ಹೆಬ್ರಿ : ಆತ್ರಾಡಿ ಗ್ರಾ.ಪಂ. ವ್ಯಾಪ್ತಿಯ ಮದಗ ಅಂಗನವಾಡಿ ಬಳಿ ಇರುವ ಮನೆಯೊಂದರಲ್ಲಿ ತಾಯಿ ಮತ್ತು ಮಗಳ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದು, ಅವರನ್ನು ಕತ್ತು ಹಿಸುಕಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಆಂಧ್ರ ಮೂಲದ ಚೆಲುವಿ (28) ಮತ್ತಾಕೆಯ ಮಗಳು ಪ್ರಿಯಾ (10) ಮೃತಪಟ್ಟವರು. ರವಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆಯ ಮಧ್ಯೆ ಈ ಘಟನೆ ಸಂಭವಿಸಿದೆ.
ಚೆಲುವಿಯ ತಾಯಿ ಹಾಗೂ ಅವರ ಪುತ್ರ ಪ್ರೀತಮ್ (14) ತನ್ನ ಸಂಬಂಧಿಕರ ಮನೆ ಭದ್ರಾವತಿಗೆ ಹೋಗಿದ್ದರು. ತಾಯಿ-ಮಗಳು ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು.
ಚೆಲುವಿಯ ತಾಯಿ ಮುನಿಯಮ್ಮ ಬೆಳಗ್ಗೆ 9ಗಂಟೆ ಹೊತ್ತಿಗೆ ಚೆಲುವಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಚಾರಿಸಿ ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ಮಲಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಚೆಲುವಿಯ ಮೂಗು ಮತ್ತು ಬಾಯಿಯಿಂದ ರಕ್ತ ಬಂದಿರುವುದು ಕಂಡುಬಂದಿದೆ. ಪ್ರಿಯಾಳ ಕುತ್ತಿಗೆ ಹಿಸುಕಿದ ಸ್ಥಿತಿಯಲ್ಲಿತ್ತು.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯ್ಕ , ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಸೇರಿದಂತೆ ಹಿರಿಯಡ್ಕ ಪೊಲೀಸರು ಹಾಗೂ ಠಾಣಾಧಿಕಾರಿ ಸುನಿಲ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
ಅನ್ಯಧರ್ಮೀಯನ ಸಂಪರ್ಕ
ಚೆಲುವಿ ಹದಿನೈದು ವರ್ಷದ ಹಿಂದೆ ಮಂಚಿಯ ಸುಬ್ರಹ್ಮಣ್ಯ ಅವರನ್ನು ಮದುವೆಯಾಗಿದ್ದು, ಮಣಿಪಾಲದ ಎಣ್ಣೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ರಶೀದ್‌ನೊಂದಿಗೆ ಪರಿಚಯವಾಗಿದ್ದು, ಈ ವಿಚಾರ ಸುಬ್ರಹ್ಮಣ್ಯನಿಗೆ ತಿಳಿದ ಬಳಿಕ ಆತ ಪತ್ನಿಯನ್ನು ಬಿಟ್ಟಿದ್ದ. ಅನಂತರ ಚೆಲುವಿ ರಶೀದ್‌ನೊಂದಿಗೆ ಮುಂಬಯಿಗೆ ಹೋಗಿ 2 ವರ್ಷಗಳ ಕಾಲ ಅಲ್ಲಿದ್ದು, ಬಳಿಕ ಕಾರ್ಕಳದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈ ಸಂದರ್ಭದಲ್ಲಿ 1 ಗಂಡು ಹಾಗೂ 1 ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅನಂತರದ ದಿನಗಳಲ್ಲಿ ಮತ್ತೆ ಅವರಲ್ಲಿ ಮನಸ್ತಾಪ ಉಂಟಾಗಿ ಚೆಲುವಿ ಗಂಡನನ್ನು ಬಿಟ್ಟು ತನ್ನ ಆತ್ರಾಡಿಯ ತಾಯಿ ಮನೆಗೆ ಬಂದು ತಂಗಿದ್ದರು.