Advertisement

ಹಿರಿಯರ ಊರಿನ ವಾಚನಾಲಯ ಎಲ್ಲರಿಗೂ ಅಚ್ಚು ಮೆಚ್ಚು

02:48 PM Oct 27, 2019 | Naveen |

ಹಿರಿಯೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಅತ್ಯಮೂಲ್ಯ. ಗ್ರಂಥಾಲಯದಲ್ಲಿನ ಪುಸ್ತಕಗಳಿಂದ ಉತ್ತಮ ಜ್ಞಾನ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ನಗರದ ಶ್ರೀ ಕೃಷ್ಣರಾಜೇಂದ್ರ ಸಾರ್ವಜನಿಕ ಗ್ರಂಥಾಲಯ ತನ್ನದೇ ಆದ ಕೈಂಕರ್ಯದಲ್ಲಿ ತೊಡಗಿದೆ.

Advertisement

1975ರಲ್ಲಿ ಆರಂಭಗೊಂಡಿರುವ ಈ ಗ್ರಂಥಾಲಯ, ಇದುವರೆಗೆ ನಿರಂತರ ಸೇವೆ ನೀಡುತ್ತಿದೆ. ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿದ್ದ ಗ್ರಂಥಾಲಯ, ಜಯನಗರ ಬಡಾವಣೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸುಸಜ್ಜಿತವಾದ ಸ್ವಂತ ಕಟ್ಟಡ ಹೊಂದಿದೆ. ಗ್ರಂಥಾಲಯದಲ್ಲಿ ಉತ್ತಮವಾದ ಗಾಳಿ-ಬೆಳಕು, ಪಕ್ಕದಲ್ಲಿ ಉದ್ಯಾನವನ ಇದೆ. ಹಾಗಾಗಿ ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಉದ್ಯಾನವನದಲ್ಲಿ ವಾಯುವಿಹಾರ ಮಾಡಿ ಗ್ರಂಥಾಲಯದಲ್ಲಿ ಪುಸ್ತಕ, ಪತ್ರಿಕೆ ಓದಿ ಮನೆಗೆ ತೆರಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ.

ಗ್ರಂಥಾಲಯ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಪುಸ್ತಕ ಪ್ರೇಮಿಗಳಿಗೆ ಆಸನ, ಟೇಬಲ್‌, ಫ್ಯಾನ್‌, ಶುದ್ಧ ಕುಡಿಯುವ ನೀರು, ಸೋಲಾರ್‌ ವ್ಯವಸ್ಥೆ ಇದೆ. ಪುಸ್ತಕಗಳನ್ನು ವ್ಯವಸ್ಥಿತವಾಗಿ ಇಡಲು ಉತ್ತಮ ಕಪಾಟುಗಳಿವೆ. ಗ್ರಂಥಾಲಯದಲ್ಲಿ ಪ್ರವೇಶದ್ವಾರದ ಒಳಾಂಗಣದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ದೈನಂದಿನ, ಮಾಸಪತ್ರಿಕೆ ಹಾಗೂ ವಾರಪತ್ರಿಕೆಗಳನ್ನು ಕಟ್ಟಡದ ಮುಖ್ಯ ಹೊರಾಂಗಣದಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ.

ಕಥೆ, ಕವನ ಕಾದಂಬರಿ, ಸಾಹಿತ್ಯ, ಗ್ರಂಥಗಳನ್ನು ಓದಲು ಮೇಲಿನ ಮಹಡಿಯಲ್ಲಿ ವ್ಯವಸ್ಥೆ ಇದೆ. 50 ರಿಂದ 60 ಜನರು ಏಕಕಾಲದಲ್ಲಿ ಕುಳಿತು ಪುಸ್ತಕಗಳನ್ನು ಓದುವ ಸೌಲಭ್ಯ ಇಲ್ಲಿದೆ. ಯಾವ್ಯಾವ ಪುಸ್ತಕಗಳಿವೆ ಇಲ್ಲಿ?: ಕಥೆ, ಕವನ, ಕಾವ್ಯ, ಸಾಹಿತ್ಯ, ನಾಟಕ, ಮಕ್ಕಳ ಕಥೆಗಳು, ಆಧ್ಯಾತ್ಮಿಕ ಪುಸ್ತಕ, ರಾಮಾಯಣ, ಮಹಾಭಾರತ, ಶಬ್ದಕೋಶಗಳು, ಆತ್ಮಕಥೆಗಳು, ಹಾಸ್ಯಪುಸ್ತಕಗಳು, ದೇಶಭಕ್ತರ, ಕವಿಗಳ ಜೀವನ ಚರಿತ್ರೆ, ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು, ತತ್ವಶಾಸ್ತ್ರ, ಮನಃ ಶಾಸ್ತ್ರ, ಪತ್ರಿಕೋದ್ಯಮ ಪುಸ್ತಕಗಳು ಸ್ಪರ್ಧಾತ್ಮಕ ಪತ್ರಿಕೆಗಳು ಮತ್ತು ಪುಸ್ತಕಗಳು, ಎಸ್‌ಎಸ್‌ ಎಲ್‌ಸಿ ನಂತರ ಪದವಿ. ಸ್ನಾತಕೋತ್ತರ ಪದವಿವರೆಗಿನ ಪಠ್ಯಾಧಾರಿತ ಪುಸ್ತಕಗಳು, ಸರ್ಕಾರಿ ಆದೇಶಗಳನ್ನು ಒಳಗೊಂಡಂತೆ ಒಟ್ಟು 39,683 ಪುಸ್ತಕಗಳನ್ನು ಈ ಗ್ರಂಥಾಲಯದಲ್ಲಿವೆ.

2987 ವಾಚನಾಸಕ್ತರು ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ. ಸದಸ್ಯತ್ವವುಳ್ಳವರು ಪುಸ್ತಕಗಳನ್ನು ಮನೆಗೆ ಕೊಂಡೊಯ್ಯಬಹುದು. ಎಲ್ಲ ವರ್ಗದ ಜನರು ಗ್ರಂಥಾಲಯಕ್ಕೆ ಬರುತ್ತಾರೆ. ಪ್ರತಿ ವರ್ಷ ಆಗಸ್ಟ್‌ 12 ರಂದು ಪದ್ಮಶ್ರೀ ಎಸ್‌. ಆರ್‌. ರಂಗನಾಥ್‌ ಸ್ಮರಣಾರ್ಥಗ್ರಂಥಾಲಯ ದಿನವನ್ನು ಆಚರಿಸಲಾಗುತ್ತದೆ. ಅಂದು ಮಕ್ಕಳಿಗೆ ಚಿತ್ರಕಲೆ, ಗ್ರಂಥಾಲಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗುತ್ತಿದೆ. ಶ್ರೀಕೃಷ್ಣರಾಜೇಂದ್ರ ಸಾರ್ವಜನಿಕ ಗ್ರಂಥಾಲಯದಲ್ಲಿ ಉತ್ತಮ ವ್ಯವಸ್ಥೆ ಇದ್ದು, ವಾಚನ-ಅಧ್ಯಯನಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next