ಈ ಅಂಕಣವು ಹಲವು ರೀತಿಯಲ್ಲಿ ಬೆಳೆ ಗಾರರಿಗೂ ಮತ್ತು ಗ್ರಾಹಕರಿಗೂ ಸಂಪರ್ಕ ಕಲ್ಪಿಸುತ್ತಿದೆ. ಇದುವರೆಗೆ ಬೆಳೆಗಾರ ನಿರ್ದಿಷ್ಟ ಗ್ರಾಹಕ, ವ್ಯಾಪಾರಿಯನ್ನೇ ಅವಲಂಬಿಸಬೇಕಿತ್ತು. ಆದರೆ ಈಗ ಸಾಕಷ್ಟು ಗ್ರಾಹಕರು ದೂರವಾಣಿ ಕರೆ ಮಾಡುತ್ತಿರುವುದರಿಂದ ರೈತರಿಗೆ ಆಯ್ಕೆಗೆ ಅವಕಾಶ ಸಿಗುತ್ತಿದೆ.
Advertisement
ಮಂಗಳೂರಿನ ಮೇರಿಹಿಲ್ ಸಚಿನ್ ಖಾಸಗಿ ಕಂಪೆನಿ ಉದ್ಯೋಗಿ. ತಮ್ಮ ಮನೆಯ ಸುತ್ತಲೂ 60 ತೆಂಗಿನಮರಗಳನ್ನು ಹಾಕಿಕೊಂಡು, ಪ್ರತಿ ವರ್ಷವೂ ತೆಂಗಿನಕಾಯಿಗಳನ್ನು ಹತ್ತಿರದ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಈ ಬಾರಿ ಲಾಕ್‌ಡೌನ್ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಸುಮಾರು 1,600 ತೆಂಗಿನ ಕಾಯಿಗಳನ್ನು ಮಾರುವ ಬಗ್ಗೆ ಯೋಚಿಸುತ್ತಿದ್ದರು. ಈ ಸಂದರ್ಭದಲ್ಲಿ ರೈತಸೇತುವಿಗೆ ಮಾಹಿತಿ ಕಳಿಸಿ ಎ. 9 ರಂದು ಪ್ರಕಟವಾಯಿತು. ಆ ಬೆನ್ನಲ್ಲೆ ಹಲವಾರು ಮಂದಿ ದೂರವಾಣಿ ಕರೆ ಮಾಡಿ ಚರ್ಚಿಸಿ ಖರೀದಿಸಿ ದರು. ಇದುವರೆಗೆ ಸುಮಾರು 800ಕ್ಕೂ ಹೆಚ್ಚು ತೆಂಗಿನಕಾಯಿಗಳು ಮಾರಾಟವಾಗಿವೆ.
ಸಚಿನ್ ಅವರಿಗೆ ಮಾಹಿತಿಗಾಗಿ ವಿವಿಧ ಭಾಗಗಳಿಂದ ಕರೆಗಳು ಬರುತ್ತಿವೆ. ಅಲ್ಲದೆ, ಹತ್ತಿರದ ಮನೆ ಮಂದಿಯೂ ತೆಂಗಿನಕಾಯಿ ಖರೀದಿ ಮಾಡುತ್ತಿದ್ದಾರೆ. ತೆಂಗಿನಕಾಯಿಯನ್ನು ಗ್ರಾಹಕರ ಆಯ್ಕೆಯಂತೆ ಸುಲಿದು ಮತ್ತು ಸುಲಿಯದೆ ನೀಡುತ್ತಿದ್ದಾರೆ. ಕೈಹಿಡಿದ ಗ್ರಾಹಕರು
ಇದೇ ರೀತಿಯ ಅನುಭವ ಉಡುಪಿ ಕಿನ್ನಿಮೂಲ್ಕಿಯ ಎ. ಡಿ’ಸಿಲ್ವಾ ಅವರದ್ದು. ತಮ್ಮ 25 ಸೆಂಟ್ಸ್ ಜಾಗದಲ್ಲಿ 30ರಿಂದ 40 ತೆಂಗಿನ ಮರ ಗಳನ್ನು ಹಾಕಿಕೊಂಡಿರುವ ಇವರು, ನಗರದ ಸಗಟು ವ್ಯಾಪಾರಿಗಳಿಗೆ ಮಾರುತ್ತಿದ್ದರು. ಲಾಕ್‌ಡೌನ್ ಕಾರಣದಿಂದ ಈ ಬಾರಿ ಅದು ಸಾಧ್ಯವಾಗಲಿಲ್ಲ. ಸುಮಾರು 400 ತೆಂಗಿನಕಾಯಿಗಳನ್ನು ಮಾರಾಟ ಮಾಡಲು ಮಾರ್ಗ ಹುಡುಕುತ್ತಿದ್ದರು. ಯಾವುದಕ್ಕೂ ಇರಲಿ ಎಂದು ರೈತಸೇತು ಅಂಕಣಕ್ಕೆ ಮಾಹಿತಿ ಕಳಿಸಿದರು. ಅದು ಎ. 12ರಂದು ಪ್ರಕಟವಾಯಿತು. ಪ್ರಕಟವಾದ ಬೆನ್ನಲ್ಲೇ ಹಲವಾರು ದೂರವಾಣಿ ಕರೆಗಳು ಬಂದವು. ಹಿರಿಯಡ್ಕದ ಒರ್ವ ಗ್ರಾಹಕರು ಎಲ್ಲ ತೆಂಗಿನಕಾಯಿಗಳನ್ನು ಖರೀದಿಸಿದ್ದಾರೆ.
Related Articles
ನನಗೆ ಇದರಿಂದ ಅನುಕೂಲವಾಗಿದೆ. ಹಿಂದಿಗಿಂತ ಹೆಚ್ಚಿನ ದರ ಸಿಕ್ಕಿದೆ. 50ಕ್ಕೂ ಹೆಚ್ಚು ಮಂದಿ ಕರೆಮಾಡಿ ವಿಚಾರಿಸಿದ್ದರು. ರೈತಸೇತು ಅಂಕಣದಿಂದ ತುಂಬಾ ಸಹಾಯವಾಗಿದ್ದು, ಬೆಳೆಗಾರರು ತಮ್ಮ ಬೆಳೆಯ ಮೊತ್ತವನ್ನು ನಿಗದಿ ಮಾಡಲು ಸಾಧ್ಯವಾಗಲಿದೆ.
-ಎ. ಡಿ’ಸಿಲ್ವಾ ತೆಂಗು ಬೆಳೆಗಾರರು
Advertisement
ಮತ್ತಷ್ಟು ಬೇಡಿಕೆತೆಂಗಿನಕಾಯಿಗಳನ್ನು ಹೇಗೆ ಮಾರಾಟ ಮಾಡುವುದೆಂಬ ಯೋಚನೆಯಲ್ಲಿದ್ದೆ. ಅದು ಬಗೆಹರಿದಿದೆ. ರೈತಸೇತು ಅಂಕಣದಿಂದ ಅನುಕೂಲವಾಗಿದ್ದು, ಶೇ. 50ರಷ್ಟು ತೆಂಗಿನಕಾಯಿ ಮಾರಾಟವಾಗಿದೆ. ಮತ್ತಷ್ಟು ಬೇಡಿಕೆ ಬರುತ್ತಿದೆ.
-ಸಚಿನ್ ತೆಂಗು ಬೆಳೆಗಾರರು ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ. ವಾಟ್ಸಪ್ ಸಂಖ್ಯೆ : 76187 74529