Advertisement

ಖಾಲಿ ಹುದ್ದೆಗೆ ಶೀಘ್ರ ಸಿಬ್ಬಂದಿ ನೇಮಕ

09:47 PM Mar 03, 2020 | Lakshmi GovindaRaj |

ಬರಗೂರು: ರಾಜ್ಯದಲ್ಲೇ ತುಮಕೂರು ಜಿಲ್ಲೆ ರಸ್ತೆ ಅಪಘಾತದಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಸಲಹೆ ನೀಡಿದರು. ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದ ಉಪಪೋಲೀಸ್‌ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಸಿಬ್ಬಂದಿ ನೇಮಿಸುವ ಭರವಸೆ: ಕುಡಿದು ವಾಹನ ಚಲಾಯಿಸುವುದು, ಮೊಬೈಲ್‌ ಬಳಕೆ, ಅತೀ ವೇಗದಿಂದ ಶೇ.95ರಷ್ಟು ಅಪಘಾತಗಳು ಆಗುತ್ತಿದೆ. 3-4 ವರ್ಷಗಳಲ್ಲಿ ಜಿಲ್ಲೆಯ ಠಾಣೆಗಳಿಗೆ ಸುಮಾರು 200 ಸಿಬ್ಬಂದಿಯನ್ನು ಭರ್ತಿ ಮಾಡಲಾಗುವುದು. ಬರಗೂರು ಉಪಠಾಣೆ ತಾಲೂಕಿನಲ್ಲಿ ಹೆಚ್ಚು ಗ್ರಾಮ ಹೊಂದಿರುವ ಠಾಣೆಯಾಗಿದ್ದು, ಹೆಚ್ಚಿನ ಸಿಬ್ಬಂದಿ ನೇಮಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಸಿ.ಸಿ.ಟಿವಿ ಅಳವಡಿಸುವುದರಿಂದ ಕಳ್ಳರು, ದರೋಡೆಕೋರರನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಕಳ್ಳರು, ದರೋಡೆಕೋರರು ಸಿಕ್ಕಿದರೆ ಸಾರ್ವಜನಿಕರು ಥಳಿಸಬಾರದು. ತಕ್ಷಣವೇ ಪೊಲೀಸರಿಗೆ ಒಪ್ಪಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ: ಡಿವೈಎಸ್ಪಿ ಕುಮಾರಪ್ಪ ಮಾತನಾಡಿ, ಹಳ್ಳಿಗಳಲ್ಲಿ ಮದ್ಯ ಅಕ್ರಮ ಮಾರಾಟ ದೊಡ್ಡ ಪಿಡುಗಾಗಿದ್ದು, ಪ್ರತಿ ಪೊಲೀಸ್‌ ಠಾಣೆ ಸಿಬ್ಬಂದಿ ಈ ಬಗ್ಗೆ ಕ್ರಮ ಕೈಗೊಳ್ಳಲು ಸಿದ್ಧವಾಗಿರಬೇಕು. ಪ್ರಸ್ತುತ ಪಟ್ಟನಾಯಕನಹಳ್ಳಿ ಠಾಣೆಯಲ್ಲಿ 2018ರಲ್ಲಿ 34 ಪ್ರಕರಣ, 2019ರಲ್ಲಿ 7 ಜೂಜು, 22 ಗ್ಯಾಂಬ್ಲಿಂಗ್‌ ಕೇಸ್‌, 4 ಒ.ಸಿ ಕೇಸ್‌, 2020ರಲ್ಲಿ 9 ಜೂಜು ಪ್ರಕರಣ ದಾಖಲಾಗಿದೆ.

ಈಗಾಗಲೇ ಗ್ರಾಮದ ಸಮಸ್ಯೆಗಳ ಬಗ್ಗೆ ಅರಿವಾಗಿದೆ. ಆಯಾ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಬಗೆಹರಿಸಲು ಶಿಫಾರಸು ಮಾಡಲಾಗುವುದು ಎಂದು ಹೇಳಿದರು. ಶಿರಾ ಸಿಪಿಐ ಶಿವಕುಮಾರ್‌, ಪಟ್ಟನಾಯಕನಹಳ್ಳಿ ಪಿಎಸ್‌ಐ ವಿ.ನಿರ್ಮಲಾ, ತಾವರೆಕೆರೆ ಪಿಎಸ್‌ಐ ಮಹಾಲಕ್ಷ್ಮೀ, ಬರಗೂರು ಉಪ ಪೊಲೀಸ್‌ ಠಾಣಾ ಮುಖ್ಯಪೇದೆ ಜುಂಜಣ್ಣ, ಗ್ರಾಪಂ ಅಧ್ಯಕ್ಷೆ ಕಾಮಾಕ್ಷಿ, ದಿ ಫ್ಲಾರೆನ್ಸ್‌ ಪಬ್ಲಿಕ್‌ ಶಾಲೆ ಸಂಸ್ಥಾಪಕ ಅಧ್ಯಕ್ಷ ಕೆ.ಬಸವರಾಜು,

Advertisement

ರಂಗ ಕಲಾವಿದ ಕೆ.ಭೂತರಾಜು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲ್ಲೂರಯ್ಯ, ಕರವೇ ಅಧ್ಯಕ್ಷ ಲತೀಫ್, ಹಂದಿಕುಂಟೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ನಾರಾಯಣಪ್ಪ, ಡಿ.ಎನ್‌.ಪರಮೇಶ್‌ ಗೌಡ, ಪ್ರಗತಿಪರ ಕೃಷಿಕ ಯಲಪೇನಹಳ್ಳಿ ಕೃಷ್ಣೇಗೌಡ, ಸಾಹಿತಿ ಕೆ.ನರಸಪ್ಪ, ಬಿ.ಹಲುಗುಂಡೇಗೌಡ, ಲಕ್ಕನಹಳ್ಳಿ ಮಂಜುನಾಥ್‌, ಪಕೃದ್ದೀನ್‌, ಓಂಕಾರ್‌ ಇತರರು ಇದ್ದರು.

ಸಿ.ಸಿ. ಟಿವಿ ಅಳವಡಿಸಿ: ಗ್ರಾಮದ ಹೊಸ ಬಡಾವಣೆಯ ದಲಿತ ಕಾಲನಿ, ಬಸ್‌ ನಿಲ್ದಾಣ, ಮುಖ್ಯ ಬೀದಿಗಳಲ್ಲಿ ವಂಶಿಕೃಷ್ಣ ಸಂಚರಿಸಿ, ಸಾರ್ವಜನಿಕರಿಗಾಗುವ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಚಿನ್ನಾಭರಣಗಳ ಅಂಗಡಿ, ಬೂಸಾ ಅಂಗಡಿಗಳಲ್ಲಿ ಸಿ.ಸಿ. ಟಿವಿ ಅಳವಡಿಸಿಕೊಂಡು ಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು. ದಿ ಫ್ಲಾರೆನ್ಸ್‌ ಪಬ್ಲಿಕ್‌ ಶಾಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಸೋಮವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದರು.

“ಉದಯವಾಣಿ’ ವರದಿ ಪ್ರತಿಧ್ವನಿ: ಬರಗೂರಿನ ಉಪಪೊಲೀಸ್‌ ಠಾಣೆ ನೂತನ ಕಟ್ಟಡ ಕಾಮಗಾರಿ, ಸಿಬ್ಬಂದಿ ಕೊರತೆ ನೀಗಿಸುವ ಹಾಗೂ ಉಪಠಾಣೆ ಮೇಲ್ದರ್ಜೆಗೇರಿಸುವ ಬಗ್ಗೆ “ಉದಯವಾಣಿ’ಯಲ್ಲಿ ಪ್ರಕಟವಾಗಿರುವ ವರದಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಿದೆ.

ಸಮಸ್ಯೆ ನಿವಾರಣೆ ಮಾತಿಗೆ ಸೀಮಿತವಾಗಬಾರದು. ಮೇಲಧಿಕಾರಿಗಳೊಂದಿಗೂ ಚರ್ಚಿಸಿ ಬೇಡಿಕೆ ಬಗೆಹರಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ದನಕರು ಕದಿಯುವ, ಶಾಲಾ ಆವರಣಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಜ್ಞಾನಜ್ಯೋತಿ ಕಾಲೇಜು ಪ್ರಾಂಶುಪಾಲ ಡಿ.ಎನ್‌.ಪರಮೇಶ್‌ಗೌಡ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next