ಹಿರಿಯೂರು: ಬೀದಿಬದಿ ವ್ಯಾಪಾರಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಬೀದಿಬದಿ ವ್ಯಾಪಾರಿಗಳ ಸುರಕ್ಷತೆ ಕಾಪಾಡುವುದರ ಜೊತೆಗೆ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ ಎಂದು ನಗರಸಭೆ ಆಯುಕ್ತ ಎಚ್. ಮಹಂತೇಶ್ ಹೇಳಿದರು.
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳು ತಪ್ಪದೇ ತಮ್ಮ ಹೆಸರುಗಳನ್ನು ನಗರಸಭೆಯಲ್ಲಿ ನೋಂದಾಯಿಸಿಕೊಂಡು ಗುರುತಿನ ಚೀಟಿಯನ್ನು ಪಡೆಯತಕ್ಕದ್ದು. ನೋಂದಾಯಿತ ವ್ಯಾಪಾರಿಗಳಿಗೆ ಸರ್ಕಾರದ ವತಿಯಿಂದ ಅಗತ್ಯ ಸಾಲ-ಸೌಲಭ್ಯ ಹಾಗೂ ವಿವಿಧ ತರಬೇತಿಗಳನ್ನು ನೀಡುವುದರ ಜೊತೆಗೆ ಸುರಕ್ಷಿತ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಯೋಜನೆ ಸರ್ಕಾರದ ಹಂತದಲ್ಲಿದ್ದು, ಸರ್ಕಾರದ ಆದೇಶ ಬಂದ ನಂತರ ನಮ್ಮ ನಗರಸಭೆಯಿಂದ ಈ ಬಗ್ಗೆ ಡೀಟೈಲ್ ಪ್ರಾಜೆಕ್ಟ್ ರಿಪೋರ್ಟ್ (ಡಿಪಿಆರ್) ಸಿದ್ಧಪಡಿಸಲಾಗುವುದು. ಬೀದಿಬದಿ ವ್ಯಾಪಾರಿಗಳಿಗೆ ಸುರಕ್ಷಿತವಾದ ಹಾಗೂ ಜನನಿಬಿಡ ಪ್ರದೇಶದಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಉಚಿತ ಶೆಡ್, ನೀರು ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ಇಲ್ಲಿಯವರೆಗೆ ನಮ್ಮ ಸರ್ವೆ ಪ್ರಕಾರ ಸುಮಾರು 560 ಬೀದಿವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅವರಿಗೆಲ್ಲರಿಗೂ ನಿಗದಿತ ಸ್ಥಳದಲ್ಲಿ ವ್ಯಾಪಾರ ವಹಿವಾಟಿಗೆ ಆವಕಾಶ ಕಲ್ಪಿಸಲಾಗುವುದು. ಯಾವುದೇ ಕಾರಣಕ್ಕೂ ಬೇರೊಬ್ಬ ವ್ಯಕ್ತಿಯ ಹೆಸರನ್ನು ನೋಂದಾಯಿಸದೇ ಪ್ರಾಮಾಣಿಕವಾಗಿ ತಮ್ಮ ಹೆಸರನ್ನೇ ನೋಂದಾಯಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಡಳಿತದ ಪ್ರತಿನಿಧಿ ಸೌಮ್ಯ, ನಗರಸಭೆ ವ್ಯವಸ್ಥಾಪಕಿ ಲೀಲಾವತಿ, ಸಿಎಒ ಕರುಣ, ಎನ್‌ಜಿಒ ಪ್ರತಿನಿಧಿಯಾದ ರೆಡ್‌ಕ್ರಾಸ್ ಚೇರಮನ್ ಎಚ್.ಎಸ್. ಸುಂದರರಾಜ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಬೀದಿಬದಿ ವ್ಯಾಪಾರಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.