ಹಿರಿಯೂರು: ಒತ್ತಡ ಮುಕ್ತ ಬದುಕಿಗೆ ಸಂಗೀತ ದಿವ್ಯೌಷಧಯಾಗಿದೆ ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ಡಿ. ಧರಣೇಂದ್ರಯ್ಯ ಹೇಳಿದರು.
ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ, ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 6.30 ಕೋಟಿ ಜನಸಂಖ್ಯೆ ಇದ್ದು ಎಲ್ಲರೂ ಒತ್ತಡದಿಂದಲೇ ಬದುಕುತ್ತಿದ್ದಾರೆ. ಒಂದುಕಡೆ ಅತಿವೃಷ್ಟಿಯಾದರೆ, ಇನ್ನೊಂದೆಡೆ ಅನಾವೃಷ್ಟಿಯಿಂದ ಕುಡಿಯಲು ನೀರಿಲ್ಲದೆ ಹಳ್ಳಿಗಳ ಜನರು ತತ್ತರಿಸಿದ್ದಾರೆ. ಸಾಮಾಜಿಕ ಸಂಬಂಧ ಹಾಗೂ ಬಾಂಧವ್ಯ ಗಟ್ಟಿಯಾಗಬೇಕಾದರೆ ಸಾಹಿತ್ಯ, ಸಂಗೀತ, ರಂಗಕಲೆ ಬೇಕು. ಪಂಡಿತ್ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಪಿ. ಕಾಳಿಂಗ ರಾವ್, ಮೈಸೂರು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ, ಗಂಗೂಬಾಯಿ ಹಾನಗಲ್ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ. ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತ ನೋವು, ಸಂಕಟ ವೇದನೆನ್ನು ದೂರ ಮಾಡಿ ಬದುಕಿನಲ್ಲಿ ನೆಮ್ಮದಿಯನ್ನು ತಂದುಕೊಡುತ್ತದೆ. ಸಂಗೀತಕ್ಕೆ ಯಾವುದೇ ರಾಗ, ತಾಳ ಮೊದಲು ಇರಲಿಲ್ಲ. ಹಕ್ಕಿಗಳ ಚಿಲಿಪಿಲಿ ಗಾನ, ನದಿಗಳ ಕಲರವಗಳೇ ರಾಗ, ತಾಳವಾಗಿತ್ತು. ಎಂಟನೇ ಶತಮಾನದಲ್ಲಿ ಬದುಕಿದ್ದ ಮಹರ್ಷಿ ಮಾತಂಗ ಮುನಿಯವರು ಮೊದಲ ಬಾರಿ ಸಂಗೀತಕ್ಕೆ ಹೊಸ ರಾಗ, ತಾಳಗಳನ್ನು ನೀಡಿದರು. ಅವುಗಳ ಆಧಾರದ ಮೇಲೆ ಇಂದು ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಪಾಶ್ಚಾತ್ಯ ಸಂಗೀತ ರೂಪುಗೊಂಡಿದೆ. ಸಂಗೀತಕ್ಕೆ ಮಹರ್ಷಿ ಮಾತಂಗ ಮುನಿಯವರ ಕೊಡುಗೆ ಅಪಾರ ಎಂದರು.
ಅಧ್ಯಕಗ್ಷತೆ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಗಾಯತ್ರಿ ಅಕ್ಕ ಮಾತನಾಡಿ, ಸಂಗೀತಕ್ಕೆ ಸೋಲದ ಮನಸ್ಸುಗಳಿಲ್ಲ. ಜಾನಪದ ಗೀತೆ, ಜಾನಪದ ಕಲೆ, ದೇಶಭಕ್ತಿ ಗೀತೆ, ದಾಸರ ಪದ, ವಚನಗಳು, ಒಗಟುಗಳು, ಗಾದೆಗಳು ಬದುಕಿನಲ್ಲಿ ಉತ್ತಮ ಸಂಸ್ಕಾರ ಕಲಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಸಂಗೀತ ವಿದ್ವಾನ್ ಆರ್. ತಿಪ್ಪೇಸ್ವಾಮಿ ಹಾಗೂ ಸಂಗಡಿಗರು ಸುಗಮ ಸಂಗೀತ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಕಿರಣ್ ಮಿರಜ್ಕರ್, ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಸೌಮ್ಯ ಪ್ರಶಾಂತ್, ಜೆ. ನಿಜಲಿಂಗಪ್ಪ, ಯರದಕಟ್ಟೆ ತಿಪ್ಪೇಸ್ವಾಮಿ, ಟಿ. ಶಾಂತಣ್ಣ, ಎನ್. ಜಗದಾಂಬ, ಕವಿತಾಧರಣೇಂದ್ರಯ್ಯ, ಎನ್. ಬಸವರಾಜ್, ಬಿ.ಟಿ. ಶಂಕರಲಿಂಗಯ್ಯ, ತಿಪ್ಪೇಶ್, ಧೃತಿ ಮತ್ತಿತರರು ಪಾಲ್ಗೊಂಡಿದ್ದರು.