ಹಿರಿಯೂರು: ಸಂಗೀತ ಮನುಷ್ಯನ ನೋವು, ಸಂಕಟ ವೇದನೆಯನ್ನು ದೂರಗೊಳಿಸಿ ಶಾಂತಿ, ಸಹನೆ, ತಾಳ್ಮೆ, ನೆಮ್ಮದಿ ನೀಡುವ ಮೂಲಕ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಲು ಸಹಕಾರಿ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ ಹೇಳಿದರು.
ನಗರದ ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಮತ್ತು ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತಕ್ಕೆ ರೋಗವನ್ನು ನಿವಾರಿಸುವ ಹಾಗೂ ಮಳೆಯನ್ನು ತರಿಸುವ ಶಕ್ತಿ ಇದೆ. ಎಂಟನೇ ಶತಮಾನದಲ್ಲಿ ಮಾತಂಗ ಮುನಿ ಸಂಗೀತಕ್ಕೆ ನೂತನವಾಗಿ ರಾಗ ಮತ್ತು ತಾಳಗಳನ್ನು ನೀಡಿದರು. ಅವುಗಳ ಆಧಾರದ ಮೇಲೆ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ರೂಪುಗೊಂಡಿದೆ. ರಾಜ್ಯದ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳು, ಮೊರಾರ್ಜಿ ದೇಸಾಯಿ, ಕಸ್ತೂರಿಬಾ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಗ ಸಂಗೀತಕ್ಕೆ ಉತ್ತೇಜನ ದೊರೆಯಲು ಸಾಧ್ಯ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲ ಸಂಗೀತ ವಿದ್ವಾನ್ ಆರ್. ತಿಪ್ಪೇಸ್ವಾಮಿ ಮಾತನಾಡಿ, ಸಂಗೀತ ಮನುಷ್ಯರಿಗೆ ಭಕ್ತಿ ಮಾರ್ಗ ತೋರಿಸಿ ಉತ್ತಮ ನಡೆ-ನುಡಿ, ರೀತಿ-ನೀತಿಗಳನ್ನು ಕಲಿಸುತ್ತದೆ. ಅಲ್ಲದೆ ಪಶು, ಪಕ್ಷಿ, ಪ್ರಾಣಿಗಳಲ್ಲೂ ಸಂತೋಷವನ್ನುಂಟು ಮಾಡುತ್ತದೆ. ಆಸ್ತಿ-ಅಂತಸ್ತು ಮನುಷ್ಯನಿಗೆ ಗೌರವ ತಂದುಕೊಟ್ಟರೆ, ಸಂಗೀತ ಉತ್ಸಾಹ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖಂಡ ಎಂ. ರವೀಂದ್ರನಾಥ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ಲಿಂಗಪ್ಪ, ಕಾರ್ಯದರ್ಶಿ ಜೆ. ನಿಜಲಿಂಗಪ್ಪ, ವೆಂಕಟೇಶ್, ಬಸವರಾಜ್, ಜಗದಂಬಾ, ಜ್ಯೋತಿ, ಪಲ್ಲವಿ, ಶ್ರುತಿ, ಉಮಾ, ಶ್ವೇತಾ, ಧೃತಿ ಮತ್ತಿತರರು ಭಾಗವಹಿಸಿದ್ದರು.