Advertisement

ಸರ್ಕಾರಿ ಕಾಲೇಜು ಸ್ಥಳಾಂತರ ಈಗ ಅಧಿಕೃತ

11:57 AM Jun 27, 2019 | Naveen |

ಹಿರಿಯೂರು: ತಾಲೂಕಿನ ಜವನಗೊಂಡನಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಸ್ಥಳಾಂತರಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೊಸ ಆದೇಶ ಹೊರಡಿಸಿದ್ದಾರೆ. ಈ ಆದೇಶ ಜೂ. 25 ರಂದು ಕಾಲೇಜು ಪ್ರಾಂಶುಪಾಲರಿಗೆ ತಲುಪಿದೆ.

Advertisement

ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಶೇಖರ ರಾಜ್‌ ಅವರನ್ನು ಕೆಸ್ತೂರಿನಲ್ಲಿ ಅನ್ಯ ಕಾರ್ಯ ನಿಮಿತ್ತ ಪ್ರಭಾರಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕೆಸ್ತೂರಿಗೆ ಹುದ್ದೆ ಸಮೇತ ವರ್ಗಾವಣೆ ಮಾಡ್ಫಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು, ಹಳೆ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಹಳ್ಳಿಗಳ ಜನರ ವಿರೋಧವನ್ನೂ ಲೆಕ್ಕಿಸದೆ ಸರ್ಕಾರ, ಕಾಲೇಜನ್ನು ಸ್ಥಳಾಂತರ ಮಾಡಿದೆ. ಕಾಲೇಜು ಸ್ಥಳಾಂತರ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿ ಸ್ವಾಮಿ ವಿವೇಕಾನಂದ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಜೂ. 10 ರಂದು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಧರಣಿಯಲ್ಲಿ ಭಾಗವಹಿಸಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಕಾಲೇಜು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು.

ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಕಾಲೇಜು ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಆದೇಶ ಹೊರಡಿಸುವ ಮೊದಲು ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಲೇಜನ್ನು ಇಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನ ಮಾಡುವುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹೇಳಿದ್ದಾರೆ.

ಸ್ಥಳೀಯ ಮುಖಂಡರ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ ರಾಜ್ಯ ಸರ್ಕಾರ, ಕಾಲೇಜು ಸ್ಥಳಾಂತರ ಆದೇಶ ಹೊರಡಿಸಿದೆ. ಕಾಲೇಜನ್ನು ಜವನಗೊಂಡನಹಳ್ಳಿಯಲ್ಲೇ ಉಳಿಸಲು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಬಿವಿಪಿ ಪ್ರಮುಖರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next