನು ತಯಾರು ಮಾಡುವ ರೀತಿ…ಹೀಗೆ ಅವರಿಂದ ಕಲಿತದ್ದು ಬಹಳ. ಅವರ ಸಂಘಟನಾತ್ಮಕ ಮನೋಭಾವವನ್ನು ನನ್ನಲ್ಲೂ ಅಳವಡಿಸಿಕೊಂಡಿದ್ದೇನೆ.
ಅಮೆರಿಕದಲ್ಲಿ ನಡೆದ ಘಟನೆ, ಅಲ್ಲಿ ಕಾರಂತರು ಕೈಯಲ್ಲಿ ಹಣ ಎಣಿಸುತ್ತಿದ್ದರು. ಕೂಡಲೇ ಒಬ್ಬ ಕಳ್ಳ ಹಣ ಕಸಿದುಕೊಂಡು ಜೋರಾಗಿ ಓಡಿದ. ನಾವೆಲ್ಲ ಕಿರುಚಿ, ಹಿಡಿಯಲು ಪ್ರಯತ್ನಿಸಿ, ಆತಂಕಗೊಂಡಿದ್ವಿ. ಆದರೆ ಕಾರಂತರು ಆತ ಓಡುವುದನ್ನು ನೋಡಿ, “ಆತನಿಗೆ ಹಸಿವಾಗಿದೆ. ಹಸಿವಿನ ಶಕ್ತಿ ಅವನನ್ನು ಅಷ್ಟು ವೇಗವಾಗಿ ಓಡಿಸುತ್ತಿದೆ. ಆತ ಒಲಿಂಪಿಕ್ಸ್‌ನಲ್ಲಿ ಓಡಿದ್ದರೆ ಪದಕ ಗೆಲ್ಲುತ್ತಿದ್ದನೇನೋ?’ ಎಂದರು.
ಹೆಸರಿಸಲು ಇನ್ನೂ ಅನೇಕ ಗುರುಗಳಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್. ನಾಗಾಭರಣ, ಆರ್.ಎನ್. ಜಯ ಗೋಪಾಲ್ ಜೊತೆಗೆ ನನ್ನನ್ನು ಗುರುವಾಗಿಸಿದ ನನ್ನ ಶಿಷ್ಯರು… ಅವರೂ ನನಗೆ ಗುರುಗಳೇ. ಅವರಿಂದಲೇ ನನ್ನ ಸಾಮರ್ಥ್ಯ, ಚಿಂತನಶೀಲತೆ ಹೆಚ್ಚಾಗಿದೆ. ನನ್ನನ್ನು ಅವಮಾನಿಸಿದ, ಟೀಕಿಸಿದ ಸಹೋದ್ಯೋಗಿಗಳು, ತೊಂದರೆ ಕೊಟ್ಟವರನ್ನು ಮರೆಯಲಾರೆ. ಅವರು ನನ್ನಲ್ಲಿ ಕಿಚ್ಚು ಹಚ್ಚದಿದ್ದರೆ ನಾನು ಇಷ್ಟು ಸಾಧನೆ ಮಾಡೋಕೆ ಆಗ್ತಿರಲಿಲ್ಲ. ಹಾಗಾಗಿ ಅವರೂ ಗುರುಗಳೇ.
-ಮಂಡ್ಯ ರಮೇಶ್, ರಂಗಕರ್ಮಿ, ನಟ