ಹಿರಿಯೂರು: ಫೆಬ್ರವರಿ ಎರಡನೇ ವಾರದಲ್ಲಿ ಅಂದರೆ ಫೆ. 13ರಿಂದ ಮಾರ್ಚ್ 25 ದವರೆಗೆ ಅಂದರೆ ಯುಗಾದಿ ಹಬ್ಬದವರೆಗೆ ವಾಣಿವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶದ ನಾಲೆಗೆ ನೀರು ಹರಿಸಬೇಕು ಎಂದು ವಾಣಿವಿಲಾಸಸಾಗರ ಹೋರಾಟ ಸಮಿತಿ ಮುಖಂಡ ಕಸವನಹಳ್ಳಿ ರಮೇಶ್ ಜಿಲ್ಲಾಆಡಳಿತವನ್ನು ಒತ್ತಾಯಿಸಿದರು.
ನಗರದ ತೇರುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಣಿವಿಲಾಸ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ನಾವು ಇಷ್ಟು ಒತ್ತಡ ಮಾಡುತ್ತಿದ್ದರೂ ಇನ್ನೂ ವಾಣಿವಿಲಾಸ ನಾಲೆಗಳ ದುರಸ್ತಿ ಕಾರ್ಯ ಮುಗಿದಿಲ್ಲ. ತಾಲೂಕಿನ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ನಾವು ಕೂಡಲೇ ಶಾಸಕರು ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು ಕೆಲಸವನ್ನು0 ತೀವ್ರಗೊಳಿಸಬೇಕು ಎಂದರು.
ಹೋರಾಟ ಸಮಿತಿ ಮುಖಂಡ ಎಚ್. ಆರ್. ತಿಮ್ಮಯ್ಯ ಮಾತನಾಡಿ, ಈ ಮೊದಲು ನಮ್ಮ ವಾಣಿವಿಲಾಸ ಸಾಗರಕ್ಕೆ ಭದ್ರಾದಿಂದ 5 ಟಿಎಂಸಿ ನೀರು ಹರಿಸಲಾಗುವುದು ಎಂಬುದಾಗಿ ಹೇಳಲಾಗುತ್ತಿತ್ತು, ಈಗ ಪರಿಷ್ಕರಣೆ ಮಾಡಿ 2ಟಿಎಂಸಿ ನೀರು ಎನ್ನಲಾಗುತ್ತಿದೆ ಹೀಗಾದರೆ ಈ ನೀರು ಚಿತ್ರದುರ್ಗ ಚಳ್ಳಕೆರೆಗೆ ಕುಡಿಯಲು ಸಾಕಾಗುವುದಿಲ್ಲ. ಅಲ್ಲದೆ ಭದ್ರಾ ಜಲಾಶಯದಲ್ಲಿ ಇನ್ನು ಹೆಚ್ಚುವರಿ ನೀರು ಇದ್ದರೂ ವೈ ಜಂಕ್ಷನ್‌ನಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ ಎಂಬ ಕಾರಣಕ್ಕೆ ಅಲ್ಲಿಯ ರೈತರ ಒತ್ತಾಯಕ್ಕೆ ಮಣಿದು ನಾಲೆಯಲ್ಲಿ ನೀರು ನಿಲ್ಲಿಸಲಾಗಿದೆ.
ಇದರಿಂದ ನಮಗೆ ತುಂಬಾ ನಷ್ಟ ಉಂಟಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕೇವಲ 102 ಅಡಿಗೆ ನಾವು ತೃಪ್ತಿ ಪಟ್ಟುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಮೇಲೆ ಒತ್ತಡ ತಂದು ವಾಣಿವಿಲಾಸ ಸಾಗರಕ್ಕೆ ಕೃಷಿಗೆ ನೀರು ಹರಿಸಿಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ಹೋರಾಟ ಸಮಿತಿ ಮುಖಂಡರುಗಳಾದ ಆಲೂರು ಸಿದ್ಧರಾಮಣ್ಣ, ಬಬ್ಬೂರು ಸುರೇಶ್, ಕಂದಿಕೆರೆ ಸುರೇಶ್ ಬಾಬು, ಜಿ.ಪಂ.ಸದಸ್ಯ ನಾಗೇಂದ್ರನಾಯ್ಕ, ಆಲೂರು ರಾಮಣ್ಣ, ಆದಿವಾಲ ಮಣಿ, ವಿಶ್ವನಾಥ್ ವಿವಿ ಪುರ, ಆರ್.ಕೆ. ಗೌಡ ಬೋಚಾಪುರ, ಜಗದೀಶ್ ದರೇದಾರ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.